ಲಿಂಗ ಬದಲಾವಣೆಗೆ ಅನುಮತಿ ನೀಡುವಂತೆ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳಿಂದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ

ರಾಜ್ಯ

ಪುರುಷರಾಗಲು ಬಯಸಿ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ಬದಲಾವಣೆ ಪ್ರಕ್ರಿಯೆಗೆ ಒಳಗಾಗಲು ಅನುಮತಿ ಕೋರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಇದು ಉತ್ತರ ಪ್ರದೇಶ ಪೊಲೀಸ್ ಇಲಾಖೆಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.

ಗೋರಖ್‌ಪುರ ಮತ್ತು ಗೊಂಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ಇಂತಹದೊಂದು ಮನವಿ ಮಾಡಿದ್ದು, ಈ ಇಬ್ಬರು ಕಾನ್ಸ್‌ಟೇಬಲ್‌ಗಳಿಗೆ ತಮ್ಮ ಲಿಂಗ ಬದಲಾಯಿಸಿಕೊಳ್ಳಲು ಅನುಮತಿ ನೀಡುವುದು ಹೇಗೆ ಎಂಬುದು ಪೊಲೀಸ್​ ಅಧಿಕಾರಿಗಳ ಮಧ್ಯೆ ತಲೆನೋವು ತಂದಿಟ್ಟಿದೆ.

ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಲಿಂಗ ಬದಲಾವಣೆ ಹೊಸ ವಿದ್ಯಮಾನವಲ್ಲವಾದರೂ, ರಾಜ್ಯ ಪೊಲೀಸ್ ಅಧಿಕಾರಿಗಳು ಮೊದಲ ಬಾರಿಗೆ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾನ್ಸ್‌ಟೇಬಲ್‌ಗಳನ್ನು ಮಹಿಳಾ ಪೊಲೀಸರಾಗಿ ನೇಮಕ ಮಾಡಿಕೊಂಡ ನಂತರ ಅವರ ಪುರುಷರಾಗಿ ಲಿಂಗ ಬದಲಾಯಿಸಿಕೊಳ್ಳಲು ಹೇಗೆ ಅನುಮತಿ ನೀಡುತ್ತಾರೆ ಎಂಬ ವಿಚಿತ್ರ ಪ್ರಶ್ನೆಯನ್ನು ಇಲಾಖೆ ಎದುರಿಸುತ್ತಿದೆ.

ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಇಬ್ಬರು ಕಾನ್‌ಸ್ಟೆಬಲ್‌ಗಳು ಲಿಂಗ ಬದಲಾವಣೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ವಿಭಿನ್ನ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಇಬ್ಬರು ಮಹಿಳಾ ಪೊಲೀಸರಿಗೆ ಲಿಂಗ ಬದಲಾವಣೆಗೆ ಅನುಮತಿ ನೀಡಿದರೆ, ಶಸ್ತ್ರಚಿಕಿತ್ಸೆಯ ನಂತರ ಪುರುಷ ಕಾನ್‌ಸ್ಟೆಬಲ್‌ಗಳೆಂದು ಪರಿಗಣಿಸಿದರೆ ಪುರುಷ ಕಾನ್‌ಸ್ಟೆಬಲ್‌ಗಳಿಗೆ ಅಗತ್ಯವಿರುವ ಇತರ ದೈಹಿಕ ಮಾನದಂಡಗಳು ಹೇಗೆ ಹೊಂದಾಣಿಕೆಯಾಗುತ್ತವೆ ಎಂಬುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.