ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡುಬಿದಿರೆ ಶೈಕ್ಷಣಿಕ ಕಾಶಿ ಎಂದೇ ಹೆಸರುವಾಸಿಯಾಗಿರುವ ಪ್ರದೇಶ. ರಾಜ್ಯ, ದೇಶ, ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗಾಗಿ ಆಗಮಿಸುತ್ತಿದ್ದಾರೆ. ಮಂಗಳೂರು ನಗರಕ್ಕಿಂತ 35 ಕಿ.ಮೀ ದೂರದಲ್ಲಿರುವ ಮೂಡುಬಿದಿರೆ ಕೆಲವು ವರ್ಷಗಳಿಂದ ರಾಜಕೀಯ, ಮತೀಯ ಕಾರಣಕ್ಕೆ ಸುದ್ಧಿಯಾದಂತಹ ಪ್ರದೇಶ. ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಹತ್ಯೆಯ ನಂತರ ಭುಗಿಲೆದ್ದಿದ್ದ ಮೂಡುಬಿದಿರೆ ಕೋಮುದಳ್ಳುರಿ ಆನಂತರ ಥಂಡವಾಗಿತ್ತು. ಆನಂತರ ರಾಜಕೀಯ ವಿಚಾರಕ್ಕಾಗಿ ಅಲ್ಲೊಂದು ಇಲ್ಲೊಂದು ಗುಂಪು ಕಟ್ಟಿಕೊಂಡು ಗಲಾಟೆ, ಕ್ರೈಂ ರೇಟುಗಳು ಸದ್ದಿಲ್ಲದೆ ನಡೆಯುತ್ತಿತ್ತು.
ಆದರೆ ಕಳೆದ ಒಂದು ತಿಂಗಳ ಹಿಂದೆ ಮೂಡುಬಿದಿರೆ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿಕೊಂಡ ಸಂದೇಶ್ ರಿಗೆ ತಾಲೂಕಿನಲ್ಲಿ ಕ್ರೈಂ ರೇಟ್ ಹದ್ದುಬಸ್ತಿನಲ್ಲಿಡುವುದು ಅನಿವಾರ್ಯವಾಗಿತ್ತು. ಅದಕ್ಕೆ ಅವರು ಮೊದಲು ಠಾಣೆಯ ಸಿಬ್ಬಂದಿಗಳನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಒಬ್ಬೊಬ್ಬರಿಗೆ ಒಂದೊಂದು ಉಸ್ತುವಾರಿ ನೀಡಿ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಮಿಂಚುತ್ತಿದ್ದಾರೆ. ಠಾಣಾ ವ್ಯಾಪ್ತಿಯ ಎಲ್ಲಾ ರೌಡಿ ಶೀಟರ್ ಗಳ,ಕೋಮುವಾದಿಗಳ, ಸಮಾಜಬಾಹಿರ ಚಟುವಟಿಕೆದಾರರ ಪಟ್ಟಿ ತಯಾರಿಸಿ,ಅವರಲ್ಲಿ ಕೆಲವು ನಟೋರಿಯಸ್ ಗಳ ಬಾಂಡ್ ಗಳನ್ನು ರದ್ದುಪಡಿಸಿ, ನಾಡಿನ ಸಾಮಾಜಿಕ ಸಾಮರಸ್ಯವನ್ನು ಕೆಡಿಸಲು ಪ್ರಯತ್ನಿಸುತ್ತಿರುವವರಿಗೆ ದೊಡ್ಡ ಶಾಕ್ ನೀಡಿದ್ದಾರೆ. ರೌಡಿಗಳು, ಕೋಮುಕ್ರಿಮಿಗಳು ಸ್ವಲ್ಪ ಬಾಲಬಿಚ್ಚಿದರೂ ಮುಲಾಜಿಲ್ಲದೇ ಅರೆಸ್ಟ್ ಮಾಡುವ ಖಾಕಿ’ಖದರ್’ ಬಗ್ಗೆ ಅರಿವಿದ್ದ ರೌಡಿ ಶೀಟರ್ ಗಳು,ಕೋಮುಕ್ರಿಮಿಗಳು ಪುಲ್ ಸೈಲೆಂಟಾಗಿ ಬಿಲ ಸೇರಿಕೊಂಡಿದ್ದಾರೆ. ಏನಾದರೂ ಸ್ವಲ್ಪ ವೈಲೆಂಟ್ ಮಾಡಿದರೂ, ಈಗಾಗಲೇ ಬಾಂಡ್ ರದ್ದುಪಡಿಸಿರುವುದರಿಂದ ಜೈಲೇ ಪರ್ಮನೆಂಟಾಗಬಹುದು ಅನ್ನುವ ಭೀತಿಯಿಂದ ರೌಡಿ ಶೀಟರ್ ಗಳು,ಕೋಮುವಾದಿಗಳು ಮೂಡಬಿದ್ರೆಯತ್ತ ಮುಖ ಹಾಕಲು ಹೆದರುತ್ತಿದ್ದಾರೆ. ಇನ್ನು ಕೆಲವು ರೌಡಿ ಶೀಟರ್ ಗಳಂತೂ ಸಂದೇಶ್ ಅಧಿಕಾರ ಸ್ವೀಕರಿಸಿದ ಮಾರನೆಯ ದಿನವೇ ಗಂಟು ಮೂಟೆ ಕಟ್ಟಿ ಇಲ್ಲಿಂದ ಪಲಾಯಣವಾಗಿದ್ದಾರೆ ಎಂಬ ಸುದ್ದಿ ಇದೆ.
