ಇದು ವಿಧಿಯಾಟವೋ ದೇವನೇ ಬಲ್ಲ. ಹಮಾಲಿಗಳು, ಕೂಲಿ ಕಾರ್ಮಿಕರು ತಾವು ದುಡಿದ ಜುಜುಬಿ ಸಂಪಾದನೆಯಿಂದ ಕುಟುಂಬದ ನೊಗವನ್ನು ನೆಮ್ಮದಿಯಿಂದ ಸಾಗಿಸುತ್ತಾರೆ. ಆದರೆ ಇಲ್ಲಿನ ಕೆಲವು ಮಿಲಿಯನೇರ್ ಗಳು, ಕೋಟ್ಯಾಧೀಶ್ವರು ಕೂತು ತಿನ್ನುವಷ್ಟು ದುಡ್ಡಿದ್ದರೂ ಆತ್ಮಹತ್ಯೆಗೆ ಶರಣಾಗುತ್ತಿರುವುದು ಸೋಜಿಗ. ಆದರೆ ಕುಟುಂಬ ವರ್ಗ ಮೌನಕ್ಕೆ ಶರಣಾಗಿರುವುದರಿಂದ ಅಗರ್ಭ ಶ್ರೀಮಂತರ ಸಾವಿನ ಗುಟ್ಟು ಹೊರಗೆ ಬರದೆ ಮುಚ್ಚಿ ಹೋಗುತ್ತಿದೆ. ಒಂದಂತೂ ದಿಟ ಮನಃಶಾಂತಿ ದೊರೆಯಬೇಕಾದರೆ ದುಡ್ಡೇ ಒಂದು ಮುಖ್ಯವಲ್ಲ. ಇವರ ಸಾವು ಹಲವಾರು ಜನರಿಗೆ ಸಂದೇಶವೂ ಕೂಡ ಹೌದು.
ಕೆಲವೇ ದಿನಗಳ ಹಿಂದೆಯಷ್ಟೇ ಅಕ್ಟೋಬರ್ 1 ರಂದು ಮಹೇಶ್ ಮೋಟಾರ್ಸ್ ಮಾಲಕ ಮಹೇಶ್ ಶೇಖ್ ತನ್ನ ಕದ್ರಿ ಕಂಬಳದ ಅಪಾರ್ಟ್ಮೆಂಟ್ ನಲ್ಲಿ ನಿಗೂಢ ವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೋಬ್ಬರಿ 75 ಕ್ಕೂ ಅಧಿಕ ಬಸ್ಸುಗಳನ್ನು ಹೊಂದಿದ್ದರು. ವ್ಯವಹಾರದಲ್ಲಿ ನಷ್ಟವೇನೂ ಹೊಂದಿರಲಿಲ್ಲ. ಸಾಯುವ ಎರಡು ವಾರಗಳ ಮುಂಚೆ ನಾಲ್ಕು ಹೈ ಫೈ ಬಸ್ಸುಗಳನ್ನು ಖರೀದಿಸಿದ್ದರು. ಕೋಟಿಗಟ್ಟಲೆ ದುಡ್ಡಿನ ಒಡೆಯರು ಹೌದು. ಇಂತಹ ಮಹೇಶ್ ಶೇಖ್ ಏಕಾಏಕಿ ಆತ್ಮಹತ್ಯೆ ಗೈಯುತ್ತಾರೆ ಅನ್ನುವುದು ನಂಬಲಸಾಧ್ಯ. ಏಕಾಏಕಿ ಅಗರ್ಭ ಶ್ರೀಮಂತರು ನೇಣಿಗೆ ಕೊರಳೊಡ್ಡುತ್ತಾರೆ ಅನ್ನುವುದಾದರೆ ಏನಾದರೂ ಸಂಥಿಂಗ್ ಇರಲೇಬೇಕು. ಕುಟುಂಬ ವರ್ಗ ಮೌನಕ್ಕೆ ಶರಣಾಗುವುದರಿಂದ ಇಂತಹವರ ಸುಸೈಡ್ ಮಿಸ್ಟರಿ ಹೊರಬರುವುದೇ ಇಲ್ಲ. ಬಸ್ಸಿನ ಬಗ್ಗೆ ವಿಪರೀತ ಕ್ರೇಜ್ ಹೊಂದಿದ್ದ ಮಹೇಶ್ ಶೇಖ್ ಅಂತಿಮ ಯಾತ್ರೆಯಲ್ಲಿ ಅವರ ಒಡೆತನದ ಬಸ್ಸುಗಳು ಸಾಲಾಗಿ ನಿಂತಿರುವ ದೃಶ್ಯ ಎಲ್ಲರ ಮನಕಲಕಿತ್ತು. ಹಿತೈಷಿಗಳು ನಾಲ್ಕು ಪ್ಲೆಕ್ಸ್ ಹಾಕಿ ಶ್ರದ್ಧಾಂಜಲಿ ಕೋರಿ ಸುಮ್ಮನಾಗುತ್ತಾರೆ. ಮತ್ತೆ ಇಂತಹವರ ನೆನಪಾಗುವುದು ಇನ್ನೊಬ್ಬ ಅಗರ್ಭ ಶ್ರೀಮಂತ ಸುಸೈಡ್ ಮಾಡಿಕೊಂಡಾಗಲೇ.
