ಹರ್ಷವರ್ಧನ ಭಟ್ಟರನ್ನು ರಕ್ಷಿಸಿದ ಮುಸ್ಲಿಂ ಯುವಕರು; ಮಾನವೀಯತೆಗೆ ಸಾಕ್ಷಿಯಾದ ಬಂಟ್ವಾಳ

ಕರಾವಳಿ

ತಾನು ಸಂಚರಿಸುತ್ತಿದ್ದ ಬೈಕ್ ಅಕಸ್ಮಿಕವಾಗಿ ಬೆಳಗಿನ ಜಾವ ಸೇತುವೆಗೆ ಡಿಕ್ಕಿ ಹೊಡೆದು 40 ಅಡಿ ಆಳದ ಹೊಳೆಗೆ ಬಿದ್ದು ಒದ್ದಾಡುತ್ತಿದ್ದ ಸವಾರ ಪಾಕತಜ್ಞರೊಬ್ಬರನ್ನು ಮುಸ್ಲಿಂ ಯುವಕರು ರಕ್ಷಿಸಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಕೊಡುಂಗಾಯಿ ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ. ಕೊಡುಂಗಾಯಿ ಮಂಕುಡೆ ನಿವಾಸಿ ಹರ್ಷವರ್ಧನ ಭಟ್ ಪ್ರಾಣಾಪಾಯದಿಂದ ಪಾರಾದವರು.

ಶನಿವಾರ ಬೆಳಗ್ಗಿನ ಜಾವಾ ಸರಿ ಸುಮಾರು 4 ಗಂಟೆ ವೇಳೆಗೆ ಪಾಕತಜ್ಞ ಹರ್ಷವರ್ಧನ ಭಟ್ ಕಾರ್ಯನಿಮಿತ್ತ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಕಸ್ಮಿಕವಾಗಿ ಅವರ ಬೈಕ್ ಕೊಡುಂಗಾಯಿ ಹೊಳೆಯ ಸೇತುವೆಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಹರ್ಷವರ್ಧನ ಭಟ್ ಅವರು ಸುಮಾರು 40 ಅಡಿ ಆಳದ ಹೊಳೆಗೆ ಬಿದ್ದರು.

ಇದೇ ಸಮಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅದೇ ದಾರಿಯಲ್ಲಿ ಬರುತ್ತಿದ್ದ ಒಕ್ಕೆತ್ತೂರಿನ ರಝಾಕ್ ಎಂಬವರಿಗೆ ಹೊಳೆಯಿಂದ ರಕ್ಷಣೆಗಾಗಿ ಬೊಬ್ಬೆ ಹಾಕುತ್ತಿರುವ ಧ್ವನಿ ಕೇಳಿಸಿತು. ತಕ್ಷಣಕ್ಕೆ ಅವರಿಗೆ ಏನೂ ಕಾಣಲಿಲ್ಲ. ಲೈಟ್ ನ ಬೆಳಕಿನಲ್ಲಿ ಹುಡುಕಾಡಿದಾಗ ಸುಮಾರು 50 ಮೀ ದೂರದಲ್ಲಿ ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗುತ್ತಿರುವುದು ನೋಡಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ರಝಾಕ್ ಸ್ನೇಹಿತ ಹಸೈನಾರ್ ರವರಿಗೆ ವಿಷಯ ತಿಳಿಸಿದ್ದು, ಧಾವಿಸಿ ಬಂದ ಪುತ್ತು ಯಾನೆ ಹಸೈನಾರ್ ಸ್ಥಳೀಯರಾದ ಸಿಮಾಕ್, ಅಬ್ದುಲ್ ಕುಂಞಿ ಕೊಡುಂಗಾಯಿ, ಟಿ ಎಂ ಅಬೂಬಕ್ಕರ್ ಅವರಿಗೆ ಮಾಹಿತಿ ನೀಡಿ, ಐವರು ಸೇರಿ ಹೊಳೆಯಿಂದ ಹರ್ಷವರ್ಧನ್ ಭಟ್ಟರನ್ನು ಮೇಲೆಕ್ಕೆತ್ತಿ ಉಪಚರಿಸಿದರು. ಬಳಿಕ ಯುವಕರು ಆಟೋ ರಿಕ್ಷಾದಲ್ಲಿ ಹರ್ಷವರ್ಧನ ಭಟ್ಟರನ್ನು ಮನೆಗೆ ತಲುಪಿಸಿದರು. ಮುಸ್ಲಿಂ ಯುವಕರಿಗೆ ಭಟ್ಟರ ಮನೆ ಮಂದಿ ಕೃತಜ್ಞತೆ ಸಲ್ಲಿಸಿದರು. ಈ ಐದು ಯುವಕರ ಕಾರ್ಯವನ್ನು ಊರಿನ ನಾಗರಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.