ಪುತ್ರ ವ್ಯಾಮೋಹ: ಹಗಲು ಕಂಡ ಬಾವಿಗೆ ಬೀಳುವುದು ಎಂದರೆ ಇದೇನಾ..?

ರಾಜ್ಯ

ಡಿಕೆಶಿಗೆ ಸ್ಟ್ರೋಕ್ ಕೊಡಲು ಹೋಗಿ ಬರ್ಬದಾಗುತ್ತಾ ಜೆಡಿಎಸ್.? ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಜೆಡಿಎಸ್ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಈಗ ಅದೇ ಮೈತ್ರಿ ಜೆಡಿಎಸ್ ಪಕ್ಷವನ್ನು ಬುಡಮೇಲುಗೊಳಿಸುತ್ತದೆಯೋ ಅನ್ನುವ ಅನುಮಾನ ಜೆಡಿಎಸ್ ನಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆ ಸಹಜವಾಗಿ ಕಾಡುತ್ತಿದೆ.

ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇಂದ್ರದ ಹೈಕಮಾಂಡ್ ಮಟ್ಟದಲ್ಲಿ ನಡೆದ ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲೂ ಅಸಮಾಧಾನ ಭುಗಿಲೆದ್ದಿದ್ದು ಬಹಿರಂಗವಾಗಿ ತೋರ್ಪಡಿಸದೆ ಒಳಗೊಳಗೇ ಕುದಿಯುತ್ತಿದೆ‌.

ಜೆಡಿಎಸ್ ಪಕ್ಷದ ಪ್ರಮುಖ ಮತಬ್ಯಾಂಕ್ ಆಗಿರುವ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್ ಮಾಸ್ಟರ್ ಸರ್ಜರಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೀನಾಯ ಪ್ರದರ್ಶನ ಕಂಡಿತ್ತು. ಜೆಡಿಎಸ್ ಸ್ಟ್ರಾಂಗ್ ಹೋಲ್ಡ್ ಎಂದು ಕರೆಸಿಕೊಳ್ಳುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೀನಾಯವಾಗಿ ಸೋಲು ಕಂಡಿದ್ದರು. ಇಲ್ಲಿ ಡಿಕೆಶಿ ಪ್ರಭಾವ ಕೆಲಸ ಮಾಡಿತ್ತು. ಇನ್ನು ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ ರೇವಣ್ಣ ಯುವಕ ಶ್ರೇಯಸ್ ಪಟೇಲ್ ಎದುರು ಕಡಿಮೆ ಮತಗಳ ಅಂತರದಿಂದ ಪ್ರಯಾಸದ ಗೆಲುವನ್ನು ಕಂಡಿದ್ದರು.

ಸಕಲೇಶಪುರದಲ್ಲಿ ಗೆಲ್ಲುವ ಎಲ್ಲಾ ಚಾನ್ಸ್ ಇದ್ದ ಹೆಚ್.ಕೆ ಕುಮಾರಸ್ವಾಮಿ ಬಿಜೆಪಿ ಯಿಂದ ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಪ್ರೀತಂ ಗೌಡರ ಶಿಷ್ಯ ಸಿಮೆಂಟ್ ಮಂಜು ವಿರುದ್ಧ ಕೆಲವೇ ಮತಗಳ ಅಂತರದಿಂದ ಸೋತಿದ್ದರು. ಜೆಡಿಎಸ್ ಭದ್ರಕೋಟೆ ಎನಿಸಿದ್ದ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಶ್ರವಣಬೆಳಗೊಳ, ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ವಿಜಯ ಸಾಧಿಸಿದರು, ಪ್ರಯಾಸ ಪಡಬೇಕಾಯಿತು. ಹಾಸನದಲ್ಲಿ ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಕೈ ಹಿಡಿದ ಪರಿಣಾಮ ಸ್ವರೂಪ್ ಗೆ ಅಲ್ಲಿ ಗೆಲುವಾಯಿತು. ಅದೇ ಅಲ್ಪಸಂಖ್ಯಾತ ಸಮುದಾಯವನ್ನು ಪುತ್ರ ವ್ಯಾಮೋಹಕ್ಕಾಗಿ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡ ಪರಿಣಾಮ ಸಹಜವಾಗಿ ಅಲ್ಪಸಂಖ್ಯಾತರು ಜೆಡಿಎಸ್ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ.

ಕಾಂಗ್ರೆಸ್ ವಿರೋಧಿಸಿಕೊಂಡು ಬಂದಿದ್ದ ಅಲ್ಪಸಂಖ್ಯಾತ ಒಂದು ವರ್ಗ ಜೆಡಿಎಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿತ್ತು. ಬಿಜೆಪಿಯೊಂದಿಗಿನ ಮೈತ್ರಿ ಅವರನ್ನು ಅತಂತ್ರವಾಗಿಸಿದೆ.

