ಮುಸ್ಲಿಂ ಸಮಾಜವನ್ನು ನಂಬಿ ಕೂತಿಲ್ಲ ಅಂದ ಕುಮಾರಸ್ವಾಮಿ.! ಬಾವಾ ಬ್ರದರ್ಸ್’ ಮುಂದಿನ ನಡೆ ಏನು.?

ರಾಜ್ಯ

ಬಿಜೆಪಿ ಅಧಿಕಾರಕ್ಕೇರಿದರೆ ಬಾವಾ ಸಹೋದರ ರಾಜ್ಯಸಭಾ ಸದಸ್ಯ

ರಾಜ್ಯದಲ್ಲಿ ಬಿಜೆಪಿಯೊಂದಿಗೆ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ತೀರ್ಮಾನದ ವಿರುದ್ಧ ಆ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅಲ್ಪಸಂಖ್ಯಾತ ನಾಯಕರು ಹಾಗೂ ಜಾತ್ಯತೀತ ಹಿಂದೂ ನಾಯಕರು ಭ್ರಮನಿರಸನಗೊಂಡಿದ್ದು ಜೆಡಿಎಸ್ ಗೆ ಕೈ ಕೊಟ್ಟು ಕಾಂಗ್ರೆಸ್ ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಈಗಾಗಲೇ ಜೆಡಿಎಸ್ ಪಕ್ಷದ ಮುಸ್ಲಿಂ ಮುಖಂಡರು ಸಭೆ ಸೇರಿ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದು, ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಕುಮಾರಸ್ವಾಮಿ ಪಕ್ಷ ಬಿಡುವವರು ಬಿಡಲಿ, ಜೆಡಿಎಸ್ ಮುಸ್ಲಿಂ ಸಮಾಜವನ್ನು ನಂಬಿ ಕೂತಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಕುಮಾರಸ್ವಾಮಿ ಯ ಈ ಸ್ಟೇಟ್ ಮೇಂಟ್ ಬಗ್ಗೆ ಮುಸ್ಲಿಂ ಸಮಾಜ ದೊಡ್ಡ ರೀತಿಯ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಏಕೆಂದರೆ ಬಿಜೆಪಿಯೊಂದಿಗೆ ದೋಸ್ತಿ ಮಾಡಿ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಇದೇ ಕುಮಾರಸ್ವಾಮಿ ಮದರಸದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತದೆ ಎಂದು ಮೊಟ್ಟಮೊದಲ ಬಾರಿಗೆ ನಾಲಿಗೆ ಬಿಟ್ಟಿದ್ದರು. ಬಿಜೆಪಿಗಿಂತ ಈ ಕುಮಾರಸ್ವಾಮಿ ಮಹಾ ಕೋಮುವಾದಿ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಓಟಿಗಾಗಿ ಜಾತ್ಯತೀತ ಮುಖವಾಡ ಧರಿಸಿದರಷ್ಟೇ. ಇದೇ ಕುಮಾರಸ್ವಾಮಿ ನಂಬಿ ಹಲವು ಮುಸ್ಲಿಂ ಮುಖಂಡರು ಜೆಡಿಎಸ್ ಸೇರಿ ಇದೀಗ ತಮ್ಮ ರಾಜಕೀಯ ಭವಿಷ್ಯಕ್ಕೆ ಕಲ್ಲು ಹಾಕಿದ್ದಾರೆ.

ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಎದ್ದಿರುವ ಪ್ರಶ್ನೆ ಬಿ.ಎಂ ಫಾರೂಕ್, ಮೊಹಿದ್ದೀನ್ ಬಾವಾ ರವರ ಮುಂದಿನ ನಡೆ ಏನು? ಎಂಬುದರ ಬಗ್ಗೆ. ಸಮುದಾಯದ ಹೆಸರೇಳಿ ಬೇಳೆ ಬೇಯಿಸಿಕೊಳ್ಳುವ ಇಂತಹ ನಾಯಕರು ಸಮುದಾಯಕ್ಕೆ ಅನ್ಯಾಯವಾದಾಗ ತುಟಿಕ್ ಪಿಟಿಕ್ ಅನ್ನುತ್ತಿಲ್ಲ. ಇವರು ನಾಯಕರಾಗಲು ಮಾತ್ರ ಸಮುದಾಯ ಬಳಸಿಕೊಳ್ಳುತ್ತಾರೆಯೇ ಹೊರತು ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೆ ಬಿಜೆಪಿ ಯೊಂದಿಗೆ ದೋಸ್ತಿ ಮಾಡಿದಾಗ, ಕುಮಾರಸ್ವಾಮಿ ಸಮುದಾಯದ ವಿರುದ್ಧ ಮಾತಾಡಿದಾಗ ರಾಜೀನಾಮೆ ಬಿಸಾಕಿ ಬರಬೇಕಿತ್ತು.

