ಕೊಲ್ಲೂರು: ಗುಂಡಿಕ್ಕಿ ದನಗಳ ಹತ್ಯೆ, 10-15 ದನಗಳಿಗೆ ಗಾಯ, ಆರೋಪಿ ನರಸಿಂಹ ವಿರುದ್ಧ ಪ್ರಕರಣ ದಾಖಲು

ರಾಜ್ಯ

ಕೊಲ್ಲೂರು ಬೆಳ್ಳಾಲ ಗ್ರಾಮದ ಅಂಗಡಿ ಜೆಡ್ಡು ಎಂಬಲ್ಲಿ ವ್ಯಕ್ತಿಯೋರ್ವ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಯಿಂದ ಗುಂಡಿಕ್ಕಿ ನಾಲ್ಕು ದನಗಳನ್ನು ಹತ್ಯೆಗೈದು, 10-15 ದನಗಳನ್ನು ಗಾಯಗೊಳಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಯಲು ಬಿಟ್ಟಿದ್ದ ಅಂಗಡಿ ಜೆಡ್ಡುವಿನ ಗುಲಾಬಿ ಹಾಗೂ ಇತರರಿಗೆ ಸೇರಿದ ದನಗಳಿಗೆ ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಸೆಪ್ಟೆಂಬರ್ 23 ರಂದು ಕೋವಿಯಿಂದ ಗುಂಡಿಕ್ಕಿದ್ದಾನೆ. ಇದರ ಪರಿಣಾಮ ಗಾಯಗೊಂಡ ದನ ಸಾವನ್ನಪ್ಪಿದೆ. ಇದನ್ನು ಪ್ರಶ್ನಿಸಿದ ಗುಲಾಬಿಗೂ ಆರೋಪಿ ಅವಾಚ್ಯವಾಗಿ ನಿಂದಿಸಿ ಕೋವಿಯಿಂದ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಗುಲಾಬಿ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಸುಮಾರು ಒಂದು ತಿಂಗಳಿನಿಂದ ಅಂಗಡಿ ಜೆಡ್ಡು ಪರಿಸರದಲ್ಲಿ 3 ದನಗಳು ಸತ್ತಿದ್ದು, 10-15 ದನಗಳು ತೀವ್ರವಾಗಿ ಗಾಯಗೊಂಡಿದೆ. ಇದಕ್ಕೆಲ್ಲ ನರಸಿಂಹ ಕಾರಣ, ಈ ಬಗ್ಗೆ ಆತನಲ್ಲಿ ಸ್ಥಳೀಯರು ವಿಚಾರಿಸಿದಾಗ ಈಗಾಗಲೇ 4 ದನಗಳನ್ನು ಕೊಂದಿದ್ದು, 10-15 ದನಗಳಿಗೆ ಕೋವಿಯಿಂದ ಹೊಡೆದ್ದಿದ್ದೇನೆ. ಇನ್ನು ಮುಂದಕ್ಕೆ ದನಗಳನ್ನು ಜಾಗ್ರತೆ ಮಾಡದೇ ಇದ್ದರೆ ದನಕ್ಕೆ ಆದ ಗತಿ ನಿಮಗೂ ಬರುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಗುಲಾಬಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.