ಅರೆನಗ್ನ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿ, ಲೈಂಗಿಕ ದೌರ್ಜನ್ಯಎಸಗಿ ರಸ್ತೆ ಬದಿ ಎಸೆದ ದುರುಳರು; ನೆರವಿಗೆ ಮೊರೆ ಇಟ್ಟರೂ ಕರುಣೆ ತೊರದ ರಾಕ್ಷಸರು

ರಾಷ್ಟ್ರೀಯ

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 12 ವರ್ಷದ ಬಾಲಕಿ ಸುರಿಯುವ ರಕ್ತದ ನಡುವೆ, ಅರೆನಗ್ನ ಸ್ಥಿತಿಯಲ್ಲಿ ನರಳಾಡುತ್ತಿದ್ದರೂ ಒಬ್ಬರು ಆಕೆಯ ನೆರವಿಗೆ ಬಾರದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

ಈ ಘಟನೆ ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆಯೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ತನಿಖೆಗೆ ಎಸ್ ಐ ಟಿ ರಚಿಸಿದ್ದಾರೆ. ಪ್ರಕರಣದಲ್ಲಿ ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ರಾಷ್ಟ್ರೀಯ ಆಯೋಗವು ( ಎನ್ ಸಿ ಪಿಸಿ ಆರ್) ಉಜ್ಜಯಿನಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಘಟನೆ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ.

ಉಜ್ಜಯಿನಿ ಯಿಂದ ಸುಮಾರು 15 ಕಿ.ಮೀ ದೂರದ ರಸ್ತೆಯ ಸಿಸಿಟಿವಿ ಕ್ಯಾಮರಾದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮನಕಲಕುವ ಯಾತನೆ ಸೆರೆಯಾಗಿದೆ. ದುರುಳರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ರಸ್ತೆಯ ಬಳಿ ಎಸೆದು ಹೋಗಿದ್ದರು.

ಅರೆನಗ್ನಾವಸ್ಥೆಯಲ್ಲಿದ್ದ ಬಾಲಕಿ, ತನ್ನ ದೇಹದ ಉಳಿದ ಭಾಗವನ್ನು ಮುಚ್ಚಿಕೊಳ್ಳಲು ಸಾಹಸಪಟ್ಟು, ಸಹಾಯಕ್ಕಾಗಿ ಕಂಡವರನ್ನೆಲ್ಲಾ ಬೇಡಿಕೊಂಡಿರುವುದು ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಮನೆಯೊಂದರ ಮುಂದೆ ನಿಂತಿದ್ದ ವ್ಯಕ್ತಿ ಬಳಿ ಬಾಲಕಿಯ ಸಹಾಯಕ್ಕೆ ಯಾಚಿಸಿಕೊಂಡರೂ ಕರುಣೆ ತೋರದೇ ಅಲ್ಲಿಂದ ಬಾಲಕಿಯನ್ನು ಓಡಿಸಿರುವುದು ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿದೆ. ಈ ಕ್ರೌರ್ಯದ ವಿರುದ್ಧ ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಬಾಲಕಿ ಬೀದಿ ಬೀದಿ ಅಲೆಯುತ್ತಾ ಕೊನೆಗೆ ಆಶ್ರಮವೊಂದನ್ನು ತಲುಪಿದಳು. ಅಲ್ಲಿದ್ದ ಅರ್ಚಕರೊಬ್ಬರು ಬಾಲಕಿಯ ದೇಹವನ್ನು ಟವೆಲ್ ನಿಂದ ಸುತ್ತಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ ಬಾಲಕಿಯ ಸ್ಥಿತಿ ಗಂಭೀರವಾದ ಕಾರಣ ಹೆಚ್ಚಿನ ಚಿಕಿತ್ಸೆಗೆ ಇಂದೋರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಉತ್ತರಪ್ರದೇಶದ ಪ್ರಯಾಗ್ ರಾಜ್ ಮೂಲದವಳು ಎಂದು ಹೇಳಲಾಗಿದೆ.