‘ಮಂಜುನಾಥ’ನ ಕೋಮು ಲೀಲೆ..!

ಕರಾವಳಿ

ಮಹಾ ಕೋಮುವಾದಿ, ಪರಮಭ್ರಷ್ಟ ಮಂಜುನಾಥ್ ಸರಕಾರೀ ಕೆಲಸದಿಂದ ವಜಾ ಮಾಡಲು ಮುಸ್ಲಿಂ ಸಮುದಾಯದಿಂದ ಹೆಚ್ಚಿದ ಆಗ್ರಹ

ಕರಾವಳಿ ಭಾಗದಲ್ಲಿ ಯಾವುದೇ ಸರಕಾರ ಅಸ್ತಿತ್ವಕ್ಕೆ ಬಂದರೂ ಅಲ್ಲಿ ನಡೆಯುವುದು ಆರ್ ಎಸ್ ಎಸ್ ಪ್ರೇರಿತ ಚಟುವಟಿಕೆಗಳೇ. ಇದಕ್ಕೆ ಮುಖ್ಯ ಕಾರಣ ಅಧಿಕಾರಿಗಳ ವೇಷದಲ್ಲಿರುವ ಆರ್ ಎಸ್ ಎಸ್ ಪ್ರೇರಿತ ಚಿಂತನೆಗಳು. ಇದೀಗ ಅಲ್ಪಸಂಖ್ಯಾತ ಇಲಾಖೆಯಲ್ಲಿ ವಕ್ಕರಿಸಿಕೊಂಡಿರುವ ತಾಲೂಕು ವಿಸ್ತರಣಾಧಿಕಾರಿ ಮಂಜುನಾಥ್ ನ ಕೋಮು ಲೀಲೆಗಳು ಜಗಜ್ಜಾಹೀರವಾಗಿದೆ. ಅಧಿಕಾರಿಯ ವೇಷ ತೊಟ್ಟು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ತನ್ನ ಗೋಮುಖ ವ್ಯಾಘ್ರತನ ಪ್ರದರ್ಶಿಸಿರುವ ಮಂಜುನಾಥ ನಂತಹ ಅಧಿಕಾರಿಗಳಿಂದ ಅಲ್ಪಸಂಖ್ಯಾತರು ಕಲ್ಯಾಣ ಆಗುವುದುಂಟೇ..? ಮುಚ್ಚಿಟ್ಟ ಮುಖವಾಡ ಒಂದಲ್ಲ ಒಂದು ದಿನ ಹೊರಬರಲೇಬೇಕು. ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆ ಸಚಿವರು ಮಂಗಳೂರು ಭೇಟಿ ಸಂದರ್ಭ ಡಿಡೀರ್ ಕಂಕನಾಡಿ ಬಳಿಯ ಹಾಸ್ಟೆಲ್ ಗೆ ಭೇಟಿ ಇಟ್ಟಾಗ ಮಂಜುನಾಥನ ಲೀಲೆ ಹೊರಬಂದಿದೆ. ಅಲ್ಲಿ ವಿದ್ಯಾರ್ಥಿಗಳಿಗೆ ಮಲಗಲು ಸರಿಯಾದ ದಿಂಬು ನೀಡದೆ, ಸಮರ್ಪಕ ಊಟೋಪಚಾರ ನೀಡದೆ ಸರ್ಕಾರದಿಂದ ಬಂದ ಅನುದಾನವನ್ನು ಸ್ವಾಹಾ ಮಾಡಿಕೊಂಡ ಪರಿಣಾಮ ಸಚಿವರು ಮಂಜುನಾಥನನ್ನು ಸ್ಥಳದಲ್ಲೇ ಸಸ್ಪೆಂಡ್ ಮಾಡಿ ಬಿಟ್ಟರು. ಸಸ್ಪೆಂಡ್ ಆದ ನಂತರ ಮಂಜುನಾಥನ ಒಂದೊಂದು ಲೀಲೆಗಳು ಹೊರಬರತೊಡಗಿದೆ. ಈತ ಭ್ರಷ್ಟಾಚಾರಿ ಮಾತ್ರವಲ್ಲ ಮಹಾ ಕೋಮುವಾದಿಯಾಗಿದ್ದ ಎಂಬುದು ಹೊರಬಂದ ಆಡಿಯೋಗಳೇ ಸಾಕ್ಷಿ. ಕಳೆದ 2-3 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿರುವ ಮಂಜುನಾಥನ ‘ಕೋಮು’ ಲೀಲೆ ಆಡಿಯೋಗಳು ಆತನ ಅಸಲಿ ಮುಖವಾಡವನ್ನು ತೆರೆದಿಟ್ಟಿದೆ. ಇಲಾಖೆ ಯಲ್ಲಿ ಇದ್ದಿದ್ದು ಅಲ್ಪಸಂಖ್ಯಾತರದ್ದು..ಮಾಡುತ್ತಿದ್ದುದು ಮಾತ್ರ ಅಲ್ಪಸಂಖ್ಯಾತರ ಬಗ್ಗೆ ವಿಷ ಕಾರುವ ಮನ: ಸ್ಥಿತಿ. ಬೆನ್ನಿಗೆ ಚೂರಿ ಹಾಕುವ ಇಂತಹ ಮನಸ್ಥಿತಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾತ್ರವಲ್ಲ ಸೇವೆಯಿಂದಲೇ ವಜಾ ಮಾಡಬೇಕು ಅನ್ನುವ ಆಗ್ರಹ ಇದೀಗ ಕೇಳಿ ಬರುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪೋನ್ ಸಂಭಾಷಣೆ ಆಡಿಯೋ ಈ ವರ್ಷದ ಜೂನ್ ಗೂ ಮೊದಲಿನದ್ದು ಎನ್ನಲಾಗಿದ್ದು, ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು ಎಂದು ತಿಳಿದು ಬಂದಿದೆ.

