ಹೆಣ್ಣು ಮಕ್ಕಳು, ವೃದ್ಧರು ಕಿಡ್ನಾಪ್ ಆಗುವುದನ್ನು ತಪ್ಪಿಸಲು ನೀವು ಭಿಕ್ಷೆ ನೀಡಬೇಡಿ.. ಭಿಕ್ಷಾಟನೆ ದಂಧೆಯ ಕರಾಳತೆಯ ನೈಜ ದರ್ಶನ..!

ರಾಜ್ಯ

ಭಿಕ್ಷಾಟನೆ ಅನ್ನುವುದು ಕಾನೂನು ಬಾಹಿರ ಚಟುವಟಿಕೆ ಆಗಿದ್ದು, ‘ನಾವು ಅಯ್ಯೋ ಪಾಪ’ ಎಂದು ಭಿಕ್ಷುಕರಿಗೆ ದುಡ್ಡು ನೀಡಿದರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಾವು ಪ್ರೋತ್ಸಾಹಿಸಿದಂತಾಗುತ್ತದೆ. ನೀವು ನಗರದ ಯಾವುದೇ ಸಿಗ್ನಲ್ ಬಳಿ ನೋಡಿದರೂ ಒಂದು ಸಣ್ಣ ಹಸುಗೂಸು ಹಿಡಿದು ಭಿಕ್ಷೆ ಬೇಡುವ ಮಹಿಳೆಯರನ್ನು ನೋಡುತ್ತೇವೆ. ಆ ಸಣ್ಣ ಮಗುವನ್ನು ನೋಡಿ ಕಿಸೆಯಿಂದ ಹತ್ತೋ ಇಪ್ಪತ್ತೋ ರೂಪಾಯಿ ಅವರಿಗೆ ನೀಡುತ್ತೇವೆ. ದಿನವಿಡೀ ಸಾವಿರಾರು ರೂಪಾಯಿ ಹೀಗೆ ಸಂಪಾದಿಸುತ್ತಾರೆ. ಇದೊಂದು ದಂಧೆಯಾಗಿ ಬಿಟ್ಟಿದೆ. ಅವರ ಕೈಯಲ್ಲಿರುವ ಮಗು ಅವರ ಸ್ವಂತ ಮಕ್ಕಳೋ ಅಂದುಕೊಂಡರೆ ಅದೂ ಅಲ್ಲ ಅನ್ನುವ ತನಿಖೆಗೆ ಇಳಿದರೆ ತಿಳಿದುಬರುತ್ತದೆ. ಐದಾರು ತಿಂಗಳ ಈ ಹಸುಗೂಸು ಅವರ ಕೈಗೆ ಹೇಗೆ ಸಿಕ್ಕವು? ನಿಮಗೆ ಗೊತ್ತಿದೆಯೋ ಇಲ್ಲವೋ ವರ್ಷಂಪ್ರತಿ ಸಾವಿರಾರು ಗಂಡು, ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಅದರಲ್ಲಿ ಬಹುತೇಕ ಮಂದಿ ಮನೆಯವರ ಸಂಪರ್ಕಕ್ಕೂ ಸಿಗದೆ ಕಣ್ಮರೆಯಾಗುತ್ತಾರೆ. ಈ ಮಕ್ಕಳು ಎಲ್ಲಿಗೆ ಹೋದರೂ ಎಂದು ತನಿಖೆ ನಡೆಸಿದರೆ ಸ್ಪೋಟಕ, ಬೆಚ್ಚಿಬೀಳಿಸುವ ಅಂಶಗಳು ಹೊರಬೀಳುತ್ತದೆ. ಹೀಗೆ ಕಣ್ಮರೆಯಾದ ಮಕ್ಕಳನ್ನು ಭಿಕ್ಷಾಟನೆ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ. ಮಾನವ ಕಳ್ಳ ಸಾಗಾಣಿಕೆ ಪ್ರಕರಣಕ್ಕೂ, ಈ ಭಿಕ್ಷಾಟನೆ ದಂಧೆಗೂ ನೇರ ಕನೆಕ್ಷನ್ ಇರುವುದಂತೂ ಸತ್ಯ.

