ಕುಣಿಕೆ ಬಿಗಿಯಲು ಇದ್ದಿದ್ದು ಬರೀ ಕೆಲವೇ ಸೆಕೆಂಡುಗಳು.. ಮರಣದಂಡನೆಯಿಂದ ಪಾರಾಗಿ ಬಂದ ಯುವಕ.!

ಅಂತಾರಾಷ್ಟ್ರೀಯ

ತಬೂಕಿನಲ್ಲಿ ನಡೆಯಿತು ಅಪರೂಪದ ಕ್ಷಮಾದಾನ

ಅದು ಸೌದಿ ಅರೇಬಿಯಾ. ಭಾರತದಂತಲ್ಲ ಅಲ್ಲಿನ ಕಾನೂನು. ತಪ್ಪಿತಸ್ಥರಿಗೆ ಅಲ್ಲಿ ಗಲ್ಲು ಖಾಯಂ. ಮರಣದಂಡನೆಗೆ ಹೆದರಿ ಅಲ್ಲಿ ಅಪರಾಧಗಳು ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಕಮ್ಮಿ ಎಂದೇ ಹೇಳಬೇಕು. ಒಮ್ಮೊಮ್ಮೆ ಭಾರತದಲ್ಲಿ ಅಪರಾಧಗಳು ವಿಜೃಂಭಿಸುತ್ತಿರುವಾಗ ಸೌದಿಯಂತಹ ಕಟ್ಟುನಿಟ್ಟಿನ ಕಾನೂನುಗಳು ಇಲ್ಲಿ ಜಾರಿಯಾಗಬೇಕು ಎಂದು ಹೇಳುವವರಿದ್ದಾರೆ. ಆ ಮಟ್ಟಿಗೆ ಸೌದಿ ಕಾನೂನುಗಳು ಪವರ್ ಫುಲ್.

ಒಬ್ಬನಿಗೆ ಆಯುಷ್ಯವಿದ್ದರೆ ಹೇಗೂ ಬದುಕಿ ಬರಬಹುದು ಅನ್ನುವುದಕ್ಕೆ ಸೌದಿ ಅರೇಬಿಯಾದ ತಬೂಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸೌದಿ ಅರೇಬಿಯಾದ ನ್ಯಾಯಾಲಯದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಯುವಕನೊಬ್ಬನಿಗೆ ಮರಣದಂಡನೆಯನ್ನು ಘೋಷಿಸಿತ್ತು. ಮರಣದಂಡನೆಗೆ ಸಜ್ಜಾದ ಯುವಕನ ಮುಖಕ್ಕೆ ಬಟ್ಟೆ ಕಟ್ಟಿ ಇನ್ನೇನೂ ಗಲ್ಲುಶಿಕ್ಷೆಗೆ ಕೆಲವೇ ಕೆಲವು ಸೆಕೆಂಡುಗಳು ಬಾಕಿ ಇತ್ತು. ಪವಾಡಸದೃಶವಾಗಿ ಯುವಕ ಮರಣದಂಡನೆಯಿಂದ ಪಾರಾಗಿ ಬಂದಿದ್ದಾನೆ. ಎರಡು-ಮೂರು ದಿನಗಳ ಹಿಂದೆ ಸೌದಿ ಅರೇಬಿಯಾದ ತಬೂಕಿನಲ್ಲಿ ಇಂತಹ ಅಪರೂಪದ ಘಟನೆ ನಡೆದಿದೆ.

ಐದು ವರ್ಷಗಳ ಹಿಂದೆ ತಬೂಕಿನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಸೌದಿ ಪೌರ ಮುತೈರ್-ಅಲ್-ಅತವಿಯ ಮಗ ಕೊಲ್ಲಲ್ಪಟ್ಟಿದ್ದ. ಕೊಲ್ಲಲ್ಪಟ್ಟ ಯುವಕನ ಕುಟುಂಬಸ್ಥರು ಕಾನೂನು ಹೋರಾಟ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಕಾರಣರಾಗಿದ್ದರು. ಅದರಂತೆ ಐದು ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ ಆರೋಪಿಗೆ ಸೌದಿ ಕಾನೂನಿನ ಗರಿಷ್ಠ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಸೌದಿ ಕಾನೂನಿನಂತೆ ಮರಣದಂಡನೆಗೆ ಮೊದಲು ಕೆಲವೊಂದು ಕ್ರಮಗಳನ್ನು ಅನುಸರಿಸಲಾಗುತ್ತದೆ. ಸಾವಿಗೀಡಾದ ಹತ್ತಿರದ ಕುಟುಂಬಸ್ಥರು ಆರೋಪಿಯನ್ನು ಕ್ಷಮಿಸಿದರೆ ಮರಣದಂಡನೆ ರದ್ದಾಗುತ್ತದೆ.

ಆರೋಪಿಗೆ ಕ್ಷಮಾದಾನ ನೀಡುವುದಾದರೆ ದೊಡ್ಡ ಮೊತ್ತದ ದಯಾಧನ ಪಾವತಿಸುವುದಾಗಿ ಆರೋಪಿಯ ಕುಟುಂಬದ ಪ್ರಸ್ತಾಪಗಳನ್ನು ಹಾಗೂ ಆರೋಪಿಗೆ ಕ್ಷಮಾದಾನ ನೀಡಲು ನಡೆಸಿದ ಮಧ್ಯಸ್ಥಿಕೆಯನ್ನು ಕೊಲ್ಲಲ್ಪಟ್ಟ ವ್ಯಕ್ತಿಯ ತಂದೆ ಮುತೈರ್-ಅಲ್-ಅತವಿ ತಿರಸ್ಕರಿಸಿದ್ದರು. ಇದರಿಂದ ಆರೋಪಿಗೆ ಗಲ್ಲುಶಿಕ್ಷೆ ನೀಡುವುದು ಅನಿವಾರ್ಯವಾಯಿತು.

ಇನ್ನೇನೂ ಗಲ್ಲುಶಿಕ್ಷೆಗೆ ಕೆಲವೇ ಕೆಲವು ಸೆಕೆಂಡುಗಳು ಬಾಕಿ ಉಳಿದಿತ್ತು. ಅದಾಗಲೇ ಮುತೈರ್-ಅಲ್-ಅತವಿ ತನ್ನ ನಿಲುವನ್ನು ಬದಲಾಯಿಸಿದ್ದು ಆರೋಪಿಗೆ ಕ್ಷಮಾದಾನ ನೀಡಿದ್ದಾರೆ.

‘ಸೃಷ್ಟಿಕರ್ತನು ತನ್ನ ಮನಸ್ಸಿಗೆ ಶಾಂತಿ ಮತ್ತು ಅನುಗ್ರಹವನ್ನು ಸುರಿದಿದ್ದಾನೆ ಹಾಗೂ ದೇವ ಕೃಪೆ ಆಕಾಂಕ್ಷೆಯಿಂದ ಆರೋಪಿಗೆ ಕ್ಷಮಿಸಲು ಸಿದ್ಧನಾಗಿದ್ದೇನೆ’ ಎಂದು ಹೇಳಿದರು‌. ಕೊಲ್ಲಲ್ಪಟ್ಟ ಯುವಕನ ತಂದೆ ಕೊನೆ ಕ್ಷಣದಲ್ಲಿ ನೀಡಿದ ಕ್ಷಮಾದಾನದಿಂದ ಗಲ್ಲಿಗೇರಬೇಕಿದ್ದ ಯುವಕ ಪಾರಾಗಿ ಬಂದಿದ್ದಾನೆ.