ಸದ್ದಿಲ್ಲದೆ ಕ್ರೈಂ ರೇಟ್ ನಲ್ಲಿ ಮುಂಚೂಣಿಯಲ್ಲಿದ್ದ ಮೂಡುಬಿದಿರೆಯಲ್ಲಿ ಕ್ರೈಂ ಹತೋಟಿಗೆ ತರಲು ರಾತ್ರಿ ಹೊತ್ತು ಗಸ್ತು, ಹೆದ್ದಾರಿ ಗಸ್ತು ಕ್ರಮವನ್ನು ಅನುಸರಿಸಿಕೊಂಡ ಪರಿಣಾಮ ಕ್ರೈಂ ಬಹಳಷ್ಟು ಹತೋಟಿಗೆ ಬಂದಿದೆ. ರಾತ್ರಿ ಹೊತ್ತಿನಲ್ಲಿ ಬಸ್ಸು ನಿಲ್ದಾಣ, ಕಟ್ಟೆ, ರಸ್ತೆ ಬದಿ ಮೊದಲಾದ ಜನವಸತಿ ಪ್ರದೇಶಗಳಲ್ಲಿ ಗುಂಪು ಗೂಡುತ್ತಿದ್ದ, ಬಸ್ ಸ್ಟಾಂಡಿನಲ್ಲಿ ಕೂತು ಮದ್ಯ ಸೇವಿಸುತ್ತಿದ್ದ ನಖರಾ ಗುಂಪುಗಳು ರಾತ್ರಿ ಎಂಟು ಗಂಟೆಯಾಗುತ್ತಿದ್ದಂತೆ ಬಿಡಾರ ಸೇರುತ್ತಿದ್ದಾರೆ. ‘ಕೋಮು’ ಸಂಘರ್ಷಕ್ಕೆ ಕಾರಣವಾಗಬಹುದಾದ ಕ್ಷುಲ್ಲಕ ಘಟನೆಗಳು ನಡೆಯುವುದೇ ರಾತ್ರಿ ಹೊತ್ತಿನಲ್ಲಿ. ಅದನ್ನು ಗಣನೆಗೆ ತೆಗೆದುಕೊಂಡ ಸಂದೇಶ್ ರಾತ್ರಿ ಎಂಟರ ನಂತರ ಜನವಸತಿ ಪ್ರದೇಶ, ಪ್ರಮುಖ ಸ್ಥಳಗಳಲ್ಲಿ ಗಸ್ತುಗಳನ್ನು ವ್ಯಾಪಕಗೊಳಿಸುತ್ತಾ ಸಮಾಜವಿದ್ರೋಹಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ.