ಸೆಪ್ಟೆಂಬರ್ 17 ರಂದು ಜಿಎಸ್ ಬಿ ಸಮುದಾಯದ ಪ್ರಭಾವಿ ಉದ್ಯಮಿ, ಮಿಲಿಯನೇರ್ ಮುಂಡ್ಕೂರು ರಾಮದಾಸ ಕಾಮತ್ ತನ್ನ 75 ನೇ ವಯಸ್ಸಿನಲ್ಲಿ ಮಂಗಳೂರಿನ ರಥಬೀದಿಯ ಅಪಾರ್ಟ್ಮೆಂಟ್ ನಲ್ಲಿ ನೇಣಿಗೆ ಶರಣಾಗಿದ್ದರು. ಮುಂಡ್ಕೂರು ರಾಮದಾಸ ಕಾಮತ್ ರಥಬೀದಿಯ ವೆಂಕಟರಮಣ ದೇವರಿಗೆ ಇತ್ತೀಚೆಗೆ ಒಂದು ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ದಾನ ಮಾಡಿದ್ದರು. ನೀವೇ ಊಹಿಸಿ ಅವರೆಷ್ಟು ದೊಡ್ಡ ಶ್ರೀಮಂತರೆಂದು. ಸಾಯುವ ಮುನ್ನ ಅವರ ಬ್ಯಾಂಕ್ ಖಾತೆಯಲ್ಲಿ 20 ಕೋಟಿ ನೆಟ್ ಬ್ಯಾಲೆನ್ಸ್ ಇತ್ತಂತೆ. ದುಬೈ, ಮಂಗಳೂರಿನಲ್ಲೂ ಇವರ ವ್ಯವಹಾರವಿತ್ತು. ಅಪ್ಪಟ ದಾನಿಯಾಗಿದ್ದ ಇವರ ಆತ್ಮಹತ್ಯೆ ಎಲ್ಲರನ್ನೂ ಶಾಕ್ ಗೆ ಒಳಪಡಿಸಿತ್ತು.
ರಾಮದಾಸ್ ಕಾಮತ್ ಸಾವಿನ ಬಗ್ಗೆ ಅವರ ಸಮುದಾಯದಲ್ಲಿ ಅಂತೆ ಕಂತೆಗಳ ಸುದ್ದಿಗಳು ಹರಿದಾಡುತ್ತಿದೆ. ಸಾಯುವ ವಾರ ಮುಂಚೆ ನಗರದ ಪ್ರತಿಷ್ಠಿತ ಹೋಟೆಲ್ ಮಾಲಕರೊಬ್ಬರ ನಡುವೆ ಜಟಾಪಟಿ ನಡೆದಿತ್ತಂತೆ. ಇದಾದ ವಾರಗಳ ನಂತರ ಸಾವಿಗೀಡಾಗಿದ್ದರು. ಅವರು ಸುಸೈಡ್ ಮಾಡಿಕೊಂಡಿರುವ ವಿಚಾರ ಎರಡು ವಾರಗಳ ನಂತರ ಹೊರ ಜಗತ್ತಿಗೆ ತಿಳಿದದ್ದು. ಪತ್ರಿಕೆಯಲ್ಲಿ ಅವರ ಸಂತಾಪದ ಸುದ್ದಿ ನೋಡಿದ ಅವರ ಒಡನಾಡಿ ಎನ್ ಆರ್ ಐ ಉದ್ಯಮಿ ಬಿ ಆರ್ ಶೆಟ್ಟಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಮುಖ್ಯಮಂತ್ರಿ, ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದರು. ಇದೀಗ ಪೊಲೀಸ್ ಇಲಾಖೆ ಸಾವಿನ ರಹಸ್ಯ ತಿಳಿಯಲು ತನಿಖೆಗೆ ಇಳಿದಿದೆ ಅನ್ನುವ ಸುದ್ದಿ ಇದೆ.
