ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ:ಆರೋಪಿ ಖುಲಾಸೆ

ಕರಾವಳಿ

ಆರೋಪಿಯ ಪರ ವಾದ ಮಂಡಿಸಿದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ

ಪುತ್ತೂರು : ಆರು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದ,ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಕೋತ್ನಡ್ಕ ನಿವಾಸಿ ಕಿಶೋರ್.ಕೆ ಎಂಬವರನ್ನು ಪುತ್ತೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್.ವಿ ರವರು ನಿರಪರಾಧಿ ಎಂದು ಬಿಡುಗಡೆಗೊಳಿಸಲು ಆದೇಶಿಸಿರುತ್ತಾರೆ.

2017 ರಂದು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ದಂಡಕಜೆ ಎಂಬಲ್ಲಿ ಸಿಲ್ವೆಸ್ಟರ್ ಡಿಸೋಜ ರವರ ಹಳೆಯ ಮನೆಯಲ್ಲಿ, ರಾತ್ರಿ ವೇಳೆಯಲ್ಲಿ ಕಿಶೋರ್. ಕೆ ರವರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನೊಂದ ಬಾಲಕಿ ಸುಳ್ಯ ಪೊಲೀಸ್ ಠಾಣೆಗೆ ವಿಳಂಬವಾಗಿ ದೂರನ್ನು ನೀಡಿದ್ದರು.

ಈ ದೂರಿನಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 376 ಮತ್ತು ಪೋಕ್ಸೋ ಕಾಯ್ದೆಯ ಕಲಂ.5 ಮತ್ತು 6 ರ ಅನ್ವಯದಂತೆ ಪ್ರಕರಣ ದಾಖಲಿಸಿದ್ದರು. ತದನಂತರ ತನಿಖೆ ಮುಂದುವರಿಸಿ ಆರೋಪಿ ಎನ್ನಲಾಗಿದ್ದ ಕಿಶೋರ್. ಕೆ. ಎಂಬವರನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿದ್ದರು. ನಂತರ ಪೊಲೀಸರು ಆರೋಪಿಯ ವಿರುದ್ಧ ದೋಷರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ವೇಳೆ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ, ಮಂಗಳೂರಿನ ಎರಡನೇ ಜಿಲ್ಲಾ ನ್ಯಾಯಾಲಯದಲ್ಲಿದ್ದ ಪ್ರಕರಣವು ಈ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುತ್ತದೆ.

ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ಪ್ರಾಸಿಕೂಷನ್ ತನ್ನ ಪರವಾಗಿ ಸುಮಾರು 26 ಸಾಕ್ಷಿಗಳ ಪೈಕಿ 12 ಸಾಕ್ಷಿಗಳನ್ನು ತನಿಖೆ ನಡೆಸಿತ್ತು. ತನಿಖೆ ನಂತರ ಮಾನ್ಯ ನ್ಯಾಯಾಲಯ ಪಕ್ಷಗಾರರ ವಾದ ವಿವಾದವನ್ನು ಆಲಿಸಿತ್ತು. ಈ ಹಂತದಲ್ಲಿ ಆರೋಪಿ ಪರ ವಕೀಲರಾದ ಶ್ರೀ ಮಹೇಶ್ ಕಜೆಯವರು ದೂರು ಸಲ್ಲಿಸುವಿಕೆಯಲ್ಲಿನ ವಿಳಂಬ,ಆಕೆಯ ವಯಸ್ಸನ್ನು ಸಂಶಯಾತೀತವಾಗಿ ಸಾಬೀತುಪಡಿಸುವಲ್ಲಿ ವಿಫಲತೆ, ಆರೋಪಿ ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೆ ಹೋಗಬಹುದಾದ ಸಾಧ್ಯತೆ, ಸಂತ್ರಸ್ಥೆ ಘಟನೆ ನಡೆದಿದೆ ಎನ್ನಲಾದ ಎರಡು ದಿನದ ಮೊದಲು ನಾಪತ್ತೆಯಾಗಿದ್ದು, ಆ ಎರಡು ದಿವಸ ಆಕೆ ಎಲ್ಲಿದ್ದಳು, ಯಾರ ಜೊತೆ ಇದ್ದಳು ಇತ್ಯಾದಿ ವಿಚಾರಗಳ ಕುರಿತು ತನಿಖೆ ನಡೆಸದೆ ಇರುವುದು, ಆರೋಪಿತ ಘಟನೆ ನಡೆದಿದೆ ಎನ್ನಲಾದ ಸಮಯದಲ್ಲಿ ಆರೋಪಿಯು ಘಟನಾ ಸ್ಥಳದಲ್ಲಿದ್ದ ಬಗ್ಗೆ ದಾಖಲೆಗಳಿಲ್ಲದಿರುವುದು, ಸೂಕ್ತ ವೈಜ್ಞಾನಿಕ ಸಾಕ್ಷ್ಯಧಾರ ಮತ್ತು ದಾಖಲೆಗಳ ಕೊರತೆ, ಸಾಕ್ಷಿದಾರರ ವ್ಯತಿರಿಕ್ತ ಹೇಳಿಕೆಗಳು,ಇತ್ಯಾದಿಗಳ ಹಿನ್ನೆಲೆಯಲ್ಲಿ ಆರೋಪಿಯು ಈ ಕೃತ್ಯ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ ಮತ್ತು ತನಿಖೆಯಲ್ಲಿನ ವಿರೋಧಾಬಾಸಗಳ ಕಾರಣ, ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ವಾದಿಸಿದ್ದರು.

ಅಂತಿಮವಾಗಿ, ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತರಾಜು ಎಸ್. ವಿ ರವರು ಪ್ರಾಸಿಕ್ಯೂಷನ್ ತನ್ನ ಕೇಸನ್ನು ಸಂಶಯಾತೀತವಾಗಿ ನಿರೂಪಿಸುವಲ್ಲಿ ವಿಫಲವಾಗಿದ್ದು ಆ ಕಾರಣ ಆರೋಪಿಯನ್ನು ನಿರ್ದೋಷಿ ಎಂದು ಆದೇಶಿಸಿರುತ್ತಾರೆ. ಆರೋಪಿ ಪರ ವಕೀಲರಾದ ಪುತ್ತೂರಿನ ಕಜೆ ಲಾ ಚೇಂಬರ್ಸ್ ಶ್ರೀ ಮಹೇಶ್ ಕಜೆ ಮತ್ತು ಮಂಗಳೂರಿನ ಶ್ರೀ ರಾಜೇಶ್ ರೈಯವರು ವಾದಿಸಿದ್ದರು.