ಮಂಗಳೂರು: ಮಿನಿ ಆಡಳಿತ ಸೌಧದಲ್ಲಿ ದಲ್ಲಾಳಿಗಳದ್ದೇ ದರ್ಬಾರ್.!

ಕರಾವಳಿ

ಅಧಿಕಾರಿಗಳು-ದಲ್ಲಾಳಿಗಳ ಮಧ್ಯೆ ನಡೆಯುತ್ತೆ ಭರ್ಜರಿ ಡೀಲ್.!

ಒಂದು ಮಾತಿದೆ. ‘ಫಾಸ್ಟ್ ಸರ್ವೀಸ್’ ಬೋರ್ಡ್ ಹಾಕಿರುವ ಬಸ್ಸಲ್ಲಿ ನೀವೇನಾದರೂ ‘ಎಕ್ಸ್ ಪ್ರೆಸ್’ ಬಸ್ ಅಂತ ತಿಳಿದು ಹತ್ತಿದರೆ ಇಳಿಯುವ ತನಕ ನೀವು ಗೋಳು ಹೊಯ್ದು ಕೊಳ್ಳುವುದು ಖಂಡಿತ. ಏಕೆಂದರೆ ಸಾಮಾನ್ಯ ಬಸ್ ಇದಕ್ಕಿಂತ ವೇಗವಾಗಿ ಹೋಗುತ್ತದೆ. ಅದು ಅವರ ತಪ್ಪಲ್ಲ. ಪ್ರಯಾಣಿಕರನ್ನು ಸೆಳೆಯಲು ಅದು ಅವರ ತಂತ್ರಗಾರಿಕೆ ಅಷ್ಟೇ.

ಅದೇ ರೀತಿ ಸರಕಾರಿ ಕಚೇರಿಗಳಲ್ಲಿ ‘ಲಂಚ ಮಹಾಪಾಪ’ ‘ಮಧ್ಯವರ್ತಿಗಳಿಗೆ ಅವಕಾಶವಿಲ್ಲ’ ಅನ್ನುವ ಬೋರ್ಡ್ ನೇತಾಡುತ್ತಿರುತ್ತದೆ. ಅಲ್ಲಿ ಬ್ರಹ್ಮಾಂಡ ಗಾತ್ರದ ಭ್ರಷ್ಟಾಚಾರ ನಡೆಯುತ್ತಿರುತ್ತದೆ. ತಿಮಿಂಗಿಲ ಬ್ರೋಕರ್ ಗಳ ಹಾವಳಿ ಇದ್ದೇ ಇರುತ್ತದೆ. ನೀವೊಮ್ಮೆ ಮಂಗಳೂರು ಮಿನಿ ಆಡಳಿತ ಸೌಧದ ಒಳ ಹೊಕ್ಕರೆ ಬ್ರೋಕರ್ ಗಳದ್ದೇ ದರ್ಬಾರ್. ಇಲ್ಲಿ ಜನಸಾಮಾನ್ಯರು ಫೈಲ್ ಹಿಡಿದುಕೊಂಡು ಆಯಾಯ ಕೆಲಸಕ್ಕೆ ಹೋದರೆ ಏನಾದರೂ ಸತಾಯಿಸಿ ಅಲ್ಲಿಂದ ಕಳುಹಿಸಿಕೊಡುತ್ತಾರೆ. ಆದರೆ ಅದೇ ಫೈಲ್ ಬ್ರೋಕರ್ ಮೂಲಕ ಹೋದರೆ ಅಧಿಕಾರಿಗಳು ಕ್ಷಣ ಮಾತ್ರದಲ್ಲಿ ನಿಮ್ಮ ಕೆಲಸ ಮಾಡಿಕೊಡುತ್ತಾರೆ. ಏಕೆಂದರೆ ಇಲ್ಲಿ ಅಧಿಕಾರಿಗಳು-ಬ್ರೋಕರ್ ಗಳ ಮಧ್ಯೆ ಅವಿನಾಭಾವ ಸಂಬಂಧ. ಒಂದೊಂದು ಫೈಲಿಗೂ ಇಂತಿಷ್ಟು ಕಮೀಷನ್ ಅಧಿಕಾರಿಗಳ ಜೇಬು ತುಂಬಿರುತ್ತದೆ. ಅಧಿಕಾರಿಗಳು ಜನಸಾಮಾನ್ಯರಿಂದ ನೇರವಾಗಿ ಲಂಚಕ್ಕೆ ಕೈಯೊಡ್ಡುವುದಿಲ್ಲ. ಬ್ರೋಕರ್ ಗಳ ಮೂಲಕವೇ ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ.

