” ಮುಖ್ಯಮಂತ್ರಿಗಳೇ ಆರೋಗ್ಯದ ಗ್ಯಾರಂಟಿ ನೀಡಿ” ಕುಪ್ಪೆಪದವು ಹೋರಾಟದಲ್ಲಿ ಮುನೀರ್ ಕಾಟಿಪಳ್ಳ ಮನವಿ

ರಾಜ್ಯ

ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಕುಪ್ಪೆಪದವು ಇದರ ಆಶ್ರಯದಲ್ಲಿ ಇಂದು ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು 24 ಗಂಟೆ ಲಭ್ಯವಿರಲು ಆಗ್ರಹಿಸಿ ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿವೈಎಪ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಮಾತನಾಡುತ್ತಾ ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರವು ಕುಲವೂರು,ಕಿಲಿಂಜಾರು, ಮುತ್ತೂರು,ಪದರಂಗಿ ಸಹಿತ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಏಕೈಕ ಸರ್ಕಾರಿ ಆರೋಗ್ಯ ಕೇಂದ್ರವಾಗಿದೆ.ಕೂಲಿಕಾರರು ಬೀಡಿ,ಕಟ್ಟಡ ಮತ್ತು ಬಡವ,ಕೆಳ ಮಧ್ಯಮ ವರ್ಗದವರೇ ಇಲ್ಲಿ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ನಗರದಿಂದ ಬಹಳಷ್ಟು ದೂರದಲ್ಲಿರುವ ಇಂತಹ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವು ಸರ್ಕಾರಿ ರಜೆ ಮತ್ತು ರಾತ್ರಿ ಹಗಲುಗಳೆನ್ನದೆ 24 ಗಂಟೆ ಕಾರ್ಯನಿರ್ವಹಿಸಬೇಕು. ಈ ಆರೋಗ್ಯ ಕ್ಷೇತ್ರದ ಸಮಸ್ಯೆಯು ಜನತೆಯನ್ನು ನಿರಂತರವಾಗಿ ಬಾಧಿಸುತ್ತಿರುವ ಸಮಸ್ಯೆಯಾಗಿದ್ದು ಕಳೆದ ಕೊರೋನ ಕಾಲದಲ್ಲಿ ಇದರ ಸಮಸ್ಯೆಯ ಗಂಭೀರ ಸ್ವರೂಪವನ್ನು ನಾವು ಕಂಡಿದ್ದೇವೆ. ಆದರೆ ಅದರ ನಂತರದಲ್ಲಿಯೂ ಸರಕಾರಗಳು ಜನತೆಯ ಆರೋಗ್ಯದ ಹಕ್ಕಿನ ಕುರಿತು ಗಂಭೀರವಾಗಿ ಪರಿಗಣಿಸಿಲ್ಲ. ಬ್ರಿಟಿಷರಿಂದ ರಚನೆಯಾಗಿರುವ ಜಿಲ್ಲೆಯ ಏಕೈಕ ಸರ್ಕಾರಿ ಆಸ್ಪತ್ರೆ ವೆನ್ಲಾಕ್ ಆಸ್ಪತ್ರೆಯೂ ಈ ಹೊತ್ತಿಗೆ ಜನರಿಗೆ ಪೂರಕವಾಗುವಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬದಲಾಗಬೇಕಿತ್ತು, ಆದರೆ ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಮತ್ತು ಖಾಸಗಿ ಆಸ್ಪತ್ರೆಯ ಲಾಭಿಗಳಿಂದ ವೆನ್ಲಕ್ ಆಸ್ಪತ್ರೆಯೂ ಕೂಡ ಶ್ರೀಮಂತರ ಮಕ್ಕಳು ಕಲಿಯುವ ಕ್ಲಿನಿಕಲ್ ಲ್ಯಾಬೋರೇಟರಿಯಾಗಿದೆ.

