ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಕ್ಷೇತ್ರದಲ್ಲಿ ಸೋತರೂ ತನ್ನ ಹವಾ ಮುಂದುವರಿಸಿಕೊಂಡು ಬಂದಿದ್ದಾರೆ. ಹಾಲಿ ಶಾಸಕರು ಜನರ ಕೈಗೆ ಸಿಗದಿದ್ದರೂ, ಇನಾಯತ್ ಅಲಿ ಕ್ಷೇತ್ರದ ಸಭೆ, ಸಮಾರಂಭಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಾ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಹಳಿ ತಪ್ಪಿದ ಪಕ್ಷವನ್ನು ಪುನರ್ ಸಂಘಟಿಸುವಲ್ಲಿ ಸತತ ಪ್ರಯತ್ನ ಮಾಡುತ್ತಿದ್ದಾರೆ.
ಇದರ ಜೊತೆಗೆ ಅಭಿವೃದ್ಧಿ ರಾಜಕಾರಣ ಬಗ್ಗೆ ವಿಶೇಷ ಒಲವು ಹೊಂದಿರುವ ಇನಾಯತ್ ಅಲಿ ಪ್ರವಾಸೋದ್ಯಮ ಸಹಿತ ಕರಾವಳಿ ಅಭಿವೃದ್ಧಿಗೆ ವಿಶೇಷ ಆದ್ಯತೆ ಹಾಗೂ ಮಂಗಳೂರು ಉತ್ತರ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರಾವಳಿಯಲ್ಲಿ ವಿಪುಲ ಅವಕಾಶವಿದೆ. ವ್ಯಾಪಾರ ಕೇಂದ್ರವಾಗಿಯೂ ಕರಾವಳಿಯನ್ನು ಅಭಿವೃದ್ಧಿ ಪಡಿಸಲು ಸಾರಿಗೆ ಸಂಪರ್ಕ ಉತ್ತಮವಿದೆ ಎಂದು ಡಿಸಿಎಂ ಅವರ ಗಮನ ಸೆಳೆದರು.
ಅಣೆಕಟ್ಟು, ತೂಗುಸೇತುವೆ ಸೇರಿದಂತೆ ಜಲಸಂಪನ್ಮೂಲ ಇಲಾಖೆಯಲ್ಲಿ ಬರುವ ಅನುದಾನವನ್ನು ಕರಾವಳಿ ಅಭಿವೃದ್ಧಿಗೆ ಮೀಸಲಿಡುವಂತೆ ಒತ್ತಾಯಿಸಿದರು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಸುರತ್ಕಲ್ ಮಾರುಕಟ್ಟೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ, ಹೋಬಳಿಮಟ್ಟಕ್ಕೊಂದು ಸಮುದಾಯ ಅಸ್ಪತ್ರೆ,ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಅನುದಾನ ನೀಡುವಂತೆ ಆಗ್ರಹಿಸಿದರು.
ಮುಂದಿನ ಲೋಕಸಭಾ ಚುನಾವಣೆಯ ಗಮನ ಕೇಂದ್ರೀಕರಿಸಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಬಲಪಡಿಸುವ ಕುರಿತಂತೆ ಚರ್ಚಿಸಿದರು.