ಆಡಿಯೊದಲ್ಲಿ ಮಂಜುನಾಥ್‌ ಅವರು ಮಹಿಳೆ ಯೊಬ್ಬರೊಂದಿಗೆ ಮಾತನಾಡುತ್ತಿದ್ದು, ಉಳ್ಳಾಲದ ಹುಡುಗನೊಬ್ಬ ದಪ್ಪದ ಹುಡುಗಿಯೊಬ್ಬಳ ಜೊತೆ ಸಲುಗೆಯಿಂದ ಇದ್ದಾನೆ. ಆತನಿಗೆ ಹೊಡೆಯುವುದಾಗಿ ಶಾಸಕ ವೇದವ್ಯಾಸ್‌ ಕಾಮತ್‌ ಅವರ ಆಪ್ತ ಸಹಾಯಕರು ಹೇಳುತ್ತಿದ್ದಾರೆ ಎಂದು ಮಾತು ಆರಂಭಿಸುವ ಅಲ್ಪಸಂಖ್ಯಾತರ ಇಲಾಖೆಯ ಮಂಗಳೂರು ತಾಲೂಕು ವಿಸ್ತರಣಾಧಿಕಾರಿಯಾಗಿದ್ದ ಮಂಜುನಾಥ್‌ ಅವರು, ಉಳ್ಳಾಲದ ಹುಡುಗನ ಕುರಿತಾಗಿ ಮಹಿಳೆಯಲ್ಲಿ ವಿಚಾರಿಸುತ್ತಾರೆ. ಆಗ ಮಹಿಳೆ ಅಂತಹಾ ಯಾವುದೇ ವಿಚಾರಗಳಿಲ್ಲ. ನಮ್ಮ ಕಚೇರಿಯಲ್ಲಿ ಹಿಂದೂ ಮುಸ್ಲಿಂ ಎಲ್ಲಾ ಇಲ್ಲ. ನಾವು ಕಚೇರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ಮಾತನಾಡುತ್ತೇವೆ ಎಂದು ಪ್ರತ್ಯುತ್ತರ ನೀಡುತ್ತಾರೆ.

ಮುಂದುವರಿದು ಮಾತನಾಡುವ ಮಂಜುನಾಥ್‌, “ಮಂಗಳೂರಿನಲ್ಲಿ ಬಜರಂಗದಳ, ಆರೆಸ್ಸೆಸ್‌ ತುಂಬಾ ಬಲವಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ ಸರ್ಕಾರ ಇತ್ತು. ಈಗ ಅವರದ್ದೇ ಸರ್ಕಾರ ಇದೆ. ಇಂತಹಾ ಸಂದರ್ಭದಲ್ಲಿ ( ಹಿಂದೂ – ಮುಸ್ಲಿಂ) ವಿಚಾರ ಬಂದಾಗ ಅವರು ಕೇಳುವುದಿಲ್ಲ”. ಮತ್ತೆ ಉತ್ತರಿಸಿದ ಮಹಿಳೆ, “ಕಚೇರಿಯಲ್ಲಿ ಕಚೇರಿಯ ವಿಚಾರ ಮಾತ್ರ ಇರುತ್ತೆ. ಆತ ನಮ್ಮೊಂದಿಗೆ ಕೆಲಸ ಮಾಡಲು ಆರಂಭಿಸಿ 2 ತಿಂಗಳಾಗುತ್ತಿದೆ. ಆತ ಹಾಗೇನು ಇಲ್ಲ” ಎಂದು ಹೇಳುತ್ತಾರೆ. ಅಷ್ಟರಲ್ಲಿ ಆಕೆಗೆ ಪ್ರತ್ಯುತ್ತರ ನೀಡುವ ಮಂಜುನಾಥ್‌, “ಇಲ್ಲಿ ಮುಸ್ಲಿಮರನ್ನು ನಂಬಿಕೊಂಡು ಹೋದ್ರೆ ನೀವು ಹೊಂಡಕ್ಕೆ ಬಿದ್ರಿ ಎಂದರ್ಥ”