ವೆನ್ಲಾಕಿನ ಬಡ ರೋಗಿಗಳನ್ನು ಪ್ರಯೋಗದ ವಸ್ತುವನ್ನಾಗಿಸಿ ಅನೇಕ ಖಾಸಗಿ ಆಸ್ಪತ್ರೆಗಳು ಬೆಳೆಯುತ್ತಿದೆ. ಇದರಿಂದಾಗಿ ಸರ್ಕಾರಿ ಆರೋಗ್ಯ ವ್ಯವಸ್ಥೆಯು ದುರ್ಬಲಗೊಂಡಿದೆ. ಈಗಿನ ರಾಜ್ಯ ಸರಕಾರ ಗ್ಯಾರೆಂಟಿ ಯೋಜನೆಗಳ ಮುಖಾಂತರ ಜನಪ್ರಿಯ ಸರಕಾರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳುವ ಈ ಕಾಲಕ್ಕೆ ಮಾನ್ಯ ಮುಖ್ಯಮಂತ್ರಿಗಳು ಜನತೆಗೆ ಆರೋಗ್ಯದ ಗ್ಯಾರಂಟಿಯನ್ನು ಜನತೆಗೆ ನೀಡಬೇಕು. ಜನತೆಗೆ ಪೂರಕವಾಗುವಂತೆ ಸರಕಾರಿ ಆರೋಗ್ಯದ ಕ್ಷೇತ್ರದಲ್ಲಿ ಬದಲಾವಣೆಗಳು ಆಗಬೇಕು ಎಂದರು.

ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಯಾದ ಮನೋಹರ್ ಶೆಟ್ಟಿ ಇವರು ಮಾತನಾಡುತ್ತಾ 1986 ರಲ್ಲಿ ಕುಪ್ಪೆಪದವು ಆಸು ಪಾಸಿನ ನಾಲ್ಕು ಗ್ರಾಮಗಳ ಜನತೆಗೆ ಸಹಕಾರಿಯಾಗಬೇಕು ಎಂಬ ನಿಟ್ಟಿನಲ್ಲಿ ಹೋರಾಟದ ಫಲವಾಗಿ ಈ ಗ್ರಾಮಕ್ಕೊಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಗಿನ ಸರ್ಕಾರ ನೀಡಿತು.ಆದರೆ ಈಗ ಆ ಆರೋಗ್ಯ ಕೇಂದ್ರದ ಸ್ಥಿತಿ ಸೋಚನಿಯವಾಗಿದ್ದು 1986 ರಲ್ಲಿ ಇದ್ದ ವ್ಯವಸ್ಥೆಯೂ ಕೂಡ ಈಗ ಆ ಆರೋಗ್ಯ ಕೇಂದ್ರದಲ್ಲಿ ಇಲ್ಲ. ವೈದ್ಯರು ಕೂಡ ರೋಗಿಗಳೊಂದಿಗೆ ವ್ಯವಹರಿಸುವ ರೀತಿಯು ರೋಗಿಯನ್ನೇ ಭಯಪಡಿಸುವಂತಿದೆ ಎಂದರು. ದಲಿತ ಮುಖಂಡರಾದ ಹರಿಯಪ್ಪ ಮುತ್ತೂರು ಇವರ ಮಾತನಾಡುತ್ತಾ ಆರೋಗ್ಯದ ಹಕ್ಕು ನಮಗೆ ಸಂವಿಧಾನದತ್ತವಾಗಿ ದೊರೆತ ಹಕ್ಕು.ಆದರೆ ಇಂದಿಗೂ ಕೂಡ ಆ ಹಕ್ಕು ಜನರಿಗೆ ದೊರಕದೇ ಇರುವುದು ಪ್ರಜಾಪ್ರಭುತ್ವ ಭಾರತದ ದುರಂತ ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ ಗುರುಪುರ ವಲಯ ಮುಖಂಡರಾದ ಸದಾಶಿವದಾಸ್ ಇವರು ಮಾತನಾಡುತ್ತಾ ಪ್ರಾಥಮಿಕ ಆರೋಗ್ಯ ಕೇಂದ್ರದ ಉಳಿವಿಗಾಗಿ ಕುಪ್ಪೆಪದವು ಪ್ರದೇಶದಲ್ಲಿ ಒಗ್ಗಟ್ಟಿನ ಹೋರಾಟವು ಆರಂಭವಾಗಿದ್ದು ಈ ಹೋರಾಟವು ಆರೋಗ್ಯದ ಸಮಸ್ಯೆಗೆ ಪರಿಹಾರ ಸಿಗುವವರೆಗೂ ನಿಲ್ಲದ ನಿರಂತರ ರಾಜಕೀಯ ರಹಿತ ಹೋರಾಟವಾಗಿರುತ್ತದೆ ಎಂದರು.

