ಅಂದು ಕೊರಗಪ್ಪನವರೊಂದಿಗೆ ಕೈ ಜೋಡಿಸಿದ ಸಿ.ಅಬ್ದುಲ್ ರಹಿಮಾನ್ ಹಾಗೂ ಬ್ಯಾರಿ ಸಮುದಾಯ,ಈ ಜಿಲ್ಲೆಯ ಸಾಮರಸ್ಯವನ್ನು, ಸೌಹಾರ್ಧತೆಯನ್ನು ಎತ್ತಿ ಹಿಡಿದಿದೆ.
19ನೆಯ ಶತಮಾನದ ಆರಂಭ ಕಾಲದಲ್ಲಿ ಮಾನವತಾ ವಾದಿ ಸಂತ ಶ್ರೀ ನಾರಾಯಣ ಗುರುಗಳು ತುಳುನಾಡಿಗೆ ಬರಲು ಕಾರಣಕರ್ತರಾದ ಪ್ರಮುಖರು ಹೊಯಿಗೆ ಬಜಾರ್ ಕೊರಗಪ್ಪನವರು ಮತ್ತು ಸಿ.ಅಬ್ದುಲ್ ರೆಹಮಾನ್. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸ್ಥಾಪನೆಯಲ್ಲಿ ಶ್ರೀ ನಾರಾಯಣ ಗುರುಗಳಿಗೆ ಬೆಂಬಲವಾಗಿ ನಿಂತು, ಅದರ ಸ್ಥಾಪಕ ಅಧ್ಯಕ್ಷರೂ. ಆದುದರಿಂದ ಮುಂದೆ ಅವರು ಅಧ್ಯಕ್ಷ ಕೊರಗಪ್ಪ ಎಂಬುದಾಗಿಯೇ ಹೆಸರಾದರು.
ಮಂಗಳೂರಿನ ಹೊಯಿಗೆ ಬಜಾರ್ ನಲ್ಲಿ ಸಿ.ಅಬ್ದುಲ್ ರೆಹಮಾನ್ ಎಂಬವರ ಜೊತೆ ಪಾಲುದಾರಿಕೆಯಲ್ಲಿ ಸಿ. ಅಬ್ದುಲ್ ರೆಹಮಾನ್ ಎಂಡ್ ಕೊರಗಪ್ಪ ಕಂಪೆನಿ ಎಂಬ ವ್ಯಾಪಾರ ಸಂಸ್ಥೆಯನ್ನು ಪಾಲುದಾರಿಕೆಯಲ್ಲಿ ಪ್ರಾರಂಭಿಸಿದರು. ಇದರ ಮೂಲಕ ಮುಖ್ಯವಾಗಿ ಒಣಮೀನು ಸಂಸ್ಕರಣೆ ಮತ್ತು ರಫ್ತು ಉದ್ಯಮ ನಡೆಯುತ್ತಿತ್ತು. ಇದರ ಮೂಲಕ ಕೊಲಂಬಿಯಾ, ಸಿಂಗಾಪುರ, ಅರೇಬಿಯಾ ಮುಂತಾದ ರಾಷ್ಟ್ರಗಳಿಗೆ ಒಣ ಮೀನನ್ನು ರಫ್ತು ಮಾಡಿ ಆ ಕಾಲದಲ್ಲಿ ಪ್ರಸಿದ್ಧಿ ಪಡೆದರು.
ಕೊರಗಪ್ಪನವರು 1908 ರಲ್ಲಿ ತನ್ನ ನಾಲ್ವರು ಆತ್ಮೀಯರೊಂದಿಗೆ ಕೇರಳಕ್ಕೆ ಹೋಗಿ ಶ್ರೀ ನಾರಾಯಣ ಗುರುಗಳನ್ನು ಭೇಟಿಯಾದರು. ತುಳುನಾಡಿನ ಹಿಂದುಳಿದ ಸಮಾಜದವರ ಏಳಿಗೆಗಾಗಿ ಮಂಗಳೂರಿಗೆ ಆಗಮಿಸಲು ಗುರುಗಳನ್ನು ವಿನಂತಿಸಿದರು. ಒಪ್ಪಿದ ಗುರುಗಳು ಅದೇ ವರ್ಷ ಸೇರಿದಂತೆ ಮೂರು ಬಾರಿ ತುಳುನಾಡಿಗೆ ಆಗಮಿಸಿ, 1912 ರ ಫೆಬ್ರವರಿ 21 ರಂದು ಮಂಗಳೂರಿನ ಕುದ್ರೋಳಿಯಲ್ಲಿ ಶ್ರೀ ಗೋಕರ್ಣನಾಥ ದೇಗುಲವನ್ನು ಪ್ರತಿಷ್ಠೆ ಮಾಡಿದರು. ಕೊರಗಪ್ಪನವರು ಜನ, ಧನ ಬೆಂಬಲವನ್ನು ಕ್ರೋಢಿಕರಿಸಿದರು.
