ನಗರಪಾಲಿಕೆ ಜಾಗದಲ್ಲಿ ತುರ್ತು ಟೆಂಡರು ಕರೆದು ನಾಳೆ ಬೆಳಿಗ್ಗೆಯೇ ಬಹಿರಂಗ ಹರಾಜು ಮಾಡಿ; ಮಹಾ ನಗರಪಾಲಿಕೆಗೆ ಜಿಲ್ಲಾಡಳಿತ ಆದೇಶ

ಕರಾವಳಿ

ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂದರ್ಭ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಿರುವ ಕುರಿತು ಶುಕ್ರವಾರ ಅಪರ ಜಿಲ್ಲಾಧಿಕಾರಿ ಜಿ.‌ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ಅವರ‌ ಕಚೇರಿಯಲ್ಲಿ ಸಭೆ‌ ನಡೆಯಿತು.

ಹಿಂದೂ ಸನಾತನ ಜಾತ್ರೆ ವ್ಯಾಪಾರಸ್ಥರ ಅರ್ಜಿ ಆಧಾರದಲ್ಲಿ ಸಂಘರ್ಷ ನಡೆಯಬಹುದು ಎಂದು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಲು ನಿರಾಕರಿಸಲಾಗಿದೆ ಎಂದು ದೇವಸ್ಥಾನದ ಪ್ರತಿ ನಿಧಿಗಳು ಸಭೆ‌ಯಲ್ಲಿ ತಪ್ಪು ಒಪ್ಪಿಕೊಂಡ ಘಟನೆಯೂ ನಡೆಯಿತು.

ನವರಾತ್ರಿ ವೇಳೆ ಮುಸ್ಲಿಂ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಹಾಕಿದರೆ ಸಂಘರ್ಷ ನಡೆಯುವುದಾಗಿ
ಮುಸ್ಲಿಂ ವ್ಯಾಪಾರಿಗಳನ್ನು ಭಯ ಹುಟ್ಟಿಸಿ ಅವರನ್ನು ಹಿಂದೆ ಕಳುಹಿಸಿರುವ ದೇವಸ್ಥಾನ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಎಲ್ಲರಿಗೂ ಭದ್ರತೆ ಕೊಟ್ಟು ಎಲ್ಲರನ್ನು ಒಳಗೊಳ್ಳುವಂತೆ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ದೇವಸ್ಥಾನದ ಜಾಗವನ್ನು ಹೊರತುಪಡಿಸಿದ ನಗರಪಾಲಿಕೆ ಜಾಗದಲ್ಲಿ ತುರ್ತು ಟೆಂಡರು ಕರೆದು ನಾಳೆ ಬೆಳಿಗ್ಗೆಯೇ ಬಹಿರಂಗ ಹರಾಜು ಮಾಡಿ ಎಲ್ಲರಿಗೂ ವ್ಯಾಪಾರ ಮಾಡುವಂತಾಗಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾ ನಗರಪಾಲಿಕೆಗೆ ಜಿಲ್ಲಾಡಳಿತ ಆದೇಶ ನೀಡಿತು.