” ನೀವು ಅಲ್ಪಸಂಖ್ಯಾತರ ಇಲಾಖೆಯಲ್ಲೇ ಕೆಲಸ ಮಾಡುವವರು, ನೀವು ಈ ರೀತಿ ಮತನಾಡಬಹುದಾ? ನೀವು ಅಲ್ಪಸಂಖ್ಯಾತರ ಇಲಾಖೆಯಲ್ಲಿ ಕೆಲಸ ಮಾಡುವುದರಿಂದ ಅಲ್ಲಿಗೆ ( ನಿಮ್ಮ ಬಳಿಗೆ ) ಜಾಸ್ತಿ ಬರುವವರು ಮುಸ್ಲಿಮರೇ, ಹಾಗಾದರೆ ಅವರ ಜೊತೆ ನೀವು ಮಾತನಾಡುವುದಿಲ್ವಾ? ಎಂದು ಮಹಿಳೆ ಪ್ರಶ್ನೆ ಮಾಡುತ್ತಾರೆ. ಆಗ ಉತ್ತರಿಸುವ ಮಂಜುನಾಥ್‌, ಅವರು ಕೆಲಸಕ್ಕೆ ಬರುತ್ತಾರೆ, ಅವರು ಕೆಲಸದ ವಿಷಯ ಮಾತನಾಡುತ್ತಾರೆ” ಎಂದಾಕ್ಷಣ ಮಹಿಳೆಯೂ ಇದೂ ಅಷ್ಟೇ ಎಂದು ಉತ್ತರಿಸುತ್ತಾರೆ.

“ತಹಶೀಲ್ದಾರ್‌ ಅವರೇ ಆ ಯುವಕನನ್ನು ಕೆಲಸಕ್ಕೆ ನೇಮಿಸಿದ್ದಾರೆ. ಅವರಿಗೆ ಗೊತ್ತಿಲ್ಲದೆ ಅವರು ಕೆಲಸಕ್ಕೆ ಸೇರಿಸಿಕೊಂಡಿಲ್ಲʼ ಎಂದು ಮಹಿಳೆ ಮಂಜುನಾಥ್‌ ಗೆ ಉತ್ತರಿಸುತ್ತಾರೆ. ಆಗ ನಿನ್ನ ತರ್ಕಕ್ಕೆ ನಾವು ಉತ್ತರ ಕೊಡಲಾಗಲ್ಲ. ನಾನು ಅಲ್ಪಸಂಖ್ಯಾತ ಇಲಾಖೆಯಲ್ಲಿದ್ದರೂ ನಾನು ಹಿಂದೂ. ನಾನು ಇದೇ ರೀತಿ ಮಾತನಾಡುವುದು. ಹಿಂದೂ- ಮುಸ್ಲಿಂ ಕಚೇರಿಯಲ್ಲೂ ಬರುತ್ತೆ ಹೊರಗಡೆನೂ ಬರುತ್ತೆ. ಇನ್ನು ನಿಮಗೆ ಬಿಟ್ಟಿದ್ದಮ್ಮ ಎಂದು ಮಂಜುನಾಥ್‌ ಕರೆ ಕಟ್‌ ಮಾಡುತ್ತಾರೆ.

ಸದ್ಯ ಮಂಜುನಾಥ್‌ ಅವರ ಈ ಆಡಿಯೊ ಕಳೆದ 2-3ದಿನಗಳಿಂದ ಭಾರೀ ವೈರಲ್‌ ಆಗುತ್ತಿದ್ದು, ” ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿಯೇ ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡು, ಸಮುದಾಯದ ವಿರುದ್ಧವೇ ಕೆಲಸ ಮಾಡುತ್ತಿದ್ದ ಇಂತಹ ಕೋಮುವಾದಿ, ಮಹಾ ಭ್ರಷ್ಟಾಚಾರಿಯನ್ನು ಸಸ್ಪೆಂಡ್ ಮಾಡುವ ಮೂಲಕ ಇಲಾಖೆ ಉತ್ತಮ ಕೆಲಸ ಮಾಡಿದೆ.