ನಾವು ಇತ್ತೀಚೆಗೆ ‘ಪ್ರಶಾಂತ’ ವಾಗಿದ್ದ ಮಿನಿ ಆಡಳಿತ ಸೌಧ ‘ಪಾಟೀಲ’ ನಿಂದಾಗಿ ಹಂಡಾಲೆದ್ದು ಹೋದ ಬಗ್ಗೆ ಸಮಗ್ರ ವಿವರಗಳನ್ನು ಪ್ರಕಟಿಸಿದ್ದೆವು. ಓದುಗ ಬಳಗ ಮಂಗಳೂರು ಮಿನಿ ಆಡಳಿತ ಸೌಧದಲ್ಲಿ ನಡೆಯುತ್ತಿರುವ ಲಂಚದ ಅಮೇಧ್ಯದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿರುತ್ತಾರೆ. ಮುಂದೆ ಹಂತ ಹಂತವಾಗಿ ಇದನ್ನು ಪ್ರಕಟಿಸಲಿದ್ದೇವೆ. ಸರ್ವೇಯರ್ ಇಲಾಖೆಯಲ್ಲಿ ನಡೆಯುತ್ತಿರುವ ಭಾರೀ ಗಾತ್ರದ ಭ್ರಷ್ಟಾಚಾರದ ಬಗ್ಗೆ ಓದುಗ ಬಳಗ ವಿವರವನ್ನು ನೀಡಿದೆ. ಮಿನಿ ಆಡಳಿತ ಸೌಧದಲ್ಲಿ ಕೂತಿರುವ ಡಜನ್ ಗಟ್ಟಲೆ ಸರ್ವೇಯರ್ (ಭೂಮಾಪಕರು) ಗಳು ಅದರಲ್ಲೂ ತಾಲೂಕು ಸರ್ವೇಯರ್ ಗಳು, ಸರಕಾರಿ ಸರ್ವೇಯರ್ ಗಳು ಸೇರಿದಂತೆ ಒಟ್ಟಾರೆ ಇಲ್ಲಿನ ಸರ್ವೇ ಇಲಾಖೆಯಲ್ಲಿ ಕರ್ತವ್ಯದಲ್ಲಿರುವವರು ಜನಸಾಮಾನ್ಯರನ್ನು ಕೆಲಸಕ್ಕಾಗಿ ಸತಾಯಿಸುತ್ತಿರುವ ಬಗ್ಗೆ, ಜನಸಾಮಾನ್ಯರನ್ನು ದೋಚುತ್ತಿರುವ ಬಗ್ಗೆ ಇಂಚಿಂಚೂ ಮಾಹಿತಿ ನೀಡಿರುತ್ತಾರೆ. ಈ ಬಗ್ಗೆ ಸಮಗ್ರವಾದ ವರದಿ ಮುಂದೆ ಬರಲಿದೆ. ಅದರ ನಡುವೆಯೇ ಬ್ರೋಕರ್ ಗಳು, ಇಲ್ಲಿನ ಅಧಿಕಾರಿಗಳು ನಡೆಸುವ ಭರ್ಜರಿ ಡೀಲ್ ಪ್ರಕರಣ ಹುಬ್ಬೇರಿಸುವಂತದ್ದು. ತಹಶೀಲ್ದಾರ್ ಇದಕ್ಕೆ ಸಾಥ್ ನೀಡುತ್ತಿರುವುದು ಇನ್ನೂ ಅಚ್ಚರಿದಾಯಕ ವಿಚಾರ. ಒಟ್ಟಾರೆ ಕುರುಡು ಕಾಂಚಾಣ ಇವರೆಲ್ಲರನ್ನೂ ಕೈ ಕಟ್ಟಿ ಹಾಕಿದೆ.

