ರಾಜ್ಯದ ಸಂಸದರು ಪ್ರಧಾನಿ ಮೋದಿ ಮುಂದೆ ಬಾಯಿ ಬಿಡಲು ಹೆದರುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

ರಾಜ್ಯ

ಕಾವೇರಿ ನೀರು ನಿರ್ವಹಣೆ ವಿಷಯದಲ್ಲಿ ರಾಜ್ಯದ ಸಂಸದರು ಪ್ರಧಾನಿ ಮುಂದೆ ಬಾಯಿ ಬಿಡಲು ಹೆದರುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಂಸದರ ಬಗ್ಗೆ ಬಹಿರಂಗವಾಗಿ ಟೀಕೆ ಮಾಡಬಾರದು. ಇದರಿಂದ ತಪ್ಪು ಸಂದೇಶ ರವಾನೆಯಾಗಿದೆ ಎಂದು ಬಿಜೆಪಿಯವರು ಮನವಿ ಮಾಡಿಕೊಂಡಿದ್ದಾರೆ.

ಹೊರಗೆ ಬಂದು ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿಯವರನ್ನು ಟೀಕೆ ಮಾಡುತ್ತಾರೆ. ಪ್ರಧಾನಿಯವರ ಬಳಿ ಮಾತನಾಡಲು ಅವರಿಗೆ ಧೈರ್ಯವಿಲ್ಲ. ಕನಿಷ್ಠ ನಮಗೆ ಪ್ರಧಾನಿ ಭೇಟಿಯಾದರೂ ಸಮಯ ಕೊಡಿ. ನಮ್ಮ ಜೊತೆ ಬನ್ನಿ ಎಂದು ಕೇಳಿದರು. ಆಸ್ತಿ ಪಾಲು ಕೇಳಲು ಹೆದರುವಂತೆ ಬಿಜೆಪಿಯವರು ಭಯ ಬೀಳುತ್ತಿದ್ದಾರೆ. ನಾಡಿನ ಹಿತಾಸಕ್ತಿಯ ವಿಷಯದಲ್ಲೂ ಈ ರೀತಿ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದರು.ಇಂಡಿಯಾ ಮೈತ್ರಿಕೂಟದಲ್ಲಿ ಡಿಎಂಕೆ, ಕಾಂಗ್ರೆಸ್ ಸಹಪಕ್ಷಗಳಿರಬಹುದು. ಆದರೆ ರಾಜಕೀಯ ಬೇರೆ. ನಾಡಿನ ಹಿತಾಸಕ್ತಿ ವಿಷಯ ಬಂದಾಗ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.