ಪೊಲೀಸರೇ ಮುಚ್ಚಿ ಹಾಕಿದ್ದ ಪ್ರಕರಣ ಇದೀಗ ಬಟಾಬಯಲಾಗಿದೆ. ಕೆಲವು ದಿನಗಳ ಹಿಂದೆ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ರೆಕ್ಕೆ ಪುಕ್ಕ ಸೇರಿ ಸಂತ್ರಸ್ತೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸುವಷ್ಟರ ಮಟ್ಟಿಗೆ ಪ್ರಕರಣ ಬೆಳೆದಿದೆ. ಹಾಗಾದರೆ ಏನಿದು ಈ ಪ್ರಕರಣ?
ಚಿಕ್ಕಮಗಳೂರು ಜಿಲ್ಲೆ ಹೇಳಿ ಕೇಳಿ ಮಂಗಳೂರಿನಂತೆ ಕೋಮು ಸೂಕ್ಷ್ಮ ಪ್ರದೇಶ. ಸಣ್ಣ ಪುಟ್ಟ ಘಟನೆಗಳು ಕೋಮು ಗಲಭೆಗಳಿಗೆ ತುತ್ತಾದುದ್ದೆ ಹೆಚ್ಚು. ಜಿಲ್ಲೆಯ ಕೊಪ್ಪ ತಾಲೂಕಿನ ಕಪಿಲ ಬಳಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣ ಇದೀಗ ಹೊಸತೊಂದು ಬಣ್ಣ ಪಡೆದಿದೆ.
ಹದಿನೈದು ದಿನಗಳ ಹಿಂದೆ ಕೊಪ್ಪ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮುಸ್ಲಿಂ ಯುವಕರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ರೈಡ್ ಮಾಡಿ ಮುಸ್ಲಿಂ ಯುವಕರಿಗೆ ಥಳಿಸಿತ್ತು. ಪೊಲೀಸರು ಈ ಪ್ರಕರಣವನ್ನು ಹೊರಜಗತ್ತಿಗೆ ತಿಳಿಯದಂತೆ ಮುಚ್ಚಿಟ್ಟಿದ್ದರು. ಆದರೆ ಇದೀಗ ಮುಸ್ಲಿಂ ಯುವಕರೊಂದಿಗಿದ್ದ ಅನ್ಯಕೋಮಿನ ಯುವತಿಯ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮನನೊಂದು ಕಾಲೇಜಿನಲ್ಲೇ ವಿದ್ಯಾರ್ಥಿನಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಪೊಲೀಸರು ನೈತಿಕ ಪೊಲೀಸ್ ಗಿರಿ, ಪೋಟೋ ವೈರಲ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ಮುಚ್ಚಿಟ್ಟ ಪೊಲೀಸ್ ಇಲಾಖೆಯ ಬಗ್ಗೆ ವ್ಯಾಪಕ ಆಕ್ರೋಶ ಕೇಳಿಬಂದಿದೆ.