ಏಷ್ಯಾ ಕಪ್ 2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎದುರು 6 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟ ಮೊಹಮ್ಮದ್ ಸಿರಾಜ್ ಮತ್ತೊಂದು ಕೆಲಸದ ಮೂಲಕ ಕ್ರಿಕೆಟ್ ಪ್ರಿಯರ ಮನಗೆದಿದ್ದಾರೆ. ಪಂದ್ಯ ಶ್ರೇಷ್ಠ ಗೌರವದ ಜೊತೆಗೆ ಸಿಕ್ಕ ಬಹುಮಾನ ಹಣವನ್ನು ಮಳೆ ನಡುವೆ ಪಿಚ್ ಉಳಿಸುವ ಸಲುವಾಗಿ ಟೂರ್ನಿಯುದ್ದಕ್ಕೂ ಕಷ್ಟ ಪಟ್ಟ ಆರ್ ಪ್ರೇಮದಾಸ ಮೈದಾನದ ಸಿಬ್ಬಂದಿಗೆ ನೀಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಪಂದ್ಯದ ಬಳಿಕ ಸಿರಾಜ್ ಅವರಿಗೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯ ಬಹುಮಾನದ ಹಣ 4.15 ಲಕ್ಷ ರೂಪಾಯಿಗಳನ್ನು ಸ್ವೀಕರಿಸಿ ಮಾತನಾಡಿದ ಸಿರಾಜ್, ಈ ಬಹುಮಾನ ಮೊತ್ತವನ್ನು ನಾನು ಕ್ರೀಡಾಂಗಣದ ಸಿಬ್ಬಂದಿಗೆ ನೀಡುತ್ತೇನೆ. ಅವರು ಇಲ್ಲದೇ ಇದಿದ್ದರೆ ಈ ಟೂರ್ನಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಟೂರ್ನಿ ಅಡೆತಡೆಗಳನ್ನು ಮೆಟ್ಟಿನಿಂತು ಫಲಿತಾಂಶ ಕಂಡಿರುವುದರ ಸಂಪೂರ್ಣ ಶ್ರೇಯಸ್ಸು ಕ್ರೀಡಾಂಗಣದ ಸಿಬ್ಬಂದಿಗೆ ಸಲ್ಲಬೇಕು ಎಂದು ಹೇಳಿದರು. ಮೊಹಮದ್ ಸಿರಾಜ್ ಅವರ ಈ ಕಾರ್ಯವನ್ನು ಕ್ರಿಕೆಟ್ ಪ್ರೇಮಿಗಳು ಶ್ಲಾಘಿಸುತ್ತಿದ್ದಾರೆ.