ಒಂದು ಕಡೆ ಚೈತ್ರ ಕುಂದಾಪುರರವರ ಪ್ರೇಮಪಾಶ; ಇನ್ನೊಂದು ಮೋಸದಾಟ.!

ಕರಾವಳಿ

ಲವ್ ಜಿಹಾದ್ ಬಗ್ಗೆ ಚೈತ್ರಾ ಕುಂದಾಪುರ ಪ್ರೇಮಪಾಶ ಎಂಬ ಕಾದಂಬರಿ ಬರೆದಿದ್ದಾರೆ. ಕರಾವಳಿಯಲ್ಲಿ ನಡೆದ/ನಡೆಯುತ್ತಿರುವ ನಿಜ ಘಟನೆ ಆಧರಿತ ಕಾದಂಬರಿ ಇದು ಎಂದು ಚೈತ್ರ ಕುಂದಾಪುರ ಹೇಳಿದ್ದಾರೆ. ಬುಕ್ ಬ್ರಹ್ಮದವರು ಚೈತ್ರ ಕುಂದಾಪುರಗೆ ವೇದಿಕೆ ಒದಗಿಸಿದ್ದು ಟೀಕೆಗೆ ಕಾರಣವಾಗಿದೆ. ವಿಷಯ ಅದಲ್ಲ, ಚೈತ್ರ ಕುಂದಾಪುರರವರ ಲವ್ ಜಿಹಾದ್ ಕಾದಂಬರಿಯಲ್ಲಿ ಹೇಳದೇ ಇರುವ ಮತ್ತು ಈ ಕಾದಂಬರಿಗೆ ಕಾರಣವಾಗಿರುವ ಮೊದಲ ಘಟನೆ ಕಾದಂಬರಿಯಲ್ಲಿ ಇಲ್ಲ. ಹಾಗಾಗಿ ಕಾದಂಬರಿಯಲ್ಲಿ ಇಲ್ಲದ ಪ್ರೇಮಪಾಶ ಪಾರ್ಟ್ – 1 ಇಲ್ಲಿದೆ. ಪ್ರೇಮಪಾಶ ಪಾರ್ಟ್ – 1 ಓದಿದ ಬಳಿಕ ಚೈತ್ರಾ ಕುಂದಾಪುರ ಬರೆದ ಪ್ರೇಮಪಾಶ ಓದಿದ್ರೆ ನಿಮ್ಮ ಓದು ಸಂಪೂರ್ಣವಾಗುತ್ತೆ‌.


