ಹೆಣ ಬೇಕಾ.. ಹಣ ಕೊಡಿ: ಇಂಡಿಯಾನ.ಹೆಣ ಬಿಡಲ್ಲ.. ಹಣ ಕೊಡಲ್ಲ: ಡಿವೈಎಪ್ಐ.

ಕರಾವಳಿ

ಡಿವೈಎಫ್ಐ ನಡೆಗೆ ಬೆಚ್ಚಿದ ಆಸ್ಪತ್ರೆ ಮಂಡಳಿ

ಪರಿಶಿಷ್ಟ ಜಾತಿಗೆ ಸೇರಿದ ಮೂಡಬಿದ್ರೆಯ ಮಹಾಬಲ ಎನ್ನುವವರು ಉಸಿರಾಟದ ಸಮಸ್ಯೆಯಿಂದ ಕಳೆದ ಮೂರು ದಿನಗಳ ಹಿಂದೆ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಒಳರೋಗಿಯಾಗಿ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರ ತಂಡ ಹೃದಯದಲ್ಲಿ ಸಮಸ್ಯೆಯಿದೆ, ಬೈಪಾಸ್ ಸರ್ಜರಿ ಮಾಡಬೇಕಾಗುತ್ತದೆ ಅನ್ನುವ ವೈದ್ಯರ ತೀರ್ಮಾನದಂತೆ, ಸರ್ಜರಿ ನಂತರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದರು.

ಖಾಸಗಿ ಆಸ್ಪತ್ರೆಗಳ ದಂಧೆ ಕೂಡ ಅದೇ ರೀತಿಯದ್ದು. ಬದುಕಿದರೂ ದುಡ್ಡು ಕೊಡಬೇಕು, ಸತ್ತರೂ ಕೊಡಬೇಕು. ಈ ಖಾಸಗಿ ಆಸ್ಪತ್ರೆ ಇನ್ಯುರೆನ್ಸ್ ಇದೆ ಎಂದು ಬೇಕಾಬಿಟ್ಟಿಯಾಗಿ ಬಿಲ್ಲು ಮಾಡಿತ್ತು. ಮಹಾಬಲ ರವರು ಕೊನೆಯುಸಿರೆಳೆದಾಗ ಆಸ್ಪತ್ರೆಯ ಬಿಲ್ಲು ಬರೋಬ್ಬರಿ 5.5 ಲಕ್ಷ ಮೊತ್ತ. ಆದರೆ ಇನ್ಯುರೆನ್ಸ್ ನಲ್ಲಿ ಕೇವಲ 1.5 ಲಕ್ಷ ಮಾತ್ರ ಕವರಾದುದರಿಂದ ಬಾಕಿ ಮೊತ್ತ ಪಾವತಿಸದೆ ಮೃತದೇಹವನ್ನು ವಾರೀಸುದಾರರಿಗೆ ನೀಡಲಾಗುವುದಿಲ್ಲ ಎಂದು ಆಸ್ಪತ್ರೆ ಕಡೆಯಿಂದ ಖಡಕ್ ಮೆಸೇಜ್ ಕೂಡಾ ಬಂದಿತು. ವಾರೀಸುದಾರರು ಕಂಗಲಾಗಿದ್ದರು. ಪಂಪ್ ವೆಲ್ ಬಳಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ದುರಾವಸ್ಥೆಯಿಂದಾಗಿ ಕುಟುಂಬ ವರ್ಗ ಕಂಗಲಾಗಿತ್ತು.

ಶನಿವಾರ ಸಂಜೆಯಿಂದ ಆಸ್ಪತ್ರೆ ಮೃತದೇಹ ನೀಡಲು ನಿರಾಕರಿಸುತ್ತಿದ್ದರಿಂದ, ಆದಿತ್ಯವಾರ ಬೆಳಿಗ್ಗೆ ವಿಚಾರ ತಿಳಿದು ಕುಟುಂಬ ವರ್ಗದವರ ಜೊತೆ ಆಸ್ಪತ್ರೆಗೆ ದೌಡಾಯಿಸಿದ ಡಿ.ವೈ.ಎಫ್.ಐ ಜಿಲ್ಲಾಧ್ಯಕ್ಷ ಬಿ.ಕೆ. ಇಂತಿಯಾಝ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್ ಆಸ್ಪತ್ರೆಗಳ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಕೆಪಿಎಮ್ಇ ಆಕ್ಟ್ ಪ್ರಕಾರ ಯಾವುದೇ ಕಾರಣಕ್ಕೂ ಮೃತದೇಹವನ್ನು ಅಕ್ರಮವಾಗಿ ಬಂಧನದಲ್ಲಿಡಲು ಅವಕಾಶವಿಲ್ಲ. ಸರಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಹೋರಾಟದ ಎಚ್ಚರಿಕೆ ನೀಡಿದ ಪರಿಣಾಮ ಆಸ್ಪತ್ರೆ ಆಡಳಿತ ಮಂಡಳಿ ಯಾವುದೇ ಬಿಡಿಗಾಸು ಪಡೆಯದೆ ಮೃತದೇಹವನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಿದೆ. ಡಿವೈಎಫ್ಐ ನಾಯಕರ ಸತತ ಪ್ರಯತ್ನದಿಂದಾಗಿ ಇದು ಸಾಧ್ಯವಾಯಿತು. ಬಜಾಲ್ ಪಕ್ಕಲಡ್ಕದ ಯುವಕ ಮಂಡಲದ ಯುವಕರು ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಮೂಡಬಿದಿರೆಗೆ ತಲುಪಿಸುವಲ್ಲಿ ಸಹಕಾರಿಯಾಗಿದ್ದಾರೆ.