ಇನ್ನೊಂದು ಇಂಟರೆಸ್ಟಿಂಗ್ ಸ್ಟೋರಿ ಏನೆಂದರೆ, ಇಲ್ಲಿ ಕೆಲವೇ ಕೆಲವು ತಿಮಿಂಗಿಲದಂತಹ ದಲ್ಲಾಳಿಗಳು ದರ್ಬಾರ್ ನಡೆಯುತ್ತಿರುವುದು. ಸಣ್ಣ ಮಟ್ಟಿನ ಬ್ರೋಕರ್ ಗಳು ಬಂದರೆ ಇವರು ಅಧಿಕಾರಿಗಳಿಗೆ ಫಿಟ್ಟಿಂಗ್,ಸಟ್ಟಿಂಗ್ ಇಟ್ಟು ಕೆಲಸ ಆಗದಂತೆ ನೋಡಿಕೊಳ್ಳುತ್ತಾರೆ. ಅಧಿಕಾರಿಗಳು ಕೂಡ ದೊಡ್ಡ ದೊಡ್ಡ ಡೀಲ್ ಕೊಡುವವರಿಗೆ ಮಾತ್ರ ಹೆಚ್ಚು ಅಡ್ಜಸ್ಟ್ ಮೆಂಟ್. ಸಣ್ಣ ಡೀಲಿಗೆ ಅಷ್ಟೇನೂ ತಲೆಕೆಡಿಸಿಕೊಳ್ಳಲ್ಲ. ಸಂಜೆ ಸರಕಾರಿ ಸಮಯ ಮುಗಿದ ನಂತರ ಪಕ್ಕದಲ್ಲಿರುವ ಕ್ಯಾಂಟೀನ್ ನಲ್ಲಿ ಅಥವಾ ನಗರದ ಪ್ರತಿಷ್ಠಿತ ಹೊಟೇಲುಗಳಲ್ಲಿ ಅಧಿಕಾರಿಗಳು ಮತ್ತು ದಲ್ಲಾಳಿಗಳ ಮಧ್ಯೆ ದೊಡ್ಡ ಡೀಲ್ ನಡೆಯುತ್ತಿರುವುದು ಸುಳ್ಳಲ್ಲ. 40 ಪರ್ಸೆಂಟ್ ಅಧಿಕಾರಿಗಳ ಜೇಬು ತುಂಬಿದರೆ, 60 ಪರ್ಸೆಂಟ್ ಬ್ರೋಕರ್ ಗಳ ದಪ್ಪ ಕಿಸೆಯೊಳಗೆ ಹೋಗುತ್ತದೆ. ಬ್ರೋಕರ್ ಇಲ್ಲದೆ ಇಲ್ಲಿ ಕೆಲಸ ನಡೆಯದೇ ಇರುವುದರಿಂದ ಅನಿವಾರ್ಯವಾಗಿ ಜನಸಾಮಾನ್ಯರು ಒಬ್ಬೊಬ್ಬ ಬ್ರೋಕರ್ ಗಳ ಹಿಂದೆ ಹೋಗಿ ಕೆಲಸ ಮಾಡಿಕೊಂಡು ಬರಬೇಕಿದೆ. ಬ್ರೋಕರ್ ಗಳು ಕೇಳಿದಷ್ಟು ದುಡ್ಡು ಕೊಡಬೇಕಾಗುತ್ತದೆ. ಸರ್ವೇಯರ್ ಗೆ ಇಂತಿಷ್ಟು, ಜವಾನನಿಗೆ ಇಂತಿಷ್ಟು, ತಹಶೀಲ್ದಾರ್ ಗೆ ಇಂತಿಷ್ಟು ಕೊಡಲಿಕ್ಕೆ ಇದೆಯೆಂದು ಪೀಕಿಸಿ ಇವರು ಅಧಿಕಾರಿಗಳಿಗೆ ಕೊಡುವುದು ಅರ್ಧದಷ್ಟು ಮಾತ್ರ. ಈ ಅಧಿಕಾರಿಗಳು ಯಾವುದೇ ರಿಸ್ಕ್ ಇಲ್ಲದೆ ಕುಂತಲ್ಲಿಯೆ ಕಮಾಯಿ ಆಗುತ್ತದೆ ಎಂದು ಅಂತ ದಲ್ಲಾಳಿಗಳ ಫೈಲನ್ನು ಫಟಾಫಟ್ ಮಾಡಿ ಕೊಡುತ್ತಾರೆ.

ಒಂದು ಸಣ್ಣ ನಕ್ಷೆಗೆ ಜನಸಾಮಾನ್ಯರು ಹೋದರೆ 21 ದಿನ ಕಾಯಬೇಕಾಗುತ್ತದೆ ಎಂದು ಹೇಳಿ ಸಾಗ ಹಾಕುವ ಅಧಿಕಾರಿ ವರ್ಗ, ದಲ್ಲಾಳಿಗಳ ಮೂಲಕ ಹೋದರೆ ಅರ್ಧ ಗಂಟೆಯಲ್ಲಿಯೇ ಫೈಲ್ ರೆಡಿ ಮಾಡಿಕೊಂಡು ಇದುತ್ತಾರೆ. ಭಕ್ಷೀಸು ಸಿಗುತ್ತದೆ ಅನ್ನುವ ಗ್ಯಾರಂಟಿ ಇರುವುದರಿಂದ ದಲ್ಲಾಳಿಗಳದ್ದೇ ಇಲ್ಲಿ ದರ್ಬಾರ್.