ಪ್ರೇಮ ಪಾಶ ಪಾರ್ಟ್ -1

  • ನವೀನ್ ಸೂರಿಂಜೆ

ಅವತ್ತು ಬೆಳಿಗ್ಗೆಯಿಂದ ಸುಷ್ಮಾ ( ಹೆಸರು ಬದಲಿಸಲಾಗಿದೆ) ನಾಪತ್ತೆಯಾಗಿದ್ದಳು. ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಸೇರಿದ್ದ ಸುಷ್ಮಾ ನಾಪತ್ತೆ ಯಾರಿಗೂ ಮುಖ್ಯವಾಗಿರಲಿಲ್ಲ‌. ಬೀಡಿ ಕಟ್ಟಿ ಅದನ್ನು ಬ್ರಾಂಚಿಗೆ ಕೊಂಡೋಗುವ ಸಂಧರ್ಭದಲ್ಲಿ ರಸ್ತೆ ಬದಿಯಲ್ಲಿ ಕೆಲ ಮುಸ್ಲಿಂ ಹುಡುಗರ ಜೊತೆ ಸುಷ್ಮಾ ಮಾತನಾಡುತ್ತಿದ್ದಳು ಎಂಬ ಗುಸುಗುಸು ಯಾವಾಗ ಪ್ರಾರಂಭವಾಯ್ತೋ, ಈ ಗುಸುಗುಸು ಹಿಂದೂ ಸಂಘಟನೆಗಳ ಕಿವಿಗೆ ಯಾವಾಗ ಬಿತ್ತೋ ಆಗ ಸುಷ್ಮಾ ನಾಪತ್ತೆ ಪ್ರಕರಣ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡರು.
ಅವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿ ಲವ್ ಜಿಹಾದ್ ಎಂಬ ಶಬ್ದ ಕಿವಿಗೆ ಬಿತ್ತು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಗಳ ನೇತೃತ್ವದಲ್ಲಿ ಮೊದಲ ಬಾರಿ ಲವ್ ಜಿಹಾದ್ ವಿರುದ್ದ ಪ್ರತಿಭಟನೆ ನಡೆಸಲಾಯ್ತು. ನೂರಾರು ಹಿಂದುತ್ವ ಕಾರ್ಯಕರ್ತರು ಸೇರಿದ್ದ ಈ ಪ್ರತಿಭಟನಾ ಸಭೆಯಲ್ಲಿ ಸುಷ್ಮಾಳ ಬಗ್ಗೆ ಒಂದು ವಾಕ್ಯವೂ ಯಾರ ಬಾಯಿಂದಲೂ ಬರಲಿಲ್ಲ. ಮುಸ್ಲಿಂ ಹುಡುಗರು, ಲವ್ ಜಿಹಾದ್ ಎಂಬ ದ್ವನಿಗಳಷ್ಟೇ ಕೇಳುತ್ತಿತ್ತು.
ಆಗ ಡಾ ಸುಬ್ರಹ್ಮಣ್ಯೇಶ್ವರ ರಾವ್ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಎಸ್ಪಿಯಾಗಿದ್ದರು. ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಸುಬ್ರಹ್ಮಣ್ಯೇಶ್ವರ ರಾವ್ ಲವ್ ಜಿಹಾದ್ ತನಿಖೆಗೆ ತಂಡ ರಚಿಸಿದರು. ಬೆಂಕಿಯಂತೆ ಸದ್ದು ಮಾಡಿದ್ದ ಲವ್ ಜಿಹಾದ್ ಕರಾವಳಿಗೆ ಬೆಂಕಿ ಇಕ್ಕುತ್ತೆ ಎಂದು ಅಂದೇ ಗೊತ್ತಿದ್ದರಿಂದ ಸೂಷ್ಮಾ ನಾಪತ್ತೆ ಕೇಸ್ ಅನ್ನು ಭೇದಿಸಲೇಬೇಕಿತ್ತು.
ಲವ್ ಜಿಹಾದ್ ಗೆ ಒಳಗಾದ ಸೂಷ್ಮಾ ಕೇಸನ್ನು ಬೆನ್ನತ್ತಿದ್ದ ಪೊಲೀಸರು ಹಲವು‌‌ ಮುಸ್ಲಿಂ ಯುವಕರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದರು. ಸೂಷ್ಮಾ ಬೀಡಿ ಕೊಂಡೊಯ್ಯುವಾಗ ರಸ್ತೆ ಬದಿಯಲ್ಲಿ ಮಾತನಾಡಿದ್ದ ಮುಸ್ಲಿಂ ಯುವಕರ ಕತೆ ಯಾರಿಗೂ ಬೇಡ ಅನ್ನುವ ಸ್ಥಿತಿ ತಲುಪಿತ್ತು. ಕೊನೆಗೆ ಈ ತನಿಖೆ ಬಂದು ಬಂದು ನಿಂತಿದ್ದು ಶಿಕ್ಷಕ ಮೋಹನ್ ಕುಮಾರ್ ಬಳಿ !