ಇನ್ನು ಮಾದಕ ದ್ರವ್ಯ, ಡ್ರಗ್ಸ್ ಬಗ್ಗೆ ವಿಶೇಷ ಕಾಳಜಿ ವಹಿಸಿ ಶಾಲಾ ಕಾಲೇಜು ಸಮೀಪದ ಅಂಗಡಿ, ಗೂಡಂಗಡಿಗಳಿಗೆ ರೈಡ್ ಮಾಡಿ ಯಾವುದೇ ರೀತಿಯ ಮಾದಕ ದ್ರವ್ಯ ಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ಕೊಟ್ಟಿರುವುದು ಡ್ರಗ್ಸ್ ಫ್ರೀ ಅಭಿಯಾನಕ್ಕೆ ಸದ್ದಿಲ್ಲದೆ ಸಕ್ಸಸ್ ದೊರೆತಿದೆ. ಅಕ್ರಮ ಗೋ ಸಾಗಾಟ, ಅಕ್ರಮ ಮರಳುಗಾರಿಕೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಪುಲಿಸ್ಟಾಪ್ ಹಾಕುವಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ದನಕಳ್ಳರಿಗೆ, ಅನೈತಿಕ ಪೊಲೀಸ್ ಗಿರಿ ನಡೆಸುವ ಕೋಮುಕ್ರಿಮಿಗಳಿಗೆ, ಡ್ರಗ್ಸ್ ದಂಧೆಕೋರರಿಗೆ ಸ್ಪೆಷಲ್ ಟ್ರೀಟ್ ಮೆಂಟ್ ತಪ್ಪಿದ್ದಲ್ಲ.! ಸದ್ಯಕ್ಕಂತು ಈ ಮೂರು ವರ್ಗ ಮೂಡಬಿದ್ರೆ ವ್ಯಾಪ್ತಿ ತ್ಯಜಿಸುವುದೇ ಲೇಸು.!
ಅಧಿಕಾರ ಸ್ವೀಕರಿಸುವ ಒಂದು ದಿನದ ಮೊದಲು ಮೂಡುಬಿದಿರೆ ಪೇಟೆಯಲ್ಲಿ ಎನ್ ಎಸ್ ಯು ಐ ನಾಯಕನೊಬ್ಬನ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸಿ ಪುಂಡಾಟಿಕೆ ಮೆರೆದಿತ್ತು. ಇದರ ಹಿಂದಿನ ಎಲ್ಲಾ ಆರೋಪಿಗಳನ್ನು ಕಂಬಿ ಹಿಂದೆ ತರುವಲ್ಲಿ ಸಂದೇಶ್ ಠಾಣೆಯ ಇತರ ಅಧಿಕಾರಿಗಳ ಸಹಕಾರದಿಂದ ಸಾಧ್ಯವಾಯಿತು. ಆರಂಭಿಕ ಹಂತದಲ್ಲೇ ಅನೈತಿಕ ಪೊಲೀಸ್ ಗಿರಿ ನಡೆಸುವ ಪುಂಡರಿಗೆ ಕಾನೂನಿನ ರುಚಿ ತೋರಿಸಿದ್ದು, ಇನ್ನು ನಮ್ಮ ಆಟ ನಡೆಯುದಿಲ್ಲ ಎಂದು ಅನೈತಿಕ ಪೊಲೀಸರು ಇಲ್ಲಿ ಜಾಗ ಖಾಲಿ ಮಾಡಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ, ನೇರ ನಡೆ ನುಡಿಯಿಂದ ಸೂಪರ್ ಕಾಫ್ ಅಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಸಂದೇಶ್. ಬಜಪೆ, ಬೆಳ್ತಂಗಡಿ ಭಾಗದಲ್ಲಿ ಕರ್ತವ್ಯದಲ್ಲಿದ್ದಾಗ ತಮ್ಮ ಸಿಂಗಂ ಇಮೇಜನ್ನು ಮೂಡಬಿದಿರೆಯಲ್ಲೂ ಮುಂದುವರಿಸಿಕೊಂಡು ಬರುತ್ತಿದ್ದು, ಯಾರಿಗೂ ಜಗ್ಗದೆ,ಬಗ್ಗದೆ ಸಮಾಜ ವಿದ್ರೋಹಿಗಳಿಗೆ ಕಾನೂನಿನ ರುಚಿ ತೋರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಠಾಣೆಗಳಲ್ಲೂ ಇಂತಹ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿದ್ದರೆ ಕ್ರೈಂ ಬಹಳಷ್ಟು ಹತೋಟಿಗೆ ಬರುವುದರಲ್ಲಿ ಅನುಮಾನವೇ ಇಲ್ಲ. ಇನ್ಸ್ ಪೆಕ್ಟರ್ ಸಂದೇಶ್ ರವರ ಈ ನಡೆಗೊಂದು ಹ್ಯಾಟ್ಸಾಫ್.