ಮುಂದೆ ಬಿಲ್ಲವರ ಯೂನಿಯನ್ ರಚನೆಯಾಗಿ ಕೊರಗಪ್ಪನವರು ಅದರ ಅಧ್ಯಕ್ಷರಾದರು. ಆ ಕಾಲದಲ್ಲಿ ದೇವಸ್ಥಾನದ ಉತ್ಸವಕ್ಕೆ ದೂರದ ಊರುಗಳಿಂದ ಬರುತ್ತಿದ್ದ ಜನರಿಗೆ ಅವರ ಮನೆಯಲ್ಲಿಯೇ ಊಟ, ವಸತಿ ಒದಗಿಸಲಾಗುತ್ತಿತ್ತು. ಕೊರಗಪ್ಪನವರ ಪತ್ನಿ ಸೀತಮ್ಮ ಪ್ರೀತಿಪೂರ್ವಕ ಆದರಾತಿಥ್ಯ ನೀಡುತ್ತಿದ್ದರು. ಆ ಕಾಲದಲ್ಲಿ ಗ್ರಾಮಾಂತರ ಪ್ರದೇಶದ ಅನೇಕ ವಿದ್ಯಾರ್ಥಿಗಳು ಇವರ ಮನೆಯಲ್ಲಿ ವಾಸ್ತವ್ಯವಿದ್ದು ವಿದ್ಯಾರ್ಜನೆ ಮಾಡುತ್ತಿದ್ದರು.
ಕೊರಗಪ್ಪನವರು ಫೋರ್ಟ್ ಸಲಹಾ ಸಮಿತಿಯ ಸದಸ್ಯರಾಗಿದ್ದರು. ಅಲ್ಲದೆ ಗೌರವ ಬೆಂಚ್ ಮ್ಯಾಜಿಸ್ಟ್ರೇಟರಾಗಿ ಇಪ್ಪತ್ತೈದು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಏಳಿಗೆಯ ಚಿಂತನೆ ತ್ಯಾಗ, ಪ್ರೇಮ, ಭಕ್ತಿಭಾವದಿಂದ ಆದರ್ಶ ಜೀವಿಯಾಗಿ ಜನಾನುರಾಯಿಯಾಗಿ ಬಾಳಿ 1947 ರ ಮೇ 6 ರಂದು ಶಿವೈಕ್ಯರಾದರು. ಅವರ ಸ್ಮರಣಾರ್ಥ ಕುದ್ರೊಳಿ ದೇವಸ್ಥಾನದಲ್ಲಿ ‘ಅಧ್ಯಕ್ಷ ಕೊರಗಪ್ಪ ಸ್ಮಾರಕ ಭವನ’ ನಿರ್ಮಿಸಲಾಗಿದೆ.ಅಂದಿನ ಕಾಲದಲ್ಲಿ ಕೊರಗಪ್ಪನವರೊಂದಿಗೆ ನಿಂತು,ಎಲ್ಲಾ ರೀತಿಯ ಸಹಕಾರ ನೀಡಿದ ಸಿ.ಅಬ್ದುಲ್ ರೆಹಮಾನ್ ಹಾಗೂ ಬ್ಯಾರಿ ಸಮುದಾಯ ಈ ಜಿಲ್ಲೆಯ ಸಾಮರಸ್ಯವನ್ನು,ಸೌಹಾರ್ಧತೆಯನ್ನು ಎತ್ತಿ ಹಿಡಿದಿದೆ.