ಸುಳ್ಯ ಜಯನಗರ ನಿವಾಸಿ ಮಿಸ್ರಿಯಾ ಎಂಬ ಮಹಿಳೆಗೆ ವಿದೇಶದಲ್ಲಿರುವ ಪತಿ ವಾಟ್ಸಾಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ನೀಡಿದ ಘಟನೆ ನಡೆದಿದೆ.ಕೇರಳದ ತ್ರಿಶೂರ್ ಮೂಲದ ಅಬ್ದುಲ್ ರಶೀದ್ ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಮಿಸ್ರಿಯಾ ಎಂಬಾಕೆಯನ್ನು ವಿವಾಹವಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 2 ವರ್ಷಗಳ ಹಿಂದೆ ಮಿಸ್ರಿಯಾ ಅವರನ್ನು ವಿದೇಶಕ್ಕೆ ಕರೆಸಿಕೊಂಡಿದ್ದ ಅಬ್ದುಲ್ ರಶೀದ್ ಬಳಿಕ ಎರಡನೇ ಮಗುವಿನ ಹೆರಿಗೆಗಾಗಿ ಸುಳ್ಯಕ್ಕೆ ಕರೆತಂದು ಪತ್ನಿಯ ತವರು ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದ್ದ.
ಆದರೆ ಕಳೆದ ಆರು ತಿಂಗಳಿನಿಂದ ಸಂಸಾರದಲ್ಲಿ ವಿರಸ ಉಂಟಾಗಿತ್ತು. ಈ ಬಗ್ಗೆ ಸಂಬಂಧಿಕರು, ಹಿರಿಯರು ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು.ಆದರೆ ಇದಕ್ಕೆ ಆಸ್ಪದ ನೀಡದ ಅಬ್ದುಲ್ ರಶೀದ್, ಪತ್ನಿಯ ಮೊಬೈಲಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನ ಸಂದೇಶ ಕಳುಹಿಸಿದ್ದು ಇದರಿಂದ ಮನನೊಂದ ಮಿಸ್ರಿಯಾ ಸುಳ್ಯ ಪೊಲೀಸರಿಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ.ಸುಳ್ಯ ಪೊಲೀಸರು ಮುಸ್ಲಿಂ ಪ್ರೊಟೆಕ್ಷನ್ ಆಫ್ ರೈಟ್ ಆಕ್ಟ್ 2019 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.