ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳ ಗುಡಿಸಲುಗಳನ್ನು ಉಳಿಸಲು, ಶಾಶ್ವತ ಮನೆ ವ್ಯವಸ್ಥೆ ಕಲ್ಪಿಸಲು ಒತ್ತಾಯ- ಡಿವೈಎಫ್ಐ

ಕರಾವಳಿ

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬೋಳಾರ ವಾರ್ಡಿನ ನೇತ್ರಾವತಿ ನದಿ ತೀರದಲ್ಲಿ ಕಳೆದ ಹಲವಾರು ವರುಷಗಳಿಂದ ತೆಪ್ಪದ ಮೂಲಕ ಮೀನು ಹಿಡಿದು ಕಾಯಕ ನಡೆಸುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ 8 ಕುಟುಂಬಗಳು ತಮ್ಮ ಗುಡಿಸಲುಗಳನ್ನು ಕಳೆದುಕೊಂಡು ಬೀದಿಪಾಲಾಗುವ ಪರಿಸ್ಥಿತಿ ಬಂದೊದಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ 30 ಕೋಟಿ ವೆಚ್ಚದಲ್ಲಿ (PROMINADE PACKAGE 2A) ನದಿ ತೀರದಲ್ಲಿ ನಿರ್ಮಿಸಲು ಹೊರಟಿರುವ ವಾಕಿಂಗ್ ಟ್ರಾಕ್, ಸೈಕಲ್ ಟ್ರಾಕ್, ಪ್ಲೆ ಏರಿಯಾದಂತಹ ಕಾಮಗಾರಿಗಳು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಗುಡಿಸಲುಗಳಿರುವ ಜಾಗದಲ್ಲೇ ನಿರ್ಮಾಣವಾಗಲಿರುವುದರಿಂದ ಈ ಸಮುದಾಯ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿರುವ ಸಣ್ಣ ಗುಡಿಸಲುಗಳನ್ನು ಕಳೆದುಕೊಂಡು ಬೀದಿಗೆ ಬೀಳುವ ಹೀನಾಯ ಪರಿಸ್ಥಿತಿ ಉಂಟಾಗಲಿದೆ. ಈ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ, ಶಾಶ್ವತ ಸೂರಿಗಾಗಿ ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಿ ಹಲವು ವರುಷಗಳು ಕಳೆದರೂ ಈವರೆಗೂ ಯಾವುದೇ ಒಂದು ಸವಲತ್ತುಗಳನ್ನು ತೆಗೆಸಿಕೊಡಲು ಆಳುವ ಸರಕಾರಗಳಿಗಾಗಲಿ, ಜಿಲ್ಲಾಡಳಿತಕ್ಕಾಗಲಿ ಸಾಧ್ಯವಾಗಿಲ್ಲ.

ಸದ್ಯ ಅವರೇ ಟರ್ಪಾಲ್ ಹಾಸಿ ನಿರ್ಮಿಸಿ ಬದುಕುತ್ತಿರುವ ಗುಡಿಸಲುಗಳಲ್ಲೂ ನೆಮ್ಮದಿಯಿಂದ ಜೀವನ ನಡೆಸುತ್ತಿರುವಾಗ ಇಂತಹ ಯೋಜನೆಗಳು ಆ ಸಮುದಾಯವನ್ನು ಇನ್ನಷ್ಟು ಅನಾಥರನ್ನಾಗಿಸುವ ಸ್ಥಿತಿಗೆ ತಲುಪಿಸುತ್ತಿದೆ. ಆದ್ದರಿಂದ ಸ್ಮಾರ್ಟ್ ಸಿಟಿ ಯೋಜನೆಯಿಂದ ಮನೆ ಕಳೆದುಕೊಂಡು ಬೀದಿ ಪಾಲಾಗುವ ಆತಂಕದಲ್ಲಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ 8 ಗುಡಿಸಲುಗಳನ್ನು ಉಳಿಸಲು ಅಥವಾ ಪರ್ಯಾಯ ಶಾಶ್ವತ ಮನೆ ನಿರ್ಮಿಸಿಕೊಡಲು ಸಂಬಂಧಪಟ್ಟ ಇಲಾಖೆ, ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.