ಅಲ್ಪಸಂಖ್ಯಾತ ಮತಗಳನ್ನೆ ನೆಚ್ಚಿ ಉಸಿರಾಡುತ್ತಿದ್ದ ಜೆಡಿಎಸ್ ಇದೀಗ ಅಲ್ಪಸಂಖ್ಯಾತ ಸಮುದಾಯವೊಂದನ್ನೆ ನಂಬಿ ಕೂತಿಲ್ಲ ಅನ್ನುವ ಹೇಳಿಕೆ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗುವುದರಲ್ಲಿ ಅನುಮಾನವಿಲ್ಲ. ಅದೇ ರೀತಿ ಪಕ್ಷ ಕುಟುಂಬ ರಾಜಕಾರಣ, ಹಣವಿದ್ದವರಿಗೆ ಮಣೆ ಹಾಕಿದ ಕೆಲವೊಂದು ತಪ್ಪು ನಿರ್ಧಾರದಿಂದ ಕಿಂಗ್ ಮೇಕರ್ ಆಗಬೇಕಿದ್ದ ಪಕ್ಷ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ರಾಜ್ಯ ಸಭೆ, ವಿಧಾನಸಭಾ ಪರಿಷತ್ ಸ್ಥಾನಗಳನ್ನು ದುಡ್ಡಿದ್ದವರಿಗೆ ಮಾರಿದ ಪರಿಣಾಮ ನಿಷ್ಠಾವಂತ ಕಾರ್ಯಕರ್ತರು, ನಾಯಕರು ಪಕ್ಷದಿಂದ ದೂರ ಸರಿಯುವಂತಾಗಿದೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕತ್ತು ಹಿಸುಕಿ ರಾಜಕೀಯದ ಪ್ರಮುಖ ನಿರ್ಧಾರಗಳನ್ನು ತನ್ನ ಕುಟುಂಬಸ್ಥರ ಮತ್ತು ಕುಪೇಂದ್ರ ರೆಡ್ಡಿ, ಫಾರೂಕ್ ರಂತಹ ಪಕ್ಷದ ಕಾರ್ಯಕರ್ತರ ನಾಡಿಮಿಡಿತ ಗೊತ್ತಿಲ್ಲದ, ಹಣದ ಥೈಲಿ ಹಿಡಿದುಕೊಂಡವರೊಂದಿಗೆ ಕುಳಿತುಕೊಂಡು ಪಕ್ಷದ ಹಣೆಬರಹ ನಿರ್ಧರಿಸಿದ ಪರಿಣಾಮ ಇಂದು ರಾಜಕೀಯವಾಗಿ ಸಂಕಷ್ಟದಲ್ಲಿದೆ. ಇಲ್ಲಿ ರಾಜ್ಯಾಧ್ಯಕ್ಷರು ಆಟಕ್ಕುಂಟು ಲೆಕ್ಕಕ್ಕಿಲ್ಲ. ನಿರ್ಧಾರ ಕೈಗೊಳ್ಳುವವರು ಕುಟುಂಬ ಕೇಂದ್ರಿತವಾಗಿ ಹಾಗೂ ಸೀಮಿತ ದುಡ್ಡಿನ ಇಬ್ಬರು ನಾಯಕರು.

ಇದೀಗ ತತ್ವ ಸಿದ್ಧಾಂತಗಳನ್ನು ಬಲಿಕೊಟ್ಟು ಪುತ್ರ ವ್ಯಾಮೋಹಕ್ಕಾಗಿ ಬಿಜೆಪಿಯೊಂದಿಗೆ ದೋಸ್ತಿ ಮಾಡಿದ ಜೆಡಿಎಸ್ ತೀರ್ಮಾನ ವಿರೋಧಿಸಿ ಸಹಸ್ರಾರು ಅಲ್ಫಸಂಖ್ಯಾತರು ಮಾತ್ರವಲ್ಲ ಅರಸೀಕೆರೆಯ ಎನ್ ಆರ್ ಸಂತೋಷ್, ಮೂಡಿಗೆರೆಯ ಕುಮಾರಸ್ವಾಮಿ ಸೇರಿದಂತೆ ಜಾತ್ಯತೀತ ಹಿಂದೂ ನಾಯಕರು ಜೆಡಿಎಸ್ ಬಿಡಲು ಸಿದ್ಧರಾಗಿದ್ದಾರೆ.

ಜೆಡಿಎಸ್ ವಿರುದ್ಧ ವೈರತ್ವ ಹೊಂದಿದ್ದ ಬಿಜೆಪಿ ನಾಯಕರಾದ ಹಾಸನದ ಪ್ರೀತಂ ಗೌಡ, ಅರಕಲಗೂಡಿನ ಎ.ಟಿ ರಾಮಸ್ವಾಮಿ, ಸಕಲೇಶಪುರದ ವಿಶ್ವನಾಥ್ ಬಹಿರಂಗವಾಗಿಯೇ ಮೈತ್ರಿಯನ್ನು ವಿರೋಧಿಸಿದ್ದಾರೆ.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯದ ಅಲ್ಫಸಂಖ್ಯಾತ ಮತದಾರರಿಗೆ ಕಾಂಗ್ರೆಸ್ ಅನಿವಾರ್ಯ ಆಯ್ಕೆಯಾಗಲಿದೆ. ಜೊತೆಗೆ ಇದುವರೆಗೆ ರಾಜ್ಯದ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಿಭಜನೆಯಾಗುತ್ತಿದ್ದು ಇದರ ನೇರ ಲಾಭ ಬಿಜೆಪಿ ಪಡೆಯುತ್ತಿತ್ತು. ಜೆಡಿಎಸ್ ನೊಂದಿಗಿನ ಮೈತ್ರಿಯಿಂದ ಮತವಿಭಜನೆಯಾಗದೆ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಇತ್ತ ಈ ಮೈತ್ರಿಯಿಂದಾಗಿ ಜೆಡಿಎಸ್ ಪರಂಪರಾಗತ ಮತ ಕಳೆದುಕೊಂಡು ತೀವ್ರ ಕುಸಿತ ಕಾಣುವ ಸಾಧ್ಯತೆ ಇದೆ.