‘ನಿಫಾ ಮುಕ್ತ’ ಕೇರಳ ಎಂದ ಆರೋಗ್ಯ ಸಚಿವೆ ವೀಣಾ ಜಾರ್ಜ್

ರಾಜ್ಯ

ಕೇರಳದ ಕೋಯಿಕ್ಕೋಡ್ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ನಿಫಾ ಸೋಂಕಿತರ ರಕ್ತದ ಮಾದರಿಯ ಪರೀಕ್ಷಾ ಫಲಿತಾಂಶವು ನೆಗೆಟಿವ್ ಬಂದಿದ್ದು, ಎಲ್ಲರೂ ನಿಫಾ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ 9 ವರ್ಷದ ಬಾಲಕ ಸೇರಿದಂತೆ ಎಲ್ಲಾ ರೋಗಿಗಳ ರಕ್ತದ ಮಾದರಿಯ ಪರೀಕ್ಷೆಯಲ್ಲಿ ‘ನೆಗೆಟಿವ್’ ಎಂಬ ಫಲಿತಾಂಶವು ಎರಡು ಬಾರಿ ಬಂದಿದೆ ಎಂದು ಸಚಿವೆ ವೀಣಾ ಹೇಳಿದ್ದಾರೆ. ‘ಡಬಲ್ ನೆಗೆಟಿವ್’ ಎಂದರೆ ನಿರ್ದಿಷ್ಟ ಸಮಯದ ನಂತರ ತೆಗೆದುಕೊಂಡ ನಿಫಾ ರೋಗಿಯ ಎರಡು ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ‘ನೆಗೆಟಿವ್’ ಎಂಬುದಾಗಿದೆ. ಈ ಮೂಲಕ ಸೋಂಕಿತರು ಮಾರಣಾಂತಿಕ ವೈರಾಣುಗಳಿಂದ ಮುಕ್ತರಾಗಿದ್ದಾರೆ ಎಂದು ಸಚಿವೆ ವಿವರಿಸಿದ್ದಾರೆ. ಯಾವುದೇ ಹೊಸ ಪ್ರಕರಣಗಳು ವರದಿಯಾಗದ ಕಾರಣ ಕೇರಳ ಸರಕಾರವು ಎಲ್ಲ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.