ಪತ್ರಕರ್ತರಿಗೆ ಭರ್ಜರಿ ಡಾಭಾ ಮೀಲ್ಸ್: ‘ಮಹಾ’ ಬಿಜೆಪಿ ಅಧ್ಯಕ್ಷ ಯಡವಟ್ಟು

ರಾಜ್ಯ

“ಋಣಾತ್ಮಕ ಪ್ರಚಾರ ತಡೆಯಲು ಪತ್ರಕರ್ತರು, ಮಾಧ್ಯಮ ಮಿತ್ರರನ್ನು ಢಾಭಾಗಳಿಗೆ ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳಿ” ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಭಾವಾಂಕುಲೆ ಅವರ ಧ್ವನಿ ಎಂದು ಹೇಳಲಾದ ಆಡಿಯೋ ವೈರಲ್ ಆಗಿದ್ದು, “ಚುನಾವಣೆ ಸಂದರ್ಭದಲ್ಲಿ ಋಣಾತ್ಮಕ ಪ್ರಚಾರದಿಂದ ಪಾರಾಗಲು ಪತ್ರಕರ್ತರು, ಮಾಧ್ಯಮ ಮಿತ್ರರಿಗೆ ಒಳ್ಳೆಯ ಊಟೋಪಚಾರ ಮಾಡುವ ಮೂಲಕ ಚೆನ್ನಾಗಿ ನೋಡಿಕೊಳ್ಳಬೇಕು” ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮತಗಟ್ಟೆಗಳ ನಿರ್ವಹಣೆ ಕುರಿತಂತೆ ಕಾರ್ಯಕರ್ತರ ಜತೆ ಮಾತನಾಡುವಾಗ ಭಾವಾಂಕುಲೆ, “ಪತ್ರಕರ್ತರನ್ನು ಗೌರವಯುತವಾಗಿ ನಡೆಸಿಕೊಳ್ಳಿ ಎಂದಷ್ಟೇ ಹೇಳಿದ್ದೇನೆ. ಬೂತ್ ಮಟ್ಟದ ಕಾರ್ಯಕರ್ತರು ಪತ್ರಕರ್ತರ ಮಾತಿಗೆ ಬೆಲೆ ಕೊಡಬೇಕು, ಸಲಹೆ ಸೂಚನೆಗಳನ್ನು ಸ್ವೀಕರಿಸಲು ಸೂಚಿಸಿರುವೆ” ಎಂದು ಹೇಳಿದ್ದಾರೆ. ಭಾವಾಂಕುಲೆ ಆಡಿಯೋ ವಿಚಾರ ಪ್ರಸ್ತಾಪಿಸಿ ಮಹಾರಾಷ್ಟ್ರ ಪ್ರತಿಪಕ್ಷ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಪತ್ರಕರ್ತರು ಮಾರಾಟದ ಸರಕಲ್ಲ. ಬಿಜೆಪಿಯ ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ. ಆಡಳಿತ ವಿರೋಧಿ ಅಲೆಯಲ್ಲಿ ಸೋಲಿನ ಭೀತಿಯಿಂದ ಪತ್ರಕರ್ತರನ್ನು ಕೊಂಡುಕೊಳ್ಳುವ ಕಾರ್ಯಕ್ಕೆ ಬಿಜೆಪಿ ನಾಯಕರು ಇಳಿದಿದ್ದಾರೆ” ಎಂದು ಪ್ರತಿಪಕ್ಷ ನಾಯಕ ವಿಜಯ್ ವಾಡೆತ್ತಿವಾರ್ ವಾಗ್ದಾಳಿ ನಡೆಸಿದ್ದಾರೆ.