ಇಲ್ಲಿ ಅಧಿಕಾರಿಗಳು ಎಷ್ಟೊಂದು ಧನಧಾಹಿಗಳಾಗಿದ್ದಾರೆ ಅನ್ನುವುದಕ್ಕೆ ದಲ್ಲಾಳಿಗಳು ನೀಡುವ ಫೈಲ್ ಅಸಲಿಯೋ ನಕಲಿಯೋ ಎಂಬುದು ನೋಡದೆ ಇವರಿಗೆ ಇಂತಿಷ್ಟು ಸಂದಾಯವಾದರೆ ಸಾಕು; ಷರಾ ಬರೆದು ಕಾನೂನಿನ ಕುಣಿಕೆಯಿಂದ ಬಚಾವಾಗುತ್ತಿದ್ದಾರೆ. ಇತ್ತೀಚೆಗೆ ಅಲ್ಪಸಂಖ್ಯಾತ ಸಚಿವರು ಏಕಾಏಕಿ ವಸತಿ ನಿಲಯಕ್ಕೆ ಭೇಟಿ ನೀಡಿದಂತೆ, ಜಿಲ್ಲಾಧಿಕಾರಿಗಳು, ಕಂದಾಯ ಸಚಿವರು ಮುನ್ಸೂಚನೆ ನೀಡದೆ ಮಿನಿ ಆಡಳಿತ ಸೌಧಕ್ಕೆ ದಾಳಿ ಮಾಡಿದರೆ ಇಲ್ಲಿನ ಹಣೆಬರಹದ ಪೂರ್ತಿ ಚಿತ್ರಣ ಬಯಲಾಗಬಹುದು. ಏಕೆಂದರೆ ಅಷ್ಟೊಂದು ಧನಧಾಹಿಯಾಗಿಬಿಟ್ಟಿದ್ದಾರೆ ದಪ್ಪ ಚರ್ಮದ ಅಧಿಕಾರಿಗಳು. ಇಲ್ಲಿ ಜೈಲಿಗೆ ಹೋಗಿ ಮುದ್ದೆ ಮುರಿದು ಬಂದ ಸರ್ವೇಯರ್ ಒಬ್ಬರು ಕೂಡ ಅದೇ ಜಾಗದಲ್ಲಿ ವಕ್ಕರಿಸುತ್ತಾರೆ.ತಹಶೀಲ್ದಾರರ ಡೈವರ್ ಒಬ್ಬನಿಂದ ಸಟ್ಟಿಂಗು, ಪಿಟ್ಟಿಂಗು, ಡೀಲು ಎಲ್ಲವೂ ಸರಾಗವಾಗಿ ನಡೆಯುತ್ತದೆ.(ಇವರ ಜನ್ಮ ಜಾತಕ ಮುಂದೆ ಬಿಡಿಸೋಣ) ಅಂದರೆ ಮಿನಿ ಆಡಳಿತ ಸೌಧದ ಅವಸ್ಥೆ ಹೇಗಿರಬಹುದು ಎಂಬುದನ್ನು ನೀವೇ ಊಹಿಸಿ.

‘ಬೇಲಿಯೇ ಎದ್ದು ಹೊಲ ಮೇಯ್ದರೆ’ ಏನಾಗಬಹುದು? ಇಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕಾದ ತಹಶೀಲ್ದಾರ್ ರವರಿಗೆ ಒಂದೊಂದು ಫೈಲಿಗೆ ಇಂತಿಷ್ಟು ಕೊಡಬೇಕಾದರೆ ಯಾರನ್ನು ದೂರುವುದು ನೀವೇ ಹೇಳಿ. ಕೊಟ್ಟಾರದಲ್ಲಿ ಗಡಡ್ಡಾಗಿ ನಿದ್ರಿಸುತ್ತಿರುವ ಲೋಕಾಯುಕ್ತ ಇಲಾಖೆ ಪರ್ಮನೆಂಟಾಗಿ ಮಿನಿ ಆಡಳಿತ ಸೌಧದ ಮುಂದೆ ಒಂದು ಟೆಂಟ್ ಹಾಕಿ ಕೂತರೆ ದೊಡ್ಡ ದೊಡ್ಡ ತಿಮಿಂಗಿಲಗಳು ಬಲೆಗೆ ಬೀಳಬಹುದು.