`ಸಪ್ತಪದಿ’ ಶಾಸ್ತ್ರ ನಡೆಯದಿದ್ದರೆ ವಿವಾಹ ಅಸಿಂಧು: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ರಾಷ್ಟ್ರೀಯ

“ಹಿಂದೂಗಳಲ್ಲಿ ಸಪ್ತಪದಿ ತುಳಿಯುವ ಶಾಸ್ತ್ರ ಮಾಡಿಲ್ಲವೆಂದಾದರೆ ಆ ಮದುವೆಯನ್ನು ಮಾನ್ಯ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ನನ್ನಿಂದ ವಿಚ್ಛೇದನ ಪಡೆಯದೆಯೇ ನನ್ನ ಪತ್ನಿಯು ಎರಡನೇ ವಿವಾಹವಾಗಿದ್ದು, ಆಕೆಗೆ ಶಿಕ್ಷೆಯಾಗಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೇ ಹೈಕೋರ್ಟ್‌ ರದ್ದು ಮಾಡಿ ಈ ತೀರ್ಪು ನೀಡಿದೆ.

ಸ್ಮತಿ ಸಿಂಗ್‌ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ನ್ಯಾ.ಸಂಜಯ್‌ ಕುಮಾರ್‌ ಸಿಂಗ್‌ ಅವರು, “ಶಾಸ್ತ್ರೋಕ್ತ ವಿವಾಹ ಎಂದರೆ, ಸೂಕ್ತ ರೀತಿಯಲ್ಲಿ ಸಮರ್ಪಕ ಸಮಾರಂಭಗಳೊಂದಿಗೆ ಮದುವೆ ಆಗುವುದು. ಈ ರೀತಿ ವಿವಾಹವಾಗಿಲ್ಲ ಎಂದಾದರೆ ಅದನ್ನು ಶಾಸ್ತ್ರೋಕ್ತ ವಿವಾಹ ಎಂದು ಹೇಳಲಾಗದು. ಹಿಂದೂ ವಿವಾಹ ಕಾನೂನಿನ ಪ್ರಕಾರ, ಮದುವೆಯು ಮಾನ್ಯವಾಗಲು ಇರುವ ಪ್ರಕ್ರಿಯೆಗಳ ಪೈಕಿ ಸಪ್ತಪದಿ ತುಳಿಯುವ ಶಾಸ್ತ್ರವೂ ಒಂದಾಗಿದೆ. ಇದೇ ನಡೆದಿಲ್ಲವೆಂದರೆ, ಆ ಮದುವೆ ಕಾನೂನಿನ ಪ್ರಕಾರವೂ ಮಾನ್ಯವಾಗುವುದಿಲ್ಲ’ ಎಂದು ಹೇಳಿದರು.

ಈ ಪ್ರಕರಣದಲ್ಲಿ ಪತಿಯು ತನ್ನ ಪತ್ನಿ ವಿರುದ್ಧ ಮಾಡಿರುವ ದೂರಿನಲ್ಲಿ ಎಲ್ಲೂ ತಾವು ಸಪ್ತಪದಿ ತುಳಿದು ವಿವಾಹವಾಗಿದ್ದೇವೆ ಎಂಬ ಬಗ್ಗೆ ಉಲ್ಲೇಖವಿಲ್ಲ, ಕೋರ್ಟ್‌ ಮುಂದೆ ನೀಡಿರುವ ಹೇಳಿಕೆಯಲ್ಲೂ ಅದನ್ನು ಪ್ರಸ್ತಾಪಿಸಲಾಗಿಲ್ಲ. ಹೀಗಾಗಿ, ಅರ್ಜಿಯಲ್ಲಿ ಅಪರಾಧ ಎಂದು ಪರಿಗಣಿಸುವ ಅಂಶಗಳೇ ಕಾಣಿಸುತ್ತಿಲ್ಲ. ಈ ಕಾರಣಕ್ಕಾಗಿ, ಪತ್ನಿ ವಿರುದ್ಧ ಹೊರಡಿಸಲಾಗಿರುವ ಸಮನ್ಸ್‌ ರದ್ದು ಮಾಡುವುದರ ಜೊತೆಗೆ, ಮಿರ್ಜಾಪುರ ಕೋರ್ಟ್‌ನಲ್ಲಿ ಆಕೆಯ ವಿರುದ್ಧ ಸಲ್ಲಿಸಲಾಗಿರುವ ದೂರಿನ ವಿಚಾರಣೆಯನ್ನೂ ಕೈಬಿಡುವಂತೆ ಆದೇಶಿಸುತ್ತಿದ್ದೇವೆ ಎಂದೂ ನ್ಯಾ. ಸಂಜಯ್‌ ಸಿಂಗ್‌ ಹೇಳಿದ್ದಾರೆ.