ಪೊಲೀಸ್‌ ಆಯುಕ್ತರ ಕಚೇರಿ ಬಳಿಯಲ್ಲಿರುವ ಬಿಎಂಟಿಸಿ ಬಸ್‌ ತಂಗುದಾಣಕ್ಕೆ ಖದೀಮರಿಂದ ಕನ್ನ

ರಾಜ್ಯ

ಬೆಂಗಳೂರು: ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿ ಬಳಿಯಲ್ಲಿರುವ ಕನ್ನಿಂಗಾ ಹ್ಯಾಮ್ ರಸ್ತೆ ಪಕ್ಕ ನಿರ್ಮಿಸಿರುವ ಬಿಎಂಟಿಸಿ ಬಸ್‌ ತಂಗುದಾಣವೊಂದಕ್ಕೆ ಖದೀಮರು ಕನ್ನ ಹಾಕಿದ್ದಾರೆ. ಬೆಂಗಳೂರಿನ ಕನ್ನಿಂಗ್‌ ಹ್ಯಾಮ್‌ ರಸ್ತೆಯಲ್ಲಿರುವ ಬಸ್‌ ತಂಗುದಾಣ ಹಳೆಯದಾಗಿದ್ದರಿಂದ ಇತ್ತೀಚೆಗಷ್ಟೇ ಬಿಬಿಎಂಪಿ ನೂತನ ಬಸ್‌ ತಂಗುದಾಣವನ್ನು ನಿರ್ಮಿಸಿತ್ತು. ಆದರೆ ಖದೀಮರು ಶೆಲ್ಟರ್‌ನಲ್ಲಿದ್ದ ಸ್ಟೀಲ್ ಮುಂತಾದ ಬೆಲೆಬಾಳುವ ಸಾಮಗ್ರಿಗಳನ್ನು, ಹಂತಹಂತವಾಗಿ ಕದ್ದು ನಾಪತ್ತೆಯಾಗಿದ್ದಾರೆ.

ಈ ಶೆಲ್ಟರ್‌ ನಿರ್ಮಿಸಲು ಗುತ್ತಿಗೆ ಪಡೆದಿದ್ದ ಕಂಪನಿಯ ಅಧಿಕಾರಿಯೊಬ್ಬರು ಬಸ್‌ ತಂಗುದಾಣವನ್ನು ನೋಡಲು ಬಂದಿದ್ದರು. ಆದರೆ ಅಲ್ಲಿ ಬಸ್‌ ತಂಗುದಾಣವೇ ಇಲ್ಲದ್ದನ್ನು ಗಮನಿಸಿ ಒಮ್ಮೆಲೇ ಶಾಕ್‌ ಆಗಿದ್ದಾರೆ. ತಕ್ಷಣ ಬಿಬಿಎಂಪಿಗೆ ಕರೆ ಮಾಡಿ ತಂಗುದಾಣವನ್ನು ತೆರವುಗೊಳಿಸಿಲಾಗಿದೆಯೇ ಎಂಬ ಬಗ್ಗೆ ವಿಚಾರಿಸಿದ್ದಾರೆ. ಇದಕ್ಕೆ ಬಿಬಿಎಂಪಿಯವರು ಇಲ್ಲ ಎಂದು ಉತ್ತರ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ತಂಗುದಾಣ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕಂಪನಿಯ ಸಹ ಉಪಾಧ್ಯಕ್ಷ ಎನ್.ರವಿ ರೆಡ್ಡಿ ಅವರು ಸೆಪ್ಟೆಂಬರ್ 30 ರಂದು ದೂರು ನೀಡಿದ ನಂತರ ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿದ್ದಾರೆ.