ಇತ್ತೀಚೆಗೆ ಬೆಂಗಳೂರಿನ ವಿನೋದ್ ಕರ್ತವ್ಯ ಅನ್ನುವ ಯುವಕನೊಬ್ಬ ಭಿಕ್ಷಾಟನೆ ಕರಾಳ ದಂಧೆಯ ಬಗೆಗಿನ ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದ್ದಾನೆ. ಬೆಂಗಳೂರಿನ ಎಂ.ಜಿ ರೋಡ್ ಬಳಿಯ ಮಾಲ್ ವೊಂದರ ಪಕ್ಕದಲ್ಲಿ ಸಿಗ್ನಲ್ ಬಿದ್ದ ತಕ್ಷಣ ಮಹಿಳೆಯೊಬ್ಬಳು ಸಣ್ಣ ಹಸುಗೂಸನ್ನು ಹಿಡಿದು ಭಿಕ್ಷಾಟನೆಗೆ ಮುಂದಾಗುತ್ತಾಳೆ. ಅವಳ ಕೈಯಲ್ಲಿದ್ದ ಹಸುಗೂಸು ಕಿರುಚಾಡುತ್ತದೆ ಹಾಗೂ ಬೊಬ್ಬೆ ಹಾಕುತ್ತದೆ. ಕೂಡಲೇ ಮಹಿಳೆ ಅಲ್ಲಿರುವ ಕರ್ನಲ್ ಪ್ರತಿಮೆಯೊಂದರ ಬಳಿಗೆ ತೆರಳಿ, ತನ್ನ ಕೈಯಲ್ಲಿದ್ದ ಟವಲನ್ನು ಮಗುವಿನ ಮುಖಕ್ಕೆ ಹಿಡಿಯುತ್ತಾಳೆ. ತಕ್ಷಣ ಮಗು ಬೊಬ್ಬೆ ಹಾಕುವುದನ್ನು ನಿಲ್ಲಿಸಿ, ಮೂರ್ಚೆ ಹೋಗುತ್ತದೆ. ಆ ನಂತರ ಸಿಗ್ನಲ್ ಬಳಿ ಬಂದು ಮಗುವಿನೊಂದಿಗೆ ಭಿಕ್ಷೆ ಬೇಡುತ್ತಾಳೆ. ಇದನ್ನು ತದೇಕ ಚಿತ್ತದಿಂದ ವೀಕ್ಷಿಸಿದ ವಿನೋದ್ ಕರ್ತವ್ಯ ಅನ್ನುವಾತ ಬೊಬ್ಬೆ ಹೊಡೆಯುತ್ತಿದ್ದ ಮಗು ಈಗ ಸುಮ್ಮನೆ ಮಲಗಿಕೊಂಡಿದೆಯಲ್ವಾ? ನೀವು ಮಗುವಿಗೆ ಏನು ಮಾಡಿದ್ದು? ಎಂದು ಕೇಳಿದಾಗ, ಆ ಮಹಿಳೆ ಅದೆಲ್ಲ ನಿಮಗ್ಯಾಕೆ? ನೀವು ದುಡ್ಡು ಕೊಡುವುದಾದರೆ ಕೊಡಿ ಎಂದು ಹಾರಿಕೆಯ ಉತ್ತರ ಹೇಳಿ ಅಲ್ಲಿಂದ ಹೊರಟು ಹೋದಳು.

ಈ ಬಗ್ಗೆ ಸರ್ವೇಗೆ ಇಳಿದ ವಿನೋದ್ ಮತ್ತವರ ತಂಡಕ್ಕೆ ಭಿಕ್ಷಾಟನೆ ದಂಧೆಯ ಇಂಚಿಂಚೂ ಮಾಹಿತಿ ದೊರಕುತ್ತದೆ. ಅವರ ತಂಡ ಮಾಡಿದ ಸರ್ವೇಯ ಪ್ರಕಾರ, ಭಿಕ್ಷಾಟನೆಗೆ ಇಳಿದ ಮಹಿಳೆಗೂ, ಅವರ ಕೈಯಲ್ಲಿರುವ ಮಗುವಿನ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಆ ಮಗು ಯಾವಾಗಲೂ ಮಲಗಿದ ಸ್ಥಿತಿಯಲ್ಲೇ ಇರುತ್ತದೆ. ತುಂಬಾ ಸಣಕಲು ಆಗಿರುತ್ತದೆ. ಇನ್ನು ಹತ್ತು ವರ್ಷದೊಳಗಿನ ಮಕ್ಕಳು ಕೈಯಲ್ಲಿ ಪೆನ್ನು, ಹೂವು ಹಿಡಿದುಕೊಂಡು ಮಾರುತ್ತಾ ಭಿಕ್ಷಾಟನೆ ನಡೆಸುತ್ತಾರೆ. ವೃದ್ಧರು ಇಯರ್ ಬಡ್ಸ್ ಹಿಡಿದುಕೊಂಡು ಭಿಕ್ಷಾಟನೆ ನಡೆಸುತ್ತಾರೆ. ಬೆಂಗಳೂರಿನ ಎಷ್ಟು ಸಿಗ್ನಲ್ ಗಳಿದೆಯೋ ಅಲ್ಲೆಲ್ಲ ಇಂತಹ ಭಿಕ್ಷಾಟನೆ ಕಾಮನ್ ಆಗಿರುತ್ತದೆ. ಅದರಲ್ಲಿ ಬಹುತೇಕರು ವಲಸೆ ಬಂದವರು ಆಗಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಎಡಿಜಿಪಿ, ಕಮೀಷನರ್, ಮುಖ್ಯಮಂತ್ರಿ ಕಾರ್ಯದರ್ಶಿಗಳ ಗಮನಕ್ಕೆ ತಂದಾಗ ಅವರೆಲ್ಲ ಹೇಳಿದ್ದು ಇವರು ಫೇಕ್ ಭಿಕ್ಷುಕರು. ಇಲಾಖೆಗಳಿಂದ ಸಂಪೂರ್ಣ ಬೆಂಬಲ ಸಿಗುತ್ತಿದ್ದಂತೆ ಭಿಕ್ಷಾಟನೆ ಮಾಫಿಯಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ವಿನೋದ್ ರವರ ತಂಡ ಮುಂದಾಗುತ್ತದೆ. ಅಗಸ್ಟ್ 15 ಕ್ಕೆ ಆರಂಭವಾದ ಇವರ ಜಾಗೃತಿ ಅಭಿಯಾನ ಮುಂದುವರಿಯುತ್ತಲೇ ಇದೆ. ಅಗಸ್ಟ್ 15 ನ್ನು ಆಯ್ಕೆ ಮಾಡಿದ್ದಕ್ಕೆ ವಿನೋದ್ ರವರ ತಂಡ ಹೇಳುವುದಿಷ್ಟು. ಭಿಕ್ಷಾಟನೆ ಅನ್ನುವುದು ಸಾಮಾಜಿಕ ಪಿಡುಗಾಗಿದ್ದು, ಪ್ರತಿ ವರ್ಷ 60,000 ಗಂಡು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. 75,000 ಹೆಣ್ಣು ಮಕ್ಕಳು ಕಣ್ಮರೆಯಾಗುತ್ತಿದ್ದಾರೆ. ಲಕ್ಷ ಗಟ್ಟಲೆ ಜನರ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಇದು ಇಲಾಖಾವಾರು ಅಂಕಿಅಂಶ. ಈ ಮಾನವ ಕಳ್ಳ ಸಾಗಾಣಿಕೆ ಪ್ರಕರಣಕ್ಕೂ, ಭಿಕ್ಷಾಟನೆಗೂ ನೇರ ಸಂಬಂಧವಿದೆ. ಇಂತಹ ಸಾಮಾಜಿಕ ಪಿಡುಗಿನ ವಿರುದ್ಧ ದೇಶ ಸ್ವಾತಂತ್ರ್ಯ ಗೊಳ್ಳುವ ಜರೂರತ್ತಿದೆ. ವಿದೇಶಿಯರು ಭಾರತಕ್ಕೆ ಪ್ರವಾಸಕ್ಕೆ ಬಂದಾಗ ಇಂತಹ ಭಿಕ್ಷುಕರ ಪೋಟೋ, ವಿಡಿಯೋ ಮಾಡಿಕೊಂಡು ಗೂಗಲ್ ನಲ್ಲಿ ಅಪ್ಲೋಡ್ ಮಾಡಿ ‘ಇದು ಭಾರತ’ ಅನ್ನುವ ಟಾಗ್ ಲೈನ್ ಹಾಕಿ ಪ್ರಚುರಪಡಿಸುತ್ತಾರೆ. ಫೇಕ್ ಭಿಕ್ಷುಕರು ಎಂದು ಗೊತ್ತಿದ್ದೂ ಕ್ರಮ ಕೈಗೊಳ್ಳಬೇಕಿದ್ದ ಇಲಾಖೆ ಕೈ ಕಟ್ಟಿ ಕುಳಿತಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ.

