ಕೇಸರಿ ಬಿಟ್ಟು ಬರ್ಮುಡಾ ತೊಟ್ಟು ವೇಷ ಮರೆಸಿದ್ದ ಸ್ವಾಮಿ ಸಿಸಿಬಿ ಖೆಡ್ಡಾಕ್ಕೆ.!
ಕುಂದಾಪುರದ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 7 ಕೋಟಿ ವಂಚಿಸಿದ ಚೈತ್ರಾ ಆಂಡ್ ಟೀಮಿನಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದ ಹೊಸಪೇಟೆಯ ಸಂಸ್ಥಾನ ಮಠದ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಈ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಅತ್ಯಂತ ಆಪ್ತ, ಟಿಕೆಟ್ ಹಂಚಿಕೆಯಲ್ಲಿ ಕರ್ನಾಟಕದ ಜವಾಬ್ದಾರಿ ಹೊತ್ತ ಪಾತ್ರಧಾರಿಯಾಗಿದ್ದರು. ಈ ವಂಚನೆ ಪ್ರಕರಣದಲ್ಲಿ 1.5 ಕೋಟಿ ರೂಪಾಯಿ ಉದ್ಯಮಿಯಿಂದ ಹಾಲಶ್ರೀ ಸ್ವಾಮಿ ಪೀಕಿಸಿಕೊಂಡಿದ್ದರು. ಪ್ರಮುಖ ಆರೋಪಿ ಚೈತ್ರಾ ಸಿಸಿಬಿ ಬಲೆಗೆ ಬೀಳುತ್ತಿದ್ದಂತೆ ಅಭಿನವ ಹಾಲಶ್ರೀ ಸ್ವಾಮಿ ತಲೆಮರೆಸಿಕೊಂಡಿದ್ದರು. ಸ್ವಾಮಿ ಬಲೆಗೆ ಬಿದ್ದರೆ ದೊಡ್ಡವರ ಹೆಸರು ಹೊರಬರುತ್ತದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು.
ಇದೀಗ ಒಡಿಶಾ ಪೊಲೀಸರ ಬಲೆಗೆ ವಂಚಕ ಅಭಿನವ ಹಾಲಶ್ರೀ ಸ್ವಾಮೀಜಿ ಬಿದ್ದಿದ್ದು ಅಭಿನಯದಲ್ಲಿ ತಮ್ಮದ್ದು ಎತ್ತಿದ್ದ ಕೈ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೇಸರಿಗೆ ಭಾಯಿ ಭಾಯಿ ಹೇಳಿ ಬರ್ಮುಡಾ, ಟೀ ಶರ್ಟ್ ಧರಿಸಿ ಯಾರಿಗೂ ಅನುಮಾನ ಬರದಂತೆ ರೈಲಿನ ಮೂಲಕವೇ ಪ್ರಯಾಣಿಸುತ್ತಿದ್ದರು.
ಆದರೆ ಪೊಲೀಸರು ಸ್ವಾಮೀಜಿಯ ಕಾರು ಚಾಲಕನನ್ನು ಎತ್ತಾಕಿಕೊಂಡು ವಿಚಾರಣೆ ನಡೆಸಿದಾಗ ಸ್ವಾಮೀಜಿ ಹೊಸ ಸಿಮ್ ನಿಂದ ಮಾತನಾಡುತ್ತಿದ್ದುದು ತಿಳಿಯಿತು. ಆ ನಂಬರ್ ಟ್ರೇಸ್ ಮಾಡಿದಾಗ ಹೈದರಾಬಾದ್ ಕಡೆಯಲ್ಲಿ ಇರುವುದು ತಿಳಿಯಿತು. ಪೋನ್ ಸಂಪರ್ಕವೇ ಸ್ವಾಮೀಜಿ ಸುಳಿವನ್ನು ಪೊಲೀಸರಿಗೆ ನೀಡಿತ್ತು.
ಹಾಲಶ್ರೀ ತಾನೊಬ್ಬ ಸ್ವಾಮೀಜಿ ಎಂಬುದು ಜನರಿಗೆ ತಿಳಿಯದಂತೆ ಸಾಮಾನ್ಯರ ವೇಷದಲ್ಲಿ ರೈಲು, ಬಸ್ಸಿನ ಮೂಲಕವೇ ಸಂಚರಿಸುತ್ತಿದ್ದರು. ಪ್ಯಾಂಟ್, ಟೀ ಶರ್ಟ್, ಕೆಲವೊಮ್ಮೆ ಬರ್ಮುಡಾ ಹಾಕಿಕೊಂಡು ಸಾಮಾನ್ಯ ಪ್ರವಾಸಿಗರ ರೀತಿ ಬಿಂಬಿಸಿಕೊಳ್ಳುತ್ತಿದ್ದರು. ಒಡಿಶಾಕ್ಕೆ ತೆರಳಿ ಅಲ್ಲಿಂದ ನೇರವಾಗಿ ಕಾಶಿಗೆ ತೆರಳಲು ತಯಾರಿ ಮಾಡುತ್ತಿದ್ದಾಗ ಒಡಿಶಾ ಪೊಲೀಸರ ಸಹಕಾರದೊಂದಿಗೆ ಸಿಸಿಬಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ.