ಲಾಕಪ್ ಡೆತ್, ದೌರ್ಜನ್ಯ, ಕರ್ತವ್ಯ ಲೋಪ ಹಾಗೂ ಪಾರದರ್ಶಕ ಕಾರ್ಯವೈಖರಿ ಸಲುವಾಗಿ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ ಒಂದು ವರ್ಷದ ಬ್ಯಾಕ್ ಆಪ್ ಇರುವ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ಮಾಹಿತಿ ಹಕ್ಕು ಆಯೋಗ, ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತಾಕೀತು ಮಾಡಿದೆ.
ಕಸ್ಟೋಡಿಯಲ್ ಡೆತ್ ಆರೋಪ ಕೇಸ್ ನಲ್ಲಿ ಠಾಣೆಯ ಸಿಸಿಟಿವಿ ದೃಶ್ಯಾವಳಿ ನೀಡಲು ನಿರಾಕರಿಸಿ, ದುರಸ್ತಿ ನೆಪ ಹೇಳಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿರುವ ಆಯೋಗ, ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾ ದುರಸ್ತಿ ನೆಪವನ್ನು ಗಂಭೀರವಾಗಿ ಪರಿಗಣಿಸಿದೆ. ಜತೆಗೆ ಆರ್ ಟಿ ಐ ಅಡಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಮಾಹಿತಿ ನೀಡಲು ನಿರಾಕರಣೆ, ಪೊಲೀಸ್ ಇಲಾಖೆ ವಿರುದ್ಧ ಹೆಚ್ಚಾದ ಮೇಲ್ಮನವಿ ಅರ್ಜಿಗಳ ಮೇಲೂ ಬೆಳಕು ಚೆಲ್ಲಿದೆ.
ಠಾಣೆಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಒದಗಿಸದ ಕಾರಣಕ್ಕೆ ಹೆಚ್ಚು ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗುತ್ತಿದೆ. ಕೆಲವು ಕೇಸ್ ಗಳಲ್ಲಿ ಅಧಿಕಾರಿಗಳು ಸಿಸಿಟಿವಿ ಕ್ಯಾಮರಾ ದುರಸ್ತಿಯಲ್ಲಿತ್ತು ಎಂಬ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಕೋರುವ ಆರ್ ಟಿ ಐ ಅರ್ಜಿಗಳ ದೂರುಗಳಿಗೆ ಅವಕಾಶ ಮಾಡಿಕೊಡಬಾರದು. ಜತೆಗೆ ರಾಜ್ಯದ ಎಲ್ಲಾ ಠಾಣೆಗಳಲ್ಲಿ ಹೊಸ ತಂತ್ರಜ್ಞಾನ ಹೊಂದಿರುವ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿ ಕ್ಯಾಮರಾಗಳು ಸುಸ್ಥಿತಿಯಲ್ಲಿರಬೇಕು. ಜತೆಗೆ ಕನಿಷ್ಠ ಒಂದು ವರ್ಷ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿಡುವ ವ್ಯವಸ್ಥೆ ಮಾಡಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು. ಈ ಬಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಯೋಗ ಡಿಜಿಪಿಗೆ ಸೂಚಿಸಿದೆ.
ಪಿಎಸ್ಐಗೆ 25 ಸಾವಿರ ದಂಡ: ಕೋಲಾರ ಜಿಲ್ಲೆ ನಂಗಲಿ ಠಾಣೆ ಪೊಲೀಸರು ಆಂಧ್ರ ಮೂಲದ ಮುನಿರಾಜು ಎಂಬುವವರನ್ನು ಅಗಸ್ಟ್ ನಲ್ಲಿ ಅನಧಿಕೃತವಾಗಿ ಕಸ್ಟಡಿಯಲ್ಲಿಟ್ಟುಕೊಂಡಿದ್ದರು. ಜತೆಗೆ ಠಾಣೆಯಲ್ಲಿ ಅಸ್ವಸ್ಥಗೊಂಡಿದ್ದ ಮುನಿರಾಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇದೊಂದು ಕಸ್ಟೋಡಿಯಲ್ ಡೆತ್ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.
ಪೊಲೀಸ್ ಠಾಣೆಗಳಲ್ಲಿ ಪಾರದರ್ಶಕ ಕಾರ್ಯನಿರ್ವಹಣೆ, ಮಾನವ ಹಕ್ಕುಗಳ ರಕ್ಷಣೆ ಸಲುವಾಗಿ ದೇಶದ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಿ 2020 ರಲ್ಲಿ ಆದೇಶ ನೀಡಿತ್ತು. 2023 ರ ಫೆಬ್ರವರಿಯಲ್ಲಿ ಪೊಲೀಸ್ ಠಾಣೆಗಳು, ಸಿಬಿಐ ಸೇರಿ ತನಿಖಾ ಸಂಸ್ಥೆ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಕೆ ಕುರಿತು ಅನುಪಾಲನಾ ವರದಿ ಸಲ್ಲಿಸುವಂತೆಯೂ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಖಡಕ್ ಸಂದೇಶ ರವಾನಿಸಿತ್ತು. ಸುಪ್ರೀಂ ಸೂಚನೆ ಮೇರೆಗೆ ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಸೇರಿ 1055 ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.