ಚೆಂದುಳ್ಳಿ ಚೆಲುವೆಯ ಕಣ್ ಸನ್ನೆಗೆ ಕೋಟಿ ಕಳಕೊಂಡ ಇಂಜಿನಿಯರ್.!

ವಿಶೇಷ ಸುದ್ದಿ

ಹೆಣ್ಣು,ಹೊನ್ನು, ಮಣ್ಣು ಈ ಮೂರರ ಹಿಂದೆ ಬಿದ್ದವರು ಒಂದಲ್ಲ ಒಂದು ದಿನ ಗುಂಡಿಗೆ ಬೀಳುವುದು ಖಾತ್ರಿ. ಅದಕ್ಕೆ ಇರಬೇಕು, ಹಿರಿಯರು ಆ ಮೂರು ವಸ್ತುಗಳ ಬಗ್ಗೆ ತುಂಬಾ ಜಾಗ್ರತೆಯಿಂದ ಇರಬೇಕು ಎಂದು ಹೇಳಿರುವುದು.

ಇಲ್ಲೊಬ್ಬ ಸಾಫ್ಟವೇರ್ ಇಂಜನಿಯರ್ ಚೆಂದುಳ್ಳಿ ಚೆಲುವೆಯ ಕಣ್ ಸನ್ನೆಗೆ ಕ್ಲೀನ್ ಬೋಲ್ಡ್ ಆಗಿ ಒಂದೇ ತಿಂಗಳಲ್ಲೇ ಒಂದು ಕೋಟಿ ಕಳೆದುಕೊಂಡ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಸಾಫ್ಟವೇರ್ ಇಂಜನಿಯರ್ ಹೆಸರು ಕುಲದೀಪ್ ಪಟೇಲ್. ಈತನಿಗೆ ಸೋಷಿಯಲ್ ಮೀಡಿಯಾದಲ್ಲಿ ಆದಿತಿ ಅನ್ನುವ ಚೆಂದುಳ್ಳಿ ಚೆಲುವೆಯ ಪರಿಚಯವಾಗಿದೆ. ಆಕೆಯ ಕಣ್ ಸನ್ನೆಗೆ ಪಟೇಲ್ ಫಿದಾ ಆಗಿ ಬಿಟ್ಟಿದ್ದ. ಹೇಳಿ ಕೇಳಿ ಆದಿತಿ ಮಹಾ ವಂಚಕಿ. ಇಂತಹ ಗಿರಾಕಿಗಳನ್ನೇ ಹುಡುಕಿ ಗುಂಡಿಗೆ ಹಾಕುವುದರಲ್ಲಿ ನಿಸ್ಸೀಮ ಈಕೆ. ಪ್ರತಿಷ್ಠಿತ ಮ್ಯಾಟ್ರಿಮೋನಿಯಾದಲ್ಲಿ ಪರಿಚಯವಾಗಿದ್ದ ಚೆಂದುಳ್ಳಿ ಚೆಲುವೆ, ಯುನೈಟೆಡ್ ಕಿಂಗ್ ಡಮ್ ನಲ್ಲಿ ವಾಸ ಎಂಬುದಾಗಿ ಬಡಾಯಿ ಕೊಚ್ಚಿಕೊಂಡಿದ್ದಳು.

ಮೊದಲೇ ಆಕೆಯ ಕಣ್ ಸನ್ನೆಗೆ ಕ್ಲೀನ್ ಬೋಲ್ಡ್ ಆಗಿದ್ದ ಕುಲದೀಪ್ ನನ್ನು ತನ್ನದೇ ಸ್ವಂತ ಕಂಪನಿ ಇರುವುದಾಗಿ ಬೂಸಿ ಬಿಟ್ಟಿದ್ದಳು. ಕ್ರಿಪ್ಟೋ ಕರೆನ್ಸಿ ಮಾದರಿಯ ಬ್ಯಾನೋಕಾಯಿನ್ ನಲ್ಲಿ ಹೂಡಿಕೆ ಮಾಡುವಂತೆ ತಿಳಿಸಿದ್ದಾಳೆ. ಈಕೆಯನ್ನು ನಂಬಿ ಒಂದೇ ತಿಂಗಳಿನಲ್ಲಿ 1.34 ಕೋಟಿ ಹೂಡಿಕೆ ಮಾಡಿದ್ದ. ಬಳಿಕ ಹಣ ವಿತ್ ಡ್ರಾ ಮಾಡಲು ಮುಂದಾದಾಗ ತಮ್ಮ ಬ್ಯಾನೋಕಾಯಿನ್ ಖಾತೆಯನ್ನು ಫ್ರೀಜ್ ಮಾಡಿರುವುದಾಗಿ ಹೇಳಿದ್ದಾಳೆ. ಕೊನೆಗೆ ತಾನು ಮೋಸ ಹೋಗಿರುವುದಾಗಿ ಸಾಫ್ಟವೇರ್ ಇಂಜಿನಿಯರ್ ಗೆ ಗೊತ್ತಾದಾಗ ಕೋಟಿ ನುಂಗಿ ಬಿಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.