ಜೆಡಿಎಸ್ ಬಿಟ್ಟು ಬರಲ್ವಾಂತೆ ಮೊಹಿದ್ದೀನ್ ಬಾವಾ.? ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸುವ ಮೆಗಾ ಪ್ಲ್ಯಾನ್ ರೆಡಿ.. ಏನಿದು?

ಕರಾವಳಿ

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ನಡೆಸಿದಾಗ ಇತ್ತೀಚೆಗೆ ಜೆಡಿಎಸ್ ಸೇರಿದ ಮೊಹಿದ್ದೀನ್ ಬಾವಾ ರ ಕಥೆಯೇನು? ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಮೊಹಿದ್ದೀನ್ ಬಾವಾ ಸಹೋದರ ಬಿ.ಎಂ ಫಾರೂಕ್ ಜೆಡಿಎಸ್ ನಲ್ಲೇ ಉಳಿಯಲಿದ್ದಾರೆ. ಅವರಿಗೆ ಮುಂದಿನ ರಾಜ್ಯಸಭಾ ಸೀಟು ಫಿಕ್ಸ್ ಅನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಮೊಹಿದ್ದೀನ್ ಬಾವಾ ಕಾಂಗ್ರೆಸ್ ಸೇರಲಿದ್ದಾರೆ ಅನ್ನುವ ಗುಲ್ಲು ಹರಡಿತ್ತು. ಮೊಹಿದ್ದೀನ್ ಬಾವಾ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಕಡೆಯಿಂದ ಯಾವುದೇ ಗ್ರೀನ್ ಸಿಗ್ನಲ್ ದೊರೆತಿಲ್ಲ ಎಂಬ ಮಾತು ಹರಿದಾಡಿತ್ತು. ಆದರೆ ಇದೀಗ ಬೇರೊಂದು ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ಮೊಹಿದ್ದೀನ್ ಬಾವಾ ಕಾಂಗ್ರೆಸ್ ಸೇರುವುದು ಡೌಟಂತೆ. ಅವರು ಜೆಡಿಎಸ್ ನಲ್ಲೇ ಉಳಿಯಲಿದ್ದಾರಂತೆ. ಜೆಡಿಎಸ್ ವರಿಷ್ಠ ನಾಯಕ ಕುಮಾರಸ್ವಾಮಿ ಬಾವಾ ರಿಗೆ ಅಭಯ ನೀಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಉಳ್ಳಾಲದಲ್ಲಿ ಸ್ಪರ್ಧಿಸುತ್ತಾರಂತೆ. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ ಮೂಲೆಗುಂಪಾಗಿರುವ ಬಾವಾ ಯುಟಿ ಖಾದರ್ ವಿರುದ್ಧ ಸ್ಪರ್ಧೆಗಿಳಿಯಲಿದ್ದಾರೆ ಎಂಬ ಮಾತು ಇದೀಗ ಕೇಳಿ ಬರುತ್ತಿದೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಾವಾ ಅವರಿಗೆ ಟಿಕೆಟ್ ತಪ್ಪಲು ಯುಟಿ ಖಾದರ್ ಅವರ ಪಾತ್ರವಿತ್ತು. ಕಳೆದ ಚುನಾವಣೆಯಲ್ಲಿ ಖಾದರ್ ವಿರುದ್ಧ ಮುಮ್ತಾಜ್ ಅಲಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ಕೂಡ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ಖಾದರ್ ವಿರುದ್ಧ ಬಾವಾ ಕುಟುಂಬ ಸ್ಪರ್ಧಿಸಲು ಹಿಂದೇಟು ಹಾಕಿತ್ತು. ಆದರೆ ಇದೀಗ ತನ್ನ ರಾಜಕೀಯ ನೆಲೆ ಕಳೆದುಕೊಳ್ಳಲು ಖಾದರ್ ಕೂಡ ಕಾರಣ ಎಂದು ತಿಳಿದಿರುವ ಬಾವಾ ಬ್ರದರ್ಸ್ ಗಳು ಮುಂದಿನ ಬಾರಿ ಖಾದರ್ ರನ್ನು ಶತಾಯಗತಾಯ ಸೋಲಿಸಲು ಪ್ರಯತ್ನಿಸುವುದಂತೂ ನಿಜ. ನೇರವಾಗಿ ಖಾದರ್ ವಿರುದ್ಧ ಬಾವಾ ಸ್ಪರ್ಧೆಗಿಳಿಯುವ ಸಾಧ್ಯತೆ ದಟ್ಟವಾಗಿದೆ.

ಇತ್ತ ಬಿಜೆಪಿ ಕೂಡ ಖಾದರ್ ಸೋಲಿಸಲು ತಮ್ಮ ಅಭ್ಯರ್ಥಿಯಿಂದ ಸಾಧ್ಯವಿಲ್ಲ ಎಂದು ಮನಗಂಡಿದ್ದು, ಉಳ್ಳಾಲ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಬಗ್ಗೆ ರಾಜ್ಯ ನಾಯಕರು ಸಹಮತ ಹೊಂದಿರುವುದಾಗಿ ತಿಳಿದುಬಂದಿದ್ದು, ಒಂದೇ ಕಲ್ಲಿನಿಂದ ಎರಡು ಹಕ್ಕಿ ಉರುಳಿಸುವ ಮೆಗಾ ಪ್ಲ್ಯಾನ್ ಸಜ್ಜುಗೊಳಿಸಿದೆ ಎಂದು ತಿಳಿದು ಬಂದಿದೆ.