ಹಿಂದೂ ಧರ್ಮದಲ್ಲಿನ ಜಾತಿ ಕಾರಣಕ್ಕಾಗಿ, ವರದಕ್ಷಿಣೆ, ಬಡತನ ಕಾರಣಕ್ಕಾಗಿ ಮದುವೆಯಾಗಲು ಹುಡುಗ ಸಿಗದ ಹುಡುಗಿಯರನ್ನೇ ಮೋಹನ್ ಟಾರ್ಗೆಟ್ ಮಾಡುತ್ತಿದ್ದ. ಈತ ಬೀಡಿ ಬ್ರಾಂಚು ಸುತ್ತಮುತ್ತ, ರಬ್ಬರ್ ತೋಟ, ಕೃಷಿ ಕಾರ್ಮಿಕರ ಗುಂಪುಗಳಲ್ಲಿ ಹುಡುಗಿಯರಿಗೆ ಹೊಂಚು ಹಾಕುತ್ತಿದ್ದ‌. ಬೀಡಿ ಕಟ್ಟುತ್ತಿದ್ದ ಸೂಷ್ಮಾ ಮೋಹನ್ ಗೆ ಸಿಕ್ಕಿದ್ದು ಹೀಗೆಯೇ ! ಸೂಷ್ಮಾ ಜೊತೆ ಪ್ರೀತಿಯ ನಾಟಕವಾಡಿ, ಇಬ್ಬರೂ ಓಡಿ ಹೋಗುವ ಸೀನ್ ಕ್ರಿಯೇಟ್ ಮಾಡಿ ಬೆಂಗಳೂರಿಗೆ ಬರುತ್ತಾರೆ. ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಇಬ್ಬರೂ ವಾಸ್ತವ್ಯ ಹೂಡಿ ಲೈಂಗಿಕ ಕ್ರಿಯೆ ನಡೆಸುತ್ತಾರೆ. ನಂತರ ಬಸ್ ಹತ್ತುವ ಮೊದಲು ಗರ್ಭನಿರೋಧಕ ಗುಳಿಗೆಯೆಂದು ಸೈನೆಡ್ ಕೊಟ್ಟು ಸಾರ್ವಜನಿಕ ಶೌಚಾಲಯಕ್ಕೆ ಕಳುಹಿಸುತ್ತಾನೆ. ಭಾವಿ ಪತಿ ಕೊಟ್ಟ ಗರ್ಭನಿರೋಧಕ ಗುಳಿಗೆ ಎಂದು ಸೈನೆಡ್ ಸೇವಿಸಿದ ಸೂಷ್ಮಾ ಮೆಜೆಸ್ಟಿಕ್ ನ ಸಾರ್ವಜನಿಕ ಶೌಚಾಲಯದಲ್ಲಿ ಹೆಣವಾಗುತ್ತಾಳೆ‌. ಆಕೆಯ ಸಣ್ಣಪುಟ್ಟ ಬಂಗಾರದ ಆಭರಣ, ಪರ್ಸು ಇದ್ದ ಬ್ಯಾಗುಗಳನ್ನು ಹಿಡಿದುಕೊಂಡು ಹೊರಗೆ ನಿಂತಿದ್ದ ಮೋಹನ್ ಮೆಲ್ಲನೆ ಜಾಗ ಖಾಲಿ ಮಾಡುತ್ತಾನೆ. ಪೊಲೀಸರು ಅಪರಿಚಿತ ಮಹಿಳೆಯ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿ ಸುಮ್ಮನಾಗುತ್ತಾರೆ. ಗುರುತುಪತ್ತೆಗೆ ಯಾವ ದಾಖಲೆಗಳೂ ಸೂಷ್ಮಾ ಶವದ ಬಳಿ ಇರಲ್ಲ.
ಅಲ್ಲಿಂದ ಬಂದ ಮೋಹನ್ ಮತ್ತೊಂದು ಹುಡುಗಿಗೆ ಗಾಳ ಹಾಕುತ್ತಾನೆ. ಈ ರೀತಿ ಆತ ಪ್ರೀತಿಸಿ ರೇಪ್ ಮಾಡಿ ಕೊಲೆ ಮಾಡಿದ ಹುಡುಗಿಯರ ಸಂಖ್ಯೆ ಬರೋಬ್ಬರಿ 20..! ಎಲ್ಲಾ ಹುಡುಗಿಯರ ಕತೆ ಹಿಂದೆ ಇರೋದು ಬಡತನ, ವರದಕ್ಷಿಣೆಯಿಂದ ಹುಡುಗ ಸಿಗದ ವೇದನೆಯ ಕತೆಗಳು. ಎಲ್ಲರನ್ನೂ ಕೊಲೆ ಮಾಡಿದ್ದು ಸೈನೆಡ್ ಕೊಟ್ಟು !

ಇದು ಮೊದಲ ಲವ್ ಜಿಹಾದ್ ಪ್ರಕರಣ. ಈ ಕತೆ ಇಲ್ಲದೇ ಪ್ರೇಮಪಾಶ ಕಾದಂಬರಿ ಅಪೂರ್ಣವಾಗುತ್ತದೆ‌. ಚೈತ್ರ ಕುಂದಾಪುರರವರ ಪ್ರೇಮಪಾಶ ಕಾದಂಬರಿಯನ್ನು ಓದೋ ಮುಂಚೆ ಪ್ರೇಮಪಾಶ ಪಾರ್ಟ್ 1 ಆಗಿ ಈ ಕತೆಯನ್ನು ಓದಿ ಮುಂದುವರೆಯಿರಿ…