ಬಿ.ಎಲ್. ಸಂತೋಷ್ ಟೀಮಿಗೆ ಸೈಲೆಂಟಾಗಿ ಗುದ್ದಿದ ಬಿಜೆಪಿ ಹೈಕಮಾಂಡ್; ವಿಜಯೇಂದ್ರ ಅಧ್ಯಕ್ಷ, ಕುಮಾರಸ್ವಾಮಿ ವಿಪಕ್ಷ ನಾಯಕ: ಅಧಿಕೃತ ಘೋಷಣೆಯೊಂದೇ ಬಾಕಿ.!

ರಾಜ್ಯ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವೈಟ್ ವಾಶ್ ಆಗುತ್ತಿದ್ದಂತೆ ಕೇಂದ್ರದ ಬಿಜೆಪಿ ನಾಯಕರು ರಾಜ್ಯ ಬಿಜೆಪಿ ನಾಯಕರನ್ನು ಹತ್ತಿರಕ್ಕೆ ಸುಳಿಯಲು ಬಿಡುತ್ತಿರಲಿಲ್ಲ. ನರೇಂದ್ರ ಮೋದಿ ರಾಜ್ಯ ಭೇಟಿ ಸಂದರ್ಭದಲ್ಲೂ ರಾಜ್ಯದ ನಾಯಕರಿಗೆ ಬ್ಯಾರಿಕೇಡ್ ಗತಿ ಆಗಿತ್ತು. ಹೊಸ ಸರಕಾರ ಬಂದು ನೂರು ದಿನಗಳೂ ಕಳೆದರೂ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡದೆ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ತಪರಾಕಿಯನ್ನೇ ನೀಡಿತ್ತು.

ಇದೀಗ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ರಾಜ್ಯದಲ್ಲಿ ಕಟ್ಟಿ ಬೆಳೆಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದಂತಿದೆ. ಕೇವಲ ರಾಜ್ಯ ಬಿಜೆಪಿಯನ್ನು ನಂಬಿ ಕೂತರೆ ಇಲ್ಲಿ ಎರಡಂಕಿ ಸೀಟು ಪಡೆಯುವುದು ಕಷ್ಟ. ಗ್ಯಾರಂಟಿ ಯೋಜನೆ ಮೂಲಕ ಜನಸಾಮಾನ್ಯರ ಮಧ್ಯೆ ನುಡಿದಂತೆ ನಡೆದ ಸರ್ಕಾರ ಎಂದು ಖ್ಯಾತಿಗೊಳಗಾದ ಕಾಂಗ್ರೆಸ್ ಸರ್ಕಾರಕ್ಕೆ ಖೆಡ್ಡಾ ತೋಡಲು ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ ಅನಿವಾರ್ಯವಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ಗ್ರೀನ್ ಸಿಗ್ನಲ್ ದೊರೆತಿದ್ದು, ಬಿಜೆಪಿ-ಜೆಡಿಎಸ್ ಪ್ರಮುಖ ನಾಯಕರು ದೋಸ್ತಿ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಇನ್ನಷ್ಟೇ ಅಧಿಕೃತ ಘೋಷಣೆ ಹೊರಬರಬೇಕಾಗಿದೆ.

ಇದೀಗ ಸಿಕ್ಕ ಮಾಹಿತಿಯ ಪ್ರಕಾರ ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪಾಲಾಗುವುದು ಬಹುತೇಕ ಖಚಿತವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ರವರನ್ನು ಸೈಡ್ ಲೈನ್ ಮಾಡಿ ಬಿಎಲ್ ಸಂತೋಷ್ ಟೀಮಿಗೆ ಮಣೆ ಹಾಕಿದ್ದು ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಕೇಂದ್ರ ನಾಯಕರು ಅರಿತಂಗಿದೆ. ಬಿಜೆಪಿಯ ಓಟು ಬ್ಯಾಂಕ್ ಆಗಿದ್ದ ಲಿಂಗಾಯತರು ಇದೀಗ ಕೈ ಕೊಟ್ಟಿದ್ದು ಬಿಜೆಪಿ ಹೀನಾಯ ಸ್ಥಿತಿಗೆ ಕಾರಣವಾಗಿತ್ತು. ಲಿಂಗಾಯತ ಸಮುದಾಯವನ್ನು ಮತ್ತೆ ವಿಶ್ವಾಸಕ್ಕೆ ಪಡೆಯುವುದು ರಾಜ್ಯದಲ್ಲಿ ಬಿಜೆಪಿಗೆ ಅನಿವಾರ್ಯವಾಗಿದೆ. ಯಡಿಯೂರಪ್ಪ ನಾಯಕತ್ವವನ್ನು ಮತ್ತೆ ಬಳಸಿಕೊಳ್ಳಲು ತೀರ್ಮಾನಿಸಿದ್ದು, ಯಡಿಯೂರಪ್ಪ ಇಚ್ಛೆಯಂತೆ ಅವರ ಪುತ್ರ ವಿಜಯೇಂದ್ರ ರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವುದು ಫೈನಲ್ ಆಗಿದೆ.

ಇನ್ನು ವಿಪಕ್ಷ ಸ್ಥಾನದ ನಾಯಕತ್ವಕ್ಕೆ ಕುಮಾರಸ್ವಾಮಿ ಹೆಗಲಿಗೆ ನೀಡಲು ಕೇಂದ್ರ ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಮತಗಳನ್ನು ತೆಕ್ಕೆಗೆ ಹಾಕಿಕೊಳ್ಳುವ ನಿಟ್ಟಿನಲ್ಲಿ ಅಮಿತ್ ಷಾ ಪ್ಲ್ಯಾನ್ ಮಾಡಿಕೊಂಡಿದ್ದು ಕುಮಾರಸ್ವಾಮಿ ಹೆಗಲಿಗೆ ವಿಪಕ್ಷ ಜವಾಬ್ದಾರಿ ನೀಡಿ ಕಾಂಗ್ರೆಸ್ ಸರ್ಕಾರವನ್ನು ಮುಟ್ಟಿ ನೋಡುವಂತೆ ನೋಡಿಕೊಳ್ಳಲು ಪ್ಲ್ಯಾನ್ ತಯಾರಿಸಿಕೊಂಡಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.