ಗುಂಪು ಗಲಭೆಯಲ್ಲಿ ಹತ್ಯೆ, ಗಾಯಾಳು ಸಂತ್ರಸ್ತರಿಗೆ ಪರಿಹಾರ ನೀಡಲು ನಿರ್ಧರಿಸಿರುವ ರಾಜ್ಯ ಸರಕಾರ, ಪರಿಹಾರದ ಮೊತ್ತವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಗುಂಪು ಗಲಭೆಯಲ್ಲಿ ಮೃತರ ಅವಲಂಬಿತರಿಗೆ ಕನಿಷ್ಠ 5 ಲಕ್ಷ ರೂಪಾಯಿ ಹಾಗೂ ಗರಿಷ್ಠ 10 ಲಕ್ಷ ರೂಪಾಯಿ ಪರಿಹಾರ ನಿಗದಿಗೊಳಿಸಲಾಗಿದೆ. ಜತೆಗೆ, ಗಲಭೆ ಬಾಧಿತರಿಗೆ ಆರು ವರ್ಗೀಕರಣದನ್ವಯ ಕನಿಷ್ಠ ಒಂದು ಲಕ್ಷ ರೂಪಾಯಿ ಗಳಿಗಿಂತ ಮೇಲ್ಪಟ್ಟು ಪರಿಹಾರ ನಿಗದಿ ಮಾಡಲಾಗಿದೆ.
ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011 ರ ಅನ್ವಯವೇ ಗುಂಪು ಗಲಭೆ ಸಂತ್ರಸ್ತರಿಗೆ ಪರಿಹಾರ ಸೌಲಭ್ಯ ಸಿಗಲಿದೆ. ಸಂತ್ರಸ್ತರಿಗೆ ದೊರೆಯಬೇಕಾದ ಪರಿಹಾರ ಮೊತ್ತದ ನಿರ್ಣಯ ಹಾಗೂ ಪಾವತಿಗೆ ಪರಿಹಾರ ಯೋಜನೆಯ ಕಾರ್ಯಸೂಚಿಗಳು ಅನ್ವಯವಾಗಿದೆ ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.
ಗಲಭೆ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಹಿನ್ನೆಲೆಯಲ್ಲಿ ಗೃಹ ಇಲಾಖೆ ಈ ಕುರಿತು ಐದು ವರ್ಷಗಳಿಂದ ಚರ್ಚೆ ನಡೆಸಿತ್ತು. ಅಂತಿಮವಾಗಿ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಹಾರ ಮೊತ್ತ ನಿಗದಿ ಮಾಡುವ ನಡಾವಳಿ ಅಂಗೀಕರಿಸಿತ್ತು. ಈ ನಡಾವಳಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಬಾಣದ ರಂಗಯ್ಯ ಬುಧವಾರ ಆದೇಶ ಹೊರಡಿಸಿದ್ದಾರೆ.