BMTCಯಲ್ಲೂ ಬಿಟ್‌ ಕಾಯಿನ್‌ ದಂಧೆ: ನಾಲ್ವರ ಅಮಾನತು, ಸಿಬ್ಬಂದಿಗಳ ಎದೆ ಬಡಿತ ಜೋರು.!

ರಾಜ್ಯ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೂ ಬಿಟ್‌ ಕಾಯಿನ್‌ ದಂಧೆ ಕಾಲಿಟ್ಟಿದ್ದು, ಈ ದಂಧೆಯಲ್ಲಿ ತೊಡಗಿರುವ ಆರೋಪದಡಿ ಬನಶಂಕರಿಯಲ್ಲಿರುವ ಬಿಎಂಟಿಸಿ 20ನೇ ಘಟಕದ 10 ಸಿಬ್ಬಂದಿಗಳ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆಯೇ ನಾಲ್ವರನ್ನು ಸ್ಥಳದಲ್ಲೇ ಅಮಾನತು ಮಾಡಲಾಗಿದೆ. ಬಿಎಂಟಿಸಿ 20ನೇ ಘಟಕದ ಸಿಬ್ಬಂದಿಗಳಾದ ಮಹೇಶ್‌, ರಾಕೇಶ್‌, ಮದನ್‌, ಪವನ್‌, ನವೀನ್‌, ಸಂತೋಷ್‌ ಕುಮಾರ್‌, ವೀರೇಶ್‌ ಸೇರಿದಂತೆ 10 ಮಂದಿಯನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಅವರಲ್ಲಿ ನಾಲ್ಕು ಮಂದಿಯನ್ನು ಅಮಾನತು ಮಾಡಲಾಗಿದೆ. ಇನ್ನೂ ಏಳು ಮಂದಿಯ ಅಮಾನತಾಗುವ ಸಾಧ್ಯತೆ ಇದೆ.

ಈ ಬಿಟ್‌ ಕಾಯಿನ್‌ ದಂಧೆಯಲ್ಲಿ ಜಯನಗರದ ಬಿಎಂಟಿಸಿ 4ನೇ ಘಟಕದ ಸಿಬ್ಬಂದಿಯೂ ತೊಡಗಿದ್ದು, ಅವರ ವಿಚಾರಣೆಯನ್ನು ನಡೆಸಲಾಗುವುದು ಎಂದು ತಿಳಿದು ಬಂದಿದೆ. ಹೀಗಾಗಿ ಈ ದಂಧೆಯಲ್ಲಿ ತೊಡಗಿರುವ 4ನೇ ಘಟಕದ ಸಿಬ್ಬಂದಿಗಳಿಗೂ ಎದೆ ಬಡಿತ ಜೋರಾಗಿದೆ. ಬಿಎಂಟಿಸಿ ದಕ್ಷಿಣ ವಿಭಾಗದ 20ನೇ ಘಟಕದ ಕೆಲವು ಸಿಬ್ಬಂದಿಗಳು ಬಿಟ್‌ ಕಾಯಿನ್‌ ದಂಧೆಯಲ್ಲಿ ಶಾಮೀಲಾಗಿದ್ದು, ಅಕೌಂಟ್‌ನಲ್ಲಿ ಲಕ್ಷಾಂತರ ಹಣವನ್ನು ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಬೆಳಗ್ಗೆ ದಾಳಿ ನಡೆಸಿದ ಸಂಸ್ಥೆಯ ಸಹಾಯಕ ಭದ್ರತಾಧಿಕಾರಿ ಅವರು ಕೃತ್ಯದಲ್ಲಿ ತೊಡಗಿದವರ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಘಟಕದಲ್ಲಿರುವ ಕೆಲ ಸಿಬ್ಬಂದಿ ಕೂಡ ಬಿಟ್‌ ಕಾಯಿನ್‌ ದಂಧೆಗೆ ತೊಡಗಿರುವ ಜತೆಗೆ ತಮ್ಮ ಸಹೋದ್ಯೋಗಿಗಳಿಗೂ ಈ ದಂಧೆಯಲ್ಲಿ ತೊಡಗುವಂತೆ ಪ್ರಚೋದನೆ ನೀಡುತ್ತಿದ್ದರು ಎಂಬ ಕೃತ್ಯ ಬಯಲಾಗಿದೆ.ಇನ್ನು ಘಟಕದಲ್ಲಿರುವ ಜ್ಯೂನಿಯರ್‌ ಅಸಿಸ್ಟೆಂಟ್‌ಗಳೇ ಹೆಚ್ಚಾಗಿ ಇದರಲ್ಲಿ ತೊಡಗಿದ್ದಾರೆಂಬ ಮಾಹಿತಿ ವ್ಯವಸ್ಥಾಪಕ ನಿರ್ದೇಶಕರಿಗೆ ಅವರದೇ ಮೂಲಗಳಿಂದ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ಕಲೆ ಹಾಕಿ ಕ್ರಮ ಕೈಗೊಳ್ಳುವಂತೆ ಸಹಾಯಕ ಭದ್ರತಾಧಿಕಾರಿಗೆ ಸೂಚಿಸಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾಧಿಕಾರಿ ನೇರವಾಗಿ 20ನೇ ಘಟಕಕ್ಕೆ ಬಂದು ಜ್ಯೂನಿಯರ್‌ ಅಸಿಸ್ಟೆಂಟ್‌ಗಳು ಸೇರಿಂದತೆ 10 ಮಂದಿಯನ್ನು ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸಿ ಅವರ ಅಕೌಂಟ್‌ನಲ್ಲಿನ ವ್ಯವಹಾರ ಪರಿಶೀಲಿಸಿದಾಗ ಬಿಟ್‌ ಕಾಯಿನ್‌ ಹಗರಣದಲ್ಲಿ ಶಾಮೀಲಾಗಿರುವುದು ಬಟಾ ಬಯಲಾಗಿದೆ. ಘಟಕದ ಚಾಲಕರು ಮತ್ತು ನಿರ್ವಾಹಕರಿಂದ ರಜೆ ಮಂಜೂರು ಮಾಡುವುದು ಸೇರಿದಂತೆ ಇತರೆ ಕೆಲಸಕ್ಕಾಗಿ ಲಂಚವಾಗಿ ಪಡೆದ ಹಣವನ್ನು ಇದಕ್ಕೆ ಹೂಡಿಕೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಅಷ್ಟೇ ಅಲ್ಲ, ಘಟಕದ ಸಿಬ್ಬಂದಿಯನ್ನು ಈ ದಂಧೆಗೆ ತೊಡಗಿಸಿ ಅವರಿಂದಲೂ ಹಣ ಇನ್ವೆಸ್ಟ್‌ ಮಾಡಿಸಿ ಅದರಿಂದಲೂ ಲಾಭ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಚಾರಣೆಗೊಳಪಟ್ಟ ಒಬ್ಬೊಬ್ಬರ ಅಕೌಂಟ್‌ನಲ್ಲೂ ಲಕ್ಷಾಂತರ ಹಣ ಡಿಪಾಸಿಟ್‌ ಆಗಿರುವುದನ್ನು ಭದ್ರತಾಧಿಕಾರುಟಿಗಳು ಪತ್ತೆ ಹಚ್ಚಿದ್ದಾರೆ.

ಬಿಎಂಟಿಸಿ ಘಟಕ -33 ರಲ್ಲಿರುವ ಧನಂಜಯ್‌ ಎಂಬಾತನೆ ಈ ಬಿಟ್‌ ಕಾಯಿನ್‌ ದಂಧೆಯ ಕಿಂಗ್‌ ಪಿನ್‌ ಎನ್ನಲಾಗಿದೆ. ಆತನ ಅಕೌಂಟ್‌ನಲ್ಲಿ ಸುಮಾರು 30 ಲಕ್ಷ ರೂ. ಪತ್ತೆಯಾಗಿದೆ ಎನ್ನಲಾಗುತ್ತಿದೆ.ಇನ್ನು ವೇತನ ಪಡೆಯುವ ಅಕೌಂಟ್‌ನಲ್ಲಿ ವೇತನ ಹಣ ಬಿಟ್ಟು ಬೇರೆ ಬೇರೆ ಹಣದ ವ್ಯವಹಾರ ಮಾಡಬೇಕಾದರೆ ಘಟಕ ವ್ಯವಸ್ಥಾಪಕರ ಅನುಮತಿ ಬೇಕು ಎಂಬ ಬಗ್ಗೆ ಸಂಸ್ಥೆಯ ಸುತ್ತೋಲೆ 1484ರ ನಿಯಮ ಹೇಳುತ್ತದೆ. ಆದರೆ ಈ ನಿಯಮವನ್ನೇ ಉಲ್ಲಂಘನೆ ಮಾಡಿ ಬೇರೆ ಹಣದ ವ್ಯವಹಾರ ನಡೆಸಿದ್ದಾರೆ. ಹೀಗಾಗಿ ಇದರ ಆಧಾರದ ಮೇಲೆಯೇ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.