ಅಗಸ್ಟ್ 6 ರಂದು ಬಿಲ್ಡರ್ ಆಗಿದ್ದ ಮೋಹನ್ ಅಮೀನ್ ಕಂಕನಾಡಿಯ ತನ್ನ ಅಪಾರ್ಟ್ಮೆಂಟ್ ನ 17 ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದರು. ಕ್ವಾರೆ ಉದ್ಯಮಿಯೂ ಆಗಿದ್ದರು. ಮಲ್ಲಿಕಟ್ಟೆಯಲ್ಲಿರುವ ವಿಜಯ ವಾಹಿನಿ ಏಜೆನ್ಸಿಯ ಮಾಲಕರಾಗಿದ್ದರು. ಮೂಲತಃ ಗುರುಪುರದ ನಿವಾಸಿಯಾಗಿದ್ದ ಮೋಹನ್ ಅಮೀನ್ ಮಂಗಳೂರು, ವಾಮಂಜೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹೊಂದಿದ್ದರು. ಆದರೆ ಅವರು ಏಕೆ ಸುಸೈಡ್ ಮಾಡಿಕೊಂಡಿದ್ದರು ಅನ್ನುವ ಬಗ್ಗೆ ಈವರೆಗೂ ನಿಖರ ಕಾರಣ ತಿಳಿದುಬಂದಿಲ್ಲ. ಕೆಲವು ವರ್ಷಗಳ ಹಿಂದೆ ಮಂಗಳೂರಿನ ಪ್ರಖ್ಯಾತ ಬಿಲ್ಡರ್ ಆಗಿದ್ದ ಮನಮೋಹನ್ ಮಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೆಳಕ್ಕೆ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಅಭಿಮಾನ್ ಕನ್ ಸ್ಟ್ರಕ್ಷನ್ ಮೂಲಕ ಪ್ರಖ್ಯಾತಿ ಪಡೆದಿದ್ದ ಮನಮೋಹನ್ ಮಲ್ಲಿ ಮಡ್ಗಾಂವ್-ಎರ್ನಾಕುಲಂ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾಪು ಇನ್ನಂಜೆ ಯಲ್ಲಿ ರೈಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದರು. ಆದರೆ ಈವರೆಗೂ ಅವರ ಸಾವಿನ ಹಿಂದಿನ ಹಕೀಕತ್ತು ಹೊರಬರಲೇ ಇಲ್ಲ.
ಕಳೆದ ತಿಂಗಳಿನಿಂದೀಚೆ ಮೂವರು ಅಗರ್ಭ ಶ್ರೀಮಂತರು ಸುಸೈಡ್ ಮಾಡಿಕೊಂಡಿದ್ದರು. ಕೂತು ತಿನ್ನುವಷ್ಟು ದುಡ್ಡಿದ್ದರೂ ಸಾವಿಗೆ ಶರಣಾಗಿದ್ದರು. ಇವರ ಸಾವಿನ ರಹಸ್ಯ ಮಾತ್ರ ನಿಗೂಢ. ಯಾರದೋ ಬೆದರಿಕೆ ಇದ್ದರೂ ಹೈಯರ್ ಪೊಲೀಸ್ ಆಫೀಸರ್ಸ್ ಗಳನ್ನು ಮನೆಗೆ ಕರೆಸಿಕೊಂಡು ತಮ್ಮ ಸಮಸ್ಯೆ ಇತ್ಯರ್ಥ ಪಡಿಸುವ ಕೆಫಾಸಿಟಿ ಇದ್ದವರು. ಆದರೂ ಸಾವಿಗೆ ಶರಣಾಗುತ್ತಾರೆ ಎಂದರೆ ಏನಾದರೊಂದು ಕಾಣದ ಕೈ ಅಡಗಿರುವುದಂತೂ ಸತ್ಯ. ಖಾಸಗಿ ಬದುಕಿನಲ್ಲಿ ಏನಾದರೂ ತಪ್ಪು ನಡೆದು ಯಾರಾದರೂ ಬ್ಲಾಕ್ ಮೇಲ್ ಮಾಡುತ್ತಿದ್ದರೋ? ಮರ್ಯಾದೆಗೆ ಅಂಜಿ ಸಾವಿಗೆ ಶರಣಾಗಿದ್ದಾರೋ? ಇಂತಹ ನೂರಾರು ಪ್ರಶ್ನೆ ಪ್ರಶ್ನಾರ್ಥಕವಾಗಿ ಉಳಿದಿದೆ. ರಹಸ್ಯ ಭೇದಿಸುವ ಅಗತ್ಯವಿದೆ. ಇಲ್ಲವಾದರೆ ಇಂತಹ ಅನೇಕ ಅಗರ್ಭ ಶ್ರೀಮಂತರು ಸಾವಿನ ದಾರಿ ಹಿಡಿಯಬಹುದು.