ಗುಜರಿ ಕೇಂದ್ರಗಳ ಸ್ಥಾಪನೆಗೆ ಎರಡು ಕಂಪನಿಗಳ ಜತೆ ಮಾತುಕತೆ ಪೂರ್ಣ; ರಾಜ್ಯದಲ್ಲಿ ಕನಿಷ್ಠ 6 ಘಟಕಗಳನ್ನು ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ

ರಾಷ್ಟ್ರೀಯ

ವರ್ಷ ತುಂಬಿರುವ ಖಾಸಗಿ ಹಾಗೂ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಕೇಂದ್ರಗಳ ಸ್ಥಾಪನೆ ಶ್ರೀಘ್ರದಲ್ಲೇ ಆರಂಭವಾಗಲಿದೆ. ಪ್ರಾಥಮಿಕವಾಗಿ 3 ಕಡೆ ಗುಜರಿ ಕೇಂದ್ರಗಳ ಸ್ಥಾಪಿಸಲು 3 ಕಂಪನಿಗಳು ಮುಂದೆ ಬಂದಿವೆ. ಇದರಲ್ಲಿ ನಿಯಮಾನುಸಾರ ಆಯ್ಕೆಯಾಗಿರುವ ಎರಡು ಕಂಪನಿಗಳ ಜತೆಗೆ ಮಾತುಕತೆ ಅಂತಿಮಗೊಂಡಿದ್ದು , ಎರಡು ಮೂರು ದಿನಗಳಲ್ಲಿ ಸರ್ಕಾರ ಅನುಮತಿ ನೀಡಲಿದೆ.ರಾಜ್ಯದಲ್ಲಿ 14.3 ಲಕ್ಷ ವಾಹನಗಳು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಗುಜರಿ ಕೇಂದ್ರ ಸ್ಥಾಪನೆಗೆ ಮಹೀಂದ್ರಾ ಕಂಪನಿ, ತುಮಕೂರಿನ ಕೊರಟಗೆರೆ ಬಳಿ ಸುಹಾಸ್ ಆಟೋ ಮೊಬೈಲ್ಸ್ ಕಂಪನಿ ಹಾಗೂ ಕೊಪ್ಪಳ ಬಳಿ ಗುಜರಿ ಕೇಂದ್ರ ತೆರೆಯಲು ಲಕ್ಷ್ಮೀ ಮಿಲ್ಸ್ ಆಸಕ್ತಿ ತೋರಿವೆ. ಮಹೀಂದ್ರಾ ಕಂಪನಿ ಹಾಗೂ ಸುಹಾಸ್ ಆಟೋ ಮೊಬೈಲ್ಸ್ ಜತೆಗೆ ಮಾತುಕತೆ ಪೂರ್ಣಗೊಂಡಿದ್ದು, ಅಧಿಕೃತ ಒಪ್ಪಂದ ಮಾತ್ರ ಬಾಕಿ ಉಳಿದಿದೆ.

ರಾಜ್ಯದಲ್ಲಿ ಕನಿಷ್ಠ 6 ಘಟಕಗಳನ್ನು ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಸುತ್ತಮುತ್ತಲ ಒಂದಷ್ಟು ಜಿಲ್ಲೆಗಳನ್ನು ಸೇರಿಸಿಕೊಂಡು ಒಂದು ಘಟಕದಂತೆ ಸ್ಥಾಪನೆ ಮಾಡಲಾಗುತ್ತದೆ. ಉದಾಹರಣೆಗೆ ವಿಜಯಪುರದ ಬಳಿ ಒಂದು ಘಟಕ ಸ್ಥಾಪನೆಯಾದರೆ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಜನ ಹಳೇ ಗಾಡಿಗಳನ್ನು ಅಲ್ಲಿಗೆ ಹಾಕಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತುಮಕೂರಿನ ಕೊರಟಗೆರೆ ಹಾಗೂ ದೇವನಹಳ್ಳಿ ಬಳಿ ಗುಜರಿ ಕೇಂದ್ರಗಳ ಸ್ಥಾಪನೆಗೆ ಎರಡು ಕಂಪನಿಗಳ ಜತೆ ಮಾತುಕತೆ ಪೂರ್ಣಗೊಂಡಿದ್ದು, ಶ್ರೀಘ್ರದಲ್ಲೇ ಅನುಮತಿ ನೀಡಲಾಗುತ್ತಿದೆ. ಕೊಪ್ಪಳ ಬಳಿ ಘಟಕ ಸ್ಥಾಪನೆಗೆ ಒಂದು ಕಂಪನಿ ಮುಂದೆ ಬಂದಿದ್ದು, ದಾಖಲೆ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರ 6 ಘಟಕ ಸ್ಥಾಪಿಸಲು ಹೇಳಿದ್ದು, ಅದರಂತೆ ಪ್ರಕ್ರಿಯೆ ಮುಂದುವರಿಯುತ್ತಿದೆ.

ಗುಜರಿಗೆ ಹಾಕಲು ವಾಹನಗಳನ್ನು ಕೊಡುವ ಮುನ್ನ ವಾಹನದ ಮೇಲೆ ಯಾವುದೇ ಕ್ರಿಮಿನಲ್ ಹಿನ್ನೆಲೆ, ಕೇಸ್ ಹಾಗೂ ದಂಡ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡಿಲ್ಲ ಎಂದು ಮಾಲೀಕ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಕೇಂದ್ರದ ಮಾಲೀಕರು, ಗುಜರಿಗೆ ಹಾಕಿದ ವಾಹನ ಚಾಸ್ಸಿ ನಂಬರನ್ನು ಜೋಪಾನವಾಗಿ 6 ತಿಂಗಳು ಇಟ್ಟಿರಬೇಕು. ವಾಹನದ ಎಲ್ಲ ಭೌತಿಕ ದಾಖಲೆಗಳನ್ನು 2 ವರ್ಷದವರೆಗೆ ಹಾಗೂ ಸ್ಕಾಯನ್ ದಾಖಲಾತಿಗಳನ್ನು 10 ವರ್ಷಗಳವರೆಗೆ ಸುರಕ್ಷಿತವಾಗಿ ಇಟ್ಟಿರಬೇಕು. ಅಧಿಕಾರಿಗಳು ಪರಿಶೀಲನೆ ಬಂದ ಸಂದರ್ಭದಲ್ಲಿ ದಾಖಲಾತಿಗಳನ್ನು ತೋರಿಸಬೇಕಾಗುತ್ತದೆ ಎಂದು ಷರತ್ತುಗಳನ್ನು ವಿಧಿಸಲಾಗಿದೆ.