ಅಲ್ಪಸಂಖ್ಯಾತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಬೇಕಾದ ಹಾಸಿಗೆ, ಮಂಚ, ಊಟ, ಉಪಹಾರ, ಫರ್ನೀಚರ್ ಖರೀದಿಗಳಲ್ಲಿ ನಕಲಿ ಬಿಲ್ ಮಾಡಿ ಲಕ್ಷಾಂತರ ರೂಪಾಯಿ ತಿಂದು ತೇಗಿದ, ಹಾಸ್ಟೆಲ್ ಕಟ್ಟಡಗಳ ಬಾಡಿಗೆಯಲ್ಲಿ ಕಮಿಷನ್ ಹೊಡೆಯುತ್ತಿರುವ ಈತನನ್ನು ಸರ್ಕಾರಿ ಕೆಲಸದಿಂದಲೇ ವಜಾ ( Dismiss) ಮಾಡಬೇಕಿದೆ.” ಎಂಬ ಲಿಖಿತ ಸಂದೇಶವೂ ಆಡಿಯೊದೊಂದಿಗೆ ಹಂಚಲಾಗುತ್ತಿದೆ

ಸರ್ಕಾರಿ ಕೆಲಸ ದೇವರ ಕೆಲಸ ಎನ್ನಲಾಗುತ್ತಿದೆ. ಆದರೆ ಇಲ್ಲಿ ಝಂಡಾ ಊದಿರುವ ಕೆಲ ಅಧಿಕಾರಿಗಳು ಸಂಘಿಗಳಿಗಿಂತ ಹೆಚ್ಚು ಉಗ್ರವಾಗಿ ಕೆಲಸ ಮಾಡುತ್ತಿರುವುದು ವಿಪರ್ಯಾಸ. ಮಂಜುನಾಥನ ಕೋಮು ಲೀಲೆ ಜಗಜ್ಜಾಹೀರಗೊಂಡು ಮುಸ್ಲಿಂ ಸಮುದಾಯವೇ ಆಕ್ರೋಶಿತರಾಗಿ ಅಂತಹ ಅಧಿಕಾರಿಗಳನ್ನು ಸೇವೆಯಿಂದ ಲೇ ವಜಾ ಮಾಡಬೇಕು ಅನ್ನುವ ಆಗ್ರಹ ಕೇಳಿ ಬರುತ್ತಿರುವಾಗ ಬಂಟ್ವಾಳ ಸಮೀಪದ ಪ್ರಬಲ ಸುನ್ನಿ ಧರ್ಮಗುರುವೊಬ್ಬರು ಮಂಜುನಾಥನನ್ನು ಮರಳಿ ಅಲ್ಪಸಂಖ್ಯಾತ ಇಲಾಖೆಗೆ ತರಲು ಬ್ಯಾಟಿಂಗ್ ನಡೆಸುತ್ತಿರುವುದು ಸಮುದಾಯದ ಹಲವರ ಹುಬ್ಬೇರಿಸಲು ಕಾರಣವಾಗಿದೆ. ಧರ್ಮಗುರುಗಳಿಗೆ ಇದು ಬೇಡವಿತ್ತು ಅನ್ನುವ ಮಾತುಗಳು ಕೇಳಿ ಬರ ತೊಡಗಿದೆ.

ಮಂಜುನಾಥ ಕೇವಲ ಸಂಘೀ ಮನಸ್ಥಿತಿ ಹೊಂದಿದವ ಮಾತ್ರವಲ್ಲ ಪರಮ ಭ್ರಷ್ಟಾಚಾರಿಯಾಗಿದ್ದ. ಸರಕಾರಿ ವಸತಿ ನಿಲಯ ಗಳನ್ನೇ ಮನೆಯನ್ನಾಗಿ ಪರಿವರ್ತಿಸಿದ ಗುರುತರ ಆರೋಪಗಳು ಈತನ ಮೇಲಿದೆ. ಇವಿಷ್ಟೇ ಅಲ್ಲ ಈತ ಸ್ವಾಹಾ ಮಾಡಿಕೊಂಡಿರುವ ಹಲವು ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿದೆ. ಸರಕಾರಿ ಕಟ್ಟಡವನ್ನು ತನ್ನ ಸ್ವಂತಕ್ಕೆ ಬಳಸಿಕೊಳ್ಳುತ್ತಿರುವ ಅಧಿಕಾರಿ ಯಾರು.? ಅಲ್ಪ ಸಂಖ್ಯಾತ ಫಂಡಿನ ದೂರುಪಯೋಗದ ಕತೆ.! ಈತನ ಬೇನಾಮಿ ಸಂಪತ್ತು,ಇಲಾಖೆಯಿಂದ ಸ್ವಾಹ ಮಾಡಿದ ಪ್ರಕರಣಗಳ ಸಾಕ್ಷ್ಯಾಧಾರ ಸಮೇತ ಮುಂದೆ ಬಯಲಿಗೆ ತರುತ್ತೇವೆ.