ಪ್ರತಿಭಟನೆಯಲ್ಲಿ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಕುಪ್ಪೆಪದವು ಇದರ ಸಂಚಾಲಕರಾದ ಎನ್ ಎ ಹಸನಬ್ಬ ,ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿವೈಎಫ್ಐ ನ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ಭೂಮಿ ಹೋರಾಟ ಸಮಿತಿ ಇರುವೈಲು ಇದರ ಕಾರ್ಯದರ್ಶಿಯಾದ ಆನಂದ ಪೂಜಾರಿ ಇರುವೈಲು, ಸಾಮಾಜಿಕ ಕಾರ್ಯಕರ್ತರದ ಬಾವಾ ಪದರಂಗಿ, ಬಹುಜನ ಮುಖಂಡರಾದ ಗೋಪಾಲ ಮುತ್ತೂರು. ಜೂನಿಯರ್ ಫ್ರೆಂಡ್ಸ್ ಕ್ಲಬ್ ಕುಪ್ಪೆಪದವು ಇದರ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್, ನ್ಯೂ ಫ್ರೆಂಡ್ಸ್ ಕ್ಲಬ್ ಕುಪ್ಪೆಪದವು ಇದರ ಅಧ್ಯಕ್ಷರಾದ ಮುಸ್ತಫ, ಸಾಮಾಜಿಕ ಕಾರ್ಯಕರ್ತರಾದ ಹಮೀದ್ ಮುತ್ತೂರು, ಅಂಬೇಡ್ಕರ್ ಯುವಕ ಸಂಘದ ಕಾರ್ಯದರ್ಶಿಯಾದ ರವಿ ಅಟ್ಟೆಪದವು, ಅಮ್ದ್ ಸೆಂಟರ್ ಕುಪ್ಪೆಪದವು ಇದರ ರಮೀಝ್ ಕಲೈ, ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಮಲಾ, ಉಪಾಧ್ಯಕ್ಷರಾದ ಮೊಹಮ್ಮದ್ ಶರೀಫ್ ಕಜೆ,ಮಾಜಿ ಅಧ್ಯಕ್ಷರಾದ ಡಿ.ಪಿ ಹಮ್ಮಬ್ಬ,ಕೆ ಪುರುಷೋತ್ತಮ್ ಸಮಾಗಮ ಕುಪ್ಪೆಪದವು, ಸಿಐಟಿಯು ಮುಖಂಡರಾದ ವಸಂತಿ ಕುಪ್ಪೆಪದವು, ನೋಣಯ ಗೌಡ ಮಿಜಾರ್, ಗ್ರಾಮ ಪಂಚಾಯತ್ ಸದಸ್ಯ ರಪೀಕ್ ಅಚಾರಿಜೋರ, ಕುಪ್ಪೆಪದವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಡಬ್ಲ್ಯೂಎಫ್ ಇದರ ಕಾರ್ಯದರ್ಶಿಯಾದ ಗಣೇಶ್ ಕಾಪಿಕಾಡ್ ಇವರು ಉಪಸ್ಥಿತರಿದ್ದರು.
ಕೊಂಪದವು ವೈದ್ಯಾಧಿಕಾರಿಯದ ಮತ್ತು ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ತಾತ್ಕಾಲಿಕ ವೈದ್ಯಾಧಿಕಾರಿ ಡಾ. ಚೈತನ್ಯ ಮತ್ತು ಕುಪ್ಪೆ ಪದವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಸವಿತಾ ಮೆನ್ದೋ ಲಿಕರ್ ಇವರು ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿದರು.