ಆರ್‌ಟಿಐ ಕಾರ್ಯಕರ್ತರನ್ನು ಬೆದರಿಸಿ,ಮೂಗುದಾರ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆಯಾ ಎಂಬ ಪ್ರಶ್ನೆ ಇದೀಗ ಮೂಡುತ್ತಿದೆ.?ಏಕೆಂದರೆ, ಹೆಚ್ಚೆಚ್ಚು ಆರ್‌ಟಿಐ ಅರ್ಜಿ ಹಾಕುವ ಕಾರ್ಯಕರ್ತರ ಮಾಹಿತಿಯನ್ನು ಕ್ರೋಢೀಕರಿಸಲು ಸರ್ಕಾರ ಮುಂದಾಗಿದ್ದು, ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಆರ್‌ಟಿಐ ಅರ್ಜಿ ಹಾಕುವವರ ಮಾಹಿತಿ ಪಡೆದು ಏನು ಮಾಡಲು ಹೊರಟಿದೆ ರಾಜ್ಯ ಕಾಂಗ್ರೆಸ್ ಸರ್ಕಾರ.? ಮುಖ್ಯ ಕಾರ್ಯದರ್ಶಿ ಕಚೇರಿ, ಇಲಾಖೆಗಳು, ಸಚಿವಾಲಯಗಳಲ್ಲಿ ಮಾಹಿತಿ ಕೇಳುವವರ ಮಾಹಿತಿ ಕಲೆ ಹಾಕಲು ಸರ್ಕಾರ ಮುಂದಾಗಿದೆ. ಹೆಚ್ಚು ಬಾರಿ ಆರ್‌ಟಿಐ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಲು ಸರ್ಕಾರ ನಿರ್ದೇಶನ ನೀಡಿದೆ.
ಸರ್ಕಾರದ ಈ ನಿರ್ದೇಶನ ಈಗ ಆರ್‌ಟಿಐ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಕಲಬುರಗಿ ಪೀಠದ ಮಾಹಿತಿ ಆಯುಕ್ತರು ಪತ್ರ ಬರೆದ ಬೆನ್ನಲ್ಲೇ ಮಾಹಿತಿ ಕಲೆ ಹಾಕಲು ಸರ್ಕಾರ ಮುಂದಾಗಿದೆ. 2023ರ ಏಪ್ರಿಲ್‌ನಲ್ಲಿ ಮಾಹಿತಿ ಆಯುಕ್ತರು ಪತ್ರ ಬರೆದಿದ್ದರು. ಆದರೆ ಬಿಜೆಪಿ ಸರ್ಕಾರವು ಯಾವುದೇ ಕ್ರಮವಹಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಆರ್‌ಟಿಐ ಕಾರ್ಯಕರ್ತರ ಮಾಹಿತಿ ಕಲೆಹಾಕಲು ಮುಂದಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಆರ್‌ಟಿಐ ಅರ್ಜಿದಾರರ ಮಾಹಿತಿ ನೀಡಲು ನಿರ್ದೇಶನ ನೀಡಿದೆ. ಆರ್‌ಟಿಐ ಅಡಿ ಅರ್ಜಿದಾರರ ವಿವರಗಳ ಗೌಪ್ಯತೆ ಕಾಪಾಡುವುದು ಕಾನೂನಿನಲ್ಲಿದೆ. ಹೀಗಿದ್ದಾಗ ಸರ್ಕಾರವೇ ಮಾಹಿತಿ ಕಲೆ ಹಾಕಲು ಮುಂದಾಗಿರುವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.