ಸ್ಮಶಾನ, ಖಬರಸ್ಥಾನಗಳಿಗೆ 3 ತಿಂಗಳೊಳಗೆ ಜಾಗ ನೀಡಿ: ಡಿಸಿ, ಸಿಇಒಗಳಿಗೆ ಸಿಎಂ ಖಡಕ್ ವಾರ್ನಿಂಗ್

ರಾಜ್ಯ

ವಿಧಾನ ಸೌಧದಲ್ಲಿ ಬುಧವಾರ ಡಿಸಿ ಮತ್ತು ಸಿಇಒಗಳ ಸಭೆ ನಿರಂತರ 8 ಗಂಟೆಗಳ ಕಾಲ ನಡೆದಿದ್ದು ಇದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಖಡಕ್ ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿರುವ ಸ್ಮಶಾನ ಮತ್ತು‌ ಖಬರ್ ಸ್ಥಾನಗಳಿಗೆ ಮೂರು ತಿಂಗಳಲ್ಲಿ ಜಾಗ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.

ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆಯುತ್ತಿರುವ ಎರಡನೇ ದಿನದ ಡಿಸಿ ಮತ್ತು ಸಿಇಒ ಗಳ ಸಭೆಯಲ್ಲಿ ಈ ಸೂಚನೆ ನೀಡಿದರು. ಬುಧವಾರವೂ ಸತತ 8 ಗಂಟೆಗಳ ಸಭೆ ನಡೆಯಿತು.
ಈ ವೇಳೆ ಅವರು ರಾಜ್ಯದಲ್ಲಿ ಯಾವುದೇ ಧರ್ಮ ಮತ್ತು ಜಾತಿಯವರು ಸ್ಮಶಾನ ಅಥವಾ ಖಬರ್ ಸ್ಥಾನಗಳಿಗೆ ಜಾಗ ಒದಗಿಸುವಂತೆ ಕೋರಿದ್ದರೆ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಸರ್ಕಾರಿ ಜಾಗವನ್ನು ಒದಗಿಸಿ ಕೊಡಬೇಕು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿಯವರಿಂದ ಜಾಗ ಖರೀದಿಸಿ ಸಾರ್ವಜನಿಕ‌ ಸ್ಮಶಾನ ಮತ್ತು‌ ಖಬರ್ ಸ್ಥಾನಗಳಿಗೆ ಒದಗಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.