ಪುತ್ತೂರು: ಖಚಿತ ವರ್ತಮಾನದ ಮಾಹಿತಿ ಮೇರೆಗೆ ಚಿನ್ನದ ವ್ಯಾಪಾರಿಯಿಂದ 25 ಲಕ್ಷ ರೂಪಾಯಿ ಜಪ್ತಿ

ಕರಾವಳಿ

ರಾಜಸ್ಥಾನದ ಮೂಲದ ಚಿನ್ನದ ವ್ಯಾಪಾರಿಯಾಗಿರುವ, ಪ್ರಸ್ತುತ ಮಂಗಳೂರು ಜೆಪ್ಪು ಆವೆ ಮರಿಯಾ ಅಪಾರ್ಟ್ಮೆಂಟ್ ನಿವಾಸಿಯಾಗಿರುವ ರಾಮ್ ಭೂಪೇಶ್ ಸಿಂಗ್ ರನ್ನು ಪುತ್ತೂರಿನಲ್ಲಿ ಪೊಲೀಸರು ವಶಕ್ಕೆ ಪಡೆದು ಅವರ ಬಳಿಯಿದ್ದ 25 ಲಕ್ಷ ರೂಪಾಯಿ ಜಪ್ತಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಮಹಾರಾಷ್ಟ್ರದಿಂದ ಚಿನ್ನವನ್ನು ತಂದು ಮಂಗಳೂರಿನ ಸ್ಥಳೀಯ ಜ್ಯುವೆಲ್ಲರಿ ಅಂಗಡಿಗೆ ಚಿನ್ನ ವ್ಯಾಪಾರ ಮಾಡುವ ಕೆಲಸ ಮಾಡುತ್ತಿದ್ದ ರಾಮ್ ಭೂಪೇಶ್ ಸಿಂಗ್ ದಿನಾಂಕ 22-09-2023 ರಂದು ಮಂಗಳೂರಿನಿಂದ ಪುತ್ತೂರು ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಸಮಯದಲ್ಲಿ ಖಚಿತ ವರ್ತಮಾನದ ಮಾಹಿತಿ ಮೇರೆಗೆ ಪುತ್ತೂರು ಬಸ್ ನಿಲ್ದಾಣದಲ್ಲಿ ಪುತ್ತೂರು ಟೌನ್ ಪೊಲೀಸರು ತಪಾಸಣೆ ನಡೆಸಿದಾಗ ಬ್ಯಾಗಿನಲ್ಲಿ 25 ಲಕ್ಷ ರೂಪಾಯಿ ನಗದು ದೊರೆತಿದ್ದು, ಅವರನ್ನು ವಶಕ್ಕೆಪಡೆದ ಪೊಲೀಸರು ಹಣವನ್ನು ಮಹಜರು ನಡೆಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ದಿನಾಂಕ 23-09-2023 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪೊಲೀಸರು ಜಪ್ತಿ ಮಾಡಿರುವ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.