ಜಿ.ಆರ್ ಮೆಡಿಕಲ್ ಕಾಲೇಜು ಬಗ್ಗೆ ಹೈಕೋರ್ಟ್ ಗರಂ: ವಿದ್ಯಾರ್ಥಿಗಳಿಗೆ ಇತರ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಅಲಾಟ್ ಮಾಡಲು ಹೈಕೋರ್ಟ್ ಮಹತ್ವದ ಆದೇಶ

ಕರಾವಳಿ

ಮಂಗಳೂರು ಹೊರವಲಯದ ನೀರುಮಾರ್ಗ ಜಿ ಆರ್ ಮೆಡಿಕಲ್ ಕಾಲೇಜು ಮಾನ್ಯತೆ ರದ್ದುಪಡಿಸಿರುವುದರಿಂದ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೆಲೆಯಲ್ಲಿ 24 ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗವು ಜಿ ಆರ್ ಮೆಡಿಕಲ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ಕಾಲೇಜಿಗೆ ನೀಡಿದ್ದ ಮಾನ್ಯತೆಯನ್ನು ರದ್ದುಪಡಿಸಿತ್ತು. ಆದರೆ ಕಾಲೇಜು ಆಡಳಿತ ಮಂಡಳಿ ವೈದ್ಯಕೀಯ ಆಯೋಗದ ಪತ್ರವನ್ನೇ ನಕಲು ಮಾಡಿ 150 ವಿದ್ಯಾರ್ಥಿಗಳಿಗೆ ಲಕ್ಷಾಂತರ ಶುಲ್ಕ ಪೀಕಿಸಿ ಸೀಟು ಆಲಾಟ್ ಮಾಡಿತ್ತು. ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದರು. ಜೊತೆಗೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ಹೈಕೋರ್ಟ್ ವಿಭಾಗೀಯ ಪೀಠವು ಮಧ್ಯಂತರ ಆದೇಶ ಹೊರಡಿಸಿದ್ದು, ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳದಂತೆ ರಾಜ್ಯದ 24 ಇತರ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ವಿದ್ಯಾರ್ಥಿಗಳು ತಮಗೆ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಕೊಡಿಸುವಂತೆ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ರಾಜ್ಯ ಸರಕಾರದ ಪ್ರತಿನಿಧಿಗಳು ವಿದ್ಯಾರ್ಥಿಗಳಿಗೆ ವಿಧಿಸಿರುವ ಶುಲ್ಕದಲ್ಲಿ ವ್ಯತ್ಯಾಸ ಇರುವುದರಿಂದ ನೇರವಾಗಿ ಸರಕಾರಿ ಕಾಲೇಜಿಗೆ ಸೇರಿಸುವಂತ್ತಿಲ್ಲ. ಇತರೆ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿಯೇ ವ್ಯವಸ್ಥೆ ಮಾಡಬೇಕೆಂದು ಅಭಿಪ್ರಾಯ ಪಟ್ಟಿತ್ತು.

ವಿದ್ಯಾರ್ಥಿಗಳ ಪರ ವಕೀಲರು ಅಕ್ಟೋಬರ್ 31 ರ ಪರೀಕ್ಷೆ ನಡೆಯುದರಿಂದ ಅದಕ್ಕೆ ಹಾಜರಾಗಲು ವ್ಯವಸ್ಥೆ ಮಾಡಬೇಕು. ಕಾಲೇಜಿಗೆ ಮಾನ್ಯತೆ ಇಲ್ಲದಿದ್ದರೂ ಸೀಟು ಅಲಾಟ್ ಮಾಡಿದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ತುರ್ತಾಗಿ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿದರು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆಯಂತೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೆಪ್ಟೆಂಬರ್ 30 ರಂದು ಜಿ ಆರ್ ಮೆಡಿಕಲ್ ಕಾಲೇಜಿನ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಸೀಟುಗಳನ್ನು ರೀ ಅಲಾಟ್ ಮಾಡಿಕೊಳ್ಳಲು ಬೆಂಗಳೂರು ಕಚೇರಿಗೆ ಬರುವಂತೆ ಸೂಚಿಸಿದ್ದಾರೆ.