ವಿಯೆಟ್ನಾಂ: ‘ಮಾನವ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಗೌರವ ನೀಡಬೇಕು ಎಂಬುದನ್ನು ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿ ಹೇಳಿದ್ದೇನೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.ವಿಯೆಟ್ನಾಂನ ಹನೋಯಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾತುಕತೆ ವೇಳೆ (ಮೋದಿ ಜೊತೆಗೆ) ನಾಗರಿಕ ಸಮಾಜದಲ್ಲಿ ಮಾನವ ಹಕ್ಕುಗಳ ಮಹತ್ವ ಕುರಿತು ಒತ್ತಿ ಹೇಳಿದ್ದೇನೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಾಮುಖ್ಯತೆ ಬಗ್ಗೆಯೂ ಮನದಟ್ಟು ಮಾಡಿಕೊಟ್ಟಿದ್ದೇನೆ. ನಾನೂ ಕೂಡ ಗೌರವಿಸುತ್ತೇನೆ’ ಎಂದರು.
ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಬೈಡನ್ ಪಾಲ್ಗೊಂಡಿದ್ದರು. ಬಳಿಕ ಮೋದಿ ಜೊತೆಗೆ ಮಾತುಕತೆ ನಡೆಸಿದ್ದ ಅವರು, ಖಾಸಗಿ ಔತಣ ಕೂಟದಲ್ಲಿ ಭಾಗವಹಿಸಿದ್ದರು. ಶೃಂಗಸಭೆಯ ಮೊದಲ ದಿನದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬೈಡನ್, ವಿಯೆಟ್ನಾಂ ಪ್ರವಾಸದ ಅಂಗವಾಗಿ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿರುವ ಕುರಿತು ಬೈಡನ್ ಆಡಳಿತವು ಮೋದಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿತ್ತು.
ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯ ಹಾಗೂ ಹಿಂಸೆ ಹೆಚ್ಚುತ್ತಿರುವ ಬಗ್ಗೆ ಅಮೆರಿಕದ ವಿದೇಶಾಂಗ ನೀತಿ ಮತ್ತು ಸುಧಾರಣೆ ಇಲಾಖೆಯು ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿತ್ತು. ಭಾರತದಲ್ಲಿ ಮೋದಿ ಸರ್ಕಾರ, ಪೊಲೀಸ್ ಹಾಗೂ ಬಂದೀಖಾನೆ ಇಲಾಖೆಯ ಅಧಿಕಾರಿಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ವಿದ್ಯಮಾನದ ಬಗ್ಗೆ ಅಮೆರಿಕ ಸರ್ಕಾರವು ಗಮನಿಸುತ್ತಿದೆ ಎಂದು ಕಳೆದ ವರ್ಷ ಬೈಡನ್ ಅವರ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿಕೆ ನೀಡಿದ್ದರು