ಮಹಿಳಾ ಪೊಲೀಸ್ ಪೇದೆಯ ಹತ್ಯೆ ಆರೋಪಿ ಪೊಲೀಸ್ ಕಾನ್ಸ್‌ಟೇಬಲ್‌ ಬಂಧನ; ಅಸ್ಥಿಪಂಜರ ಪತ್ತೆ

ರಾಜ್ಯ

ಎರಡು ವರ್ಷಗಳ ಹಿಂದೆ ಮಹಿಳಾ ಪೇದೆಯನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಿದ ಆರೋಪದಲ್ಲಿ ದೆಹಲಿ ಪೊಲೀಸ್‌ ಹೆಡ್ ಕಾನ್‌ಸ್ಟೆಬಲ್ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.ಪ್ರಮುಖ ಆರೋಪಿ ಸುರೇಂದ್ರ ಸಿಂಗ್, ರವೀನ್ ಮತ್ತು ರಾಜ್‌ಪಾಲ್ ಬಂಧಿತರು.

2021ರ ಅಕ್ಟೋಬರ್ 20ರಂದು ಮಹಿಳೆಯೊಬ್ಬರು ಕಾಣೆಯಾದ ವರದಿ ದಾಖಲಾಗಿತ್ತು. ತಿಂಗಳಾದರೂ ಆಕೆ ಪತ್ತೆಯಾಗಲಿಲ್ಲ. ಹೀಗಾಗಿ ಆಕೆಯನ್ನು ಹುಡುಕಲು ಪ್ರಾರಂಭಿಸಿದ್ದರು.ಆರೋಪಿ ಸುರೇಂದ್ರ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮಾಜಿ ಮಹಿಳಾ ಕಾನ್‌ಸ್ಟೆಬಲ್‌ನ ಅಸ್ಥಿಪಂಜರವನ್ನು ಬುರಾರಿ ಪ್ರದೇಶದ ಚರಂಡಿಯಿಂದ ವಶಪಡಿಸಿಕೊಂಡಿದ್ದಾರೆ. ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಶವವನ್ನು ಚರಂಡಿಯಲ್ಲಿ ಕಲ್ಲುಗಳ ಕೆಳಗೆ ಬಚ್ಚಿಟ್ಟಿದ್ದರು. ಪೊಲೀಸರು ಅಸ್ಥಿಪಂಜರವನ್ನು ತಮ್ಮ ವಶಕ್ಕೆ ಪಡೆದು ವಿಧಿವಿಜ್ಞಾನ ವಿಭಾಗಕ್ಕೆ ಕಳುಹಿಸಿದ್ದಾರೆ. ಇದೀಗ ಪೊಲೀಸರು ಮಾಜಿ ಕಾನ್‌ಸ್ಟೆಬಲ್‌ನ ಗುರುತು ದೃಢಪಡಿಸಲು ಆಕೆಯ ತಾಯಿಯ ಡಿಎನ್‌ಎ ಮಾದರಿಯನ್ನು ತೆಗೆದುಕೊಂಡು ಡಿಎನ್‌ಎ ಮಾದರಿಯನ್ನು ಹೊಂದಿಸಲು ಸಿದ್ಧತೆ ನಡೆಸಿದ್ದಾರೆ.

ಮೋನಾ 2014ರಲ್ಲಿ ದೆಹಲಿ ಪೊಲೀಸ್‌ಗೆ ಸೇರಿದ್ದರು. ಅವರನ್ನು ಪಿಸಿಆರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಸುರೇಂದ್ರ ಕೂಡ ಆಗ ಪಿಸಿಆರ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದರು. ಸುರೇಂದ್ರ ಕೂಡ ಬುಲಂದ್ ಶಹರ್ ನಲ್ಲಿರುವ ಮೋನಾ ಮನೆಗೆ ಬರತೊಡಗಿದ. ಕುಟುಂಬದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದನು. ಸುರೇಂದ್ರ ಮದುವೆಯಾಗಿದ್ದು ಆತನಿಗೆ ಒಂದು ಮಗುವಿತ್ತು. ಅವನ ಕುಟುಂಬ ಅಲಿಪುರದಲ್ಲಿ ವಾಸಿಸುತ್ತಿತ್ತು.

ಸುರೇಂದ್ರ ತನ್ನನ್ನು ಮದುವೆಯಾಗುವಂತೆ ಮೋನಾಗೆ ಒತ್ತಡ ಹೇರಲು ಪ್ರಾರಂಭಿಸಿದನು. ಆದರೆ ಮೋನಾ ಅದಕ್ಕೆ ಆಗಲ್ಲ ಎಂದಿದ್ದಳು. ಮೋನಾ ತನ್ನ ಮನೆಯವರಿಗೆ ಈ ವಿಚಾರವನ್ನು ಬಹಿರಂಗಪಡಿಸಬಹುದು ಎಂದು ಸುರೇಂದ್ರ ಆತಂಕಗೊಂಡಿದ್ದು, ಹೀಗಾಗಿ ಆಕೆಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದನು. ಕೊಲೆ ಮಾಡಿದ ಬಳಿಕ ಮೋನಾಳ ಕುಟುಂಬ ಜೊತೆ ಹುಡುಕುವ ನಾಟಕವಾಡಿದ್ದನು. ಅವರು ನಿಯಮಿತವಾಗಿ ಮುಖರ್ಜಿ ನಗರ ಪೊಲೀಸ್ ಠಾಣೆಗೆ ಬಂದು ಮೋನಾ ಅವರನ್ನು ಹುಡುಕುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದನು