ರಾಜ್ಯದಲ್ಲಿ ಆಪರೇಷನ್ ಹಸ್ತ; ಹಂತ ಹಂತವಾಗಿ ವಿವಿಧ ಪಕ್ಷಗಳ ನಾಯಕರನ್ನು ಕಾಂಗ್ರೆಸ್‌ಗೆ ಸೆಳೆಯುವ ಕಾರ್ಯಾಚರಣೆ

ರಾಜ್ಯ

ಆಪರೇಷನ್ ಹಸ್ತ ಮುಂದುವರಿಯುತ್ತಿದೆ. ರಾಜ್ಯದಲ್ಲಿ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳ ವಿವಿಧ ಪಕ್ಷಗಳ ನಾಯಕರನ್ನು ಕಾಂಗ್ರೆಸ್‌ಗೆ ಸೆಳೆಯುವ ಕಾರ್ಯಾಚರಣೆಗಳು ತೀವ್ರಗೊಂಡಿವೆ. ಮಧ್ಯ ಕರ್ನಾಟಕ ಭಾಗದ ಮೂವರು ಮಾಜಿ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಮಾತುಕತೆ ಮುಂದುವರೆದಿದೆ.ಮಧ್ಯ ಕರ್ನಾಟಕ ಭಾಗದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಹಠಕ್ಕೆ ಬಿದ್ದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ, ಚೆನ್ನಗಿರಿ ಮಾಡಾಳ್ ವಿರುಪಾಕ್ಷಪ್ಪ, ಜಗಳೂರು ಕ್ಷೇತ್ರದ ಗುರುಸಿದ್ದನಗೌಡರೊಂದಿಗೆ ಮಾತುಕತೆ ನಡೆಸಿದರು.

ದಾವಣಗೆರೆಯಲ್ಲಿ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಪ್ರಾಬಲ್ಯವಿದ್ದರೂ ಹಲವಾರು ಬಾರಿ ಬಿಜೆಪಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದೆ. ಈ ಅವಧಿಯಲ್ಲಿ ಈ ಫಲಿತಾಂಶ ಬದಲಾವಣೆ ಮಾಡಬೇಕೆಂದು ಹಠಕ್ಕೆ ಬಿದ್ದಿರುವ ರಾಜ್ಯದ ಕಾಂಗ್ರೆಸಿಗರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯಿತ ಸಮುದಾಯ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದೆ. ಈ ಲಿಂಗಾಯಿತ ಸಮುದಾಯದ ಪ್ರಮುಖ ನಾಯಕರನ್ನು ಸೆಳೆಯುವ ಮೂಲಕ ಲೋಕಸಭೆ ಚುನಾವಣೆಯಲ್ಲೂ ಗೆಲ್ಲುವ ಯಾತ್ರೆಯನ್ನು ಕಾಂಗ್ರೆಸ್ ನಿರ್ಧರಿಸಿದೆ.