ಭಿಕ್ಷಾಟನೆ ಅನ್ನುವುದೇ ದೊಡ್ಡ ಮಾಫಿಯಾ. ಪ್ರತಿ ಒಂದೊಂದು ಸಿಗ್ನಲ್ ನಲ್ಲಿ ಕನಿಷ್ಠ 50 ಮಂದಿ ಯನ್ನು ಇವರು ಟಚ್ ಮಾಡುತ್ತಾರೆ. ಕನಿಷ್ಠ 5 ಮಂದಿಯಾದರೂ ದುಡ್ಡು ಕೊಡುತ್ತಾರೆ. ಪ್ರತಿ ದಿನ ನೂರು ಬಾರಿ ಸಿಗ್ನಲ್ ಬಂದಾಗ ಇವರು ಸಂಪಾದಿಸುವ ದುಡ್ಡೆಷ್ಟು ನೀವೇ ಊಹಿಸಿ. ಅದರಲ್ಲೂ ಭಾರತದ ಭಿಕ್ಷುಕರು ವಿಶ್ವದಲ್ಲೇ ಶ್ರೀಮಂತರು ಅನ್ನುವ ಸರ್ವೇ ರಿಪೋರ್ಟ್ ಇದೆ. ಭಿಕ್ಷಾಟನೆ ದಂಧೆಗಿಳಿದು ಫ್ಲ್ಯಾಟ್ ಖರೀದಿಸಿದವರಿದ್ದಾರೆ. ಫೈನಾನ್ಸ್ ಗೆ ದುಡ್ಡು ಕೊಡುವವರಿದ್ದಾರೆ. ದುಡ್ಡಿನ ಲಾಜಿಕ್ ಮೇಲೆ ಭಿಕ್ಷಾಟನೆ ನಿಂತಿದೆ.

ನಮ್ಮ ದೇಶದಲ್ಲಿ ಭಿಕ್ಷಾಟನೆ ಕಾನೂನು ಬಾಹಿರ ಎಂದಿದೆ. ನಾವು ಪುಣ್ಯದ ಹೆಸರಿನಲ್ಲಿ ಭಿಕ್ಷುಕರಿಗೆ ದುಡ್ಡು ನೀಡಿ ಮಾನವ ಕಳ್ಳ ಸಾಗಾಣಿಕೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಕರುಣೆ ತೋರದೇ ಭಿಕ್ಷುಕರಿಗೆ ಒಂದು ನಯಾ ಪೈಸೆ ನೀಡದೆ ಹೋದರೆ ಈ ದೇಶದಲ್ಲಿ ಭಿಕ್ಷಾಟನೆ ನಿರ್ಮೂಲನೆ ಆಗುವುದಂತೂ ಖಂಡಿತ. ಅದು ಇರುವುದು ಸಾರ್ವಜನಿಕರ ಕೈಯಲ್ಲಿ. ಶೇಕಡಾ 90 ರಷ್ಟು ಫೇಕ್ ಭಿಕ್ಷುಕರು ಇರುವುದು. ಕೇವಲ ಶೇಕಡಾ 10 ರಷ್ಟು ಭಿಕ್ಷೆ ಬೇಡಿಯೇ ಜೀವನ ನಡೆಸುವವರು ಇರಬಹುದು. ನಾವು ದುಡ್ಡು ನೀಡದೆ ಹೋದರೆ ಫೇಕ್ ಭಿಕ್ಷುಕರ ಸಂಖ್ಯೆ ಇಳಿಮುಖವಾಗುತ್ತದೆ. ಹೆಣ್ಣು ಮಕ್ಕಳು, ವೃದ್ಧರ ಕಿಡ್ನಾಪ್ ಪ್ರಕರಣ ತಹಬಂದಿಗೆ ಬರಬಹುದು.

ಬೆಂಗಳೂರು ಹುಡುಗರು ತಂಡ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ಹೇಳಬೇಕು.