ಆದರೆ ಬಿ.ಎಂ ಫಾರೂಕ್ ಬಿಜೆಪಿಯೊಂದಿಗೆ ಮೈತ್ರಿ ಸಮುದಾಯಕ್ಕೇನೂ ತೊಂದರೆ ಇಲ್ಲ ಅನ್ನುವ ಸೃಷ್ಠೀಕರಣ ನೀಡಿದ್ದಾರೆ. ಇವರು ನಂಬಿರುವುದು ಸೂಟ್ ಬೂಟು ಹಾಕಿಕೊಂಡವರು ಮಾತ್ರ ಸಮುದಾಯವೆಂದು. ಅವರಿಗೆ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ತಮ್ಮ ಬ್ಯುಸಿನೆಸ್ ನಡೆದೇ ನಡೆಯುತ್ತದೆ.

ಮೂಲವೊಂದರ ಪ್ರಕಾರ ಯಾವುದೇ ನಾಯಕರು ರಾಜೀನಾಮೆ ನೀಡಿದರೂ ಜೆಡಿಎಸ್ ನಿಂದ ಫಾರೂಕ್ ಬಿಟ್ಟು ಬರಲ್ಲ ಅನ್ನುವ ಮಾತು ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಫಾರೂಕ್ ರಾಜ್ಯಸಭಾ ಸದಸ್ಯತ್ವ ನೀಡಲಾಗುತ್ತದೆ ಎಂದು ಭರವಸೆ ನೀಡಲಾಗಿದೆಯಂತೆ. ಇವರಿಗೆ ಅಧಿಕಾರ ಮಾತ್ರ ಮುಖ್ಯ ಅನ್ನುವ ಮಾತುಗಳು ಇದೀಗ ಮುಸ್ಲಿಂ ವಲಯಗಳಲ್ಲಿ ಕೇಳಿ ಬರುತ್ತಿದೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಮೊಹಿದ್ದೀನ್ ಬಾವಾ ಇದೀಗ ಎಲ್ಲೂ ಸಲ್ಲದೆ ಏಕಾಂಗಿಯಾಗಿ ಬಿಟ್ಟಿದ್ದಾರೆ ಅನ್ನುವ ಮಾತುಗಳು ರಾಜಕೀಯ ವಲಯಗಳಿಂದ ಕೇಳಿ ಬರುತ್ತಿದೆ. ಇನಾಯತ್ ಅಲಿ ಯೊಂದಿಗೆ ಜಿದ್ದಿಗೆ ಬಿದ್ದು ಪಕ್ಷ ತ್ಯಜಿಸಿ ತಮ್ಮ ಇಮೇಜ್ ಬಾವಾ ಕಳೆದುಕೊಂಡಿದ್ದಾರೆ. ಮೈತ್ರಿ ಸರ್ಕಾರ ಬಂದು ಮಂತ್ರಿಯಾಗಬಹುದು ಅನ್ನುವ ಆಲೋಚನೆಯಿಂದ ಜೆಡಿಎಸ್ ಗೆ ಹಾರಿದ್ದ ಬಾವಾ ಇದೀಗ ಎಲ್ಲವನ್ನೂ ಕಳೆದು ಏಕಾಂಗಿಯಾಗಿದ್ದಾರೆ. ಮರಳಿ ಕಾಂಗ್ರೆಸ್ ಗೆ ಸೇರುವ ಇರಾದೆ ಹೊಂದಿದರೂ ಕರೆಸಿಕೊಳ್ಳಲು ಈವರೆಗೂ ಯಾರೂ ಮಧ್ಯಸ್ಥಿಕೆ ವಹಿಸುತ್ತಿಲ್ಲ ಅನ್ನುವ ಮಾತಿದೆ.

ರಾಜಕಾರಣ ಅನ್ನುವುದು ನಿಂತ ನೀರಲ್ಲ. ಆದರೆ ದೂರದೃಷ್ಟಿಯುಳ್ಳವರು ನಾಯಕರಾಗಿ ವಿರಾಜಮಾನರಾಗಬಹುದು. ಸ್ವಾರ್ಥ, ಸ್ವ ಇಚ್ಛೆಗೆ ಮಾರುಹೋದರೆ ಒಂದಲ್ಲ ಒಂದು ದಿನ ಗುಂಡಿಗೆ ಬೀಳುವುದು ಗ್ಯಾರಂಟಿ.