ಮಂಗಳೂರು ನಗರದಲ್ಲಿ ಮತ್ತೆ ಸ್ಕಿಲ್ ಗೇಮ್ ಅಬ್ಬರಕ್ಕೆ ತಯಾರಿ. ಮನರಂಜನೆ ಆಟದ ಹೆಸರಿನಲ್ಲಿ ಜೂಜು ಕೇಂದ್ರಗಳನ್ನು ತೆರಯಲು ಕಸರತ್ತು.!

ಕರಾವಳಿ

ಖಡಕ್ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪೂರ್ತಿ ಬಾಗಿಲು ಮುಚ್ಚಿದ್ದ ಸ್ಕಿಲ್ ಗೇಮ್ ಮಾಫಿಯಾಗಳು ಇದೀಗ ಮತ್ತೆ ತಲೆ ಎತ್ತಲು ಆರಂಭಿಸಿದೆ. ಇದೀಗ ಸಣ್ಣ ಮಟ್ಟದಲ್ಲಿ ಸುರತ್ಕಲ್, ಬಿಜೈ, ಫಳ್ನೀರ್ ಪ್ರದೇಶಗಳಲ್ಲಿ ಬಾಗಿಲು ತೆರೆದಿರುವ ಸ್ಕಿಲ್ ಗೇಮ್ ನಗರದ ಹಲವಾರು ಕಡೆ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಜೂಜಾಟದ ಹೆಸರಿನಲ್ಲಿ ಮತ್ತೆ ನಗರವನ್ನು ಹಂಡಾಲೆಬ್ಬಿಸಲು ತಯಾರಾಗಿದ್ದಾರೆ. ಆದರೆ ಪೊಲೀಸ್ ಇಲಾಖೆ ಮೌನಕ್ಕೆ ಜಾರಿದಂತಿದೆ.

ಡ್ರೈವರ್ ಗಳು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಬಹುತೇಕ ಸ್ಕಿಲ್ ಗೇಮ್ ಪರ್ಮನೆಂಟ್ ಗಿರಾಕಿಗಳು. ತಾವು ದುಡಿದ ಹಣವನ್ನು ಡಬ್ಬಲ್ ಸಿಗುತ್ತದೆ ಅನ್ನುವ ಆಸೆಯಿಂದ ಕಳೆದುಕೊಂಡವರೆ ಹೆಚ್ಚು. ಸ್ಕಿಲ್ ಗೇಮ್ ಆಟ ಆಡಲು ಹಣವಿಲ್ಲದೆ ಮಹಿಳೆಯರ ಸರಗಳ್ಳತನಕ್ಕೆ ಇಳಿದ ಕೃತ್ಯಗಳು ಈ ಹಿಂದೆ ನಗರದಲ್ಲಿ ವರದಿಯಾಗಿತ್ತು. ನೆಮ್ಮದಿಯಾಗಿದ್ದ ಮಂಗಳೂರಿನಲ್ಲಿ ಸ್ಕಿಲ್ ಗೇಮ್ ಭರಾಟೆಗೆ ತಯಾರಿಯಾಗಿ ನಿಂತಿದೆ.

ಈ ಹಿಂದೆ ಮಂಗಳೂರು ಮೇಯರ್ ಆಗಿದ್ದ ಕವಿತಾ ಸನಿಲ್, ಸಚಿವರಾಗಿದ್ದ ಯು ಟಿ ಖಾದರ್ ಸ್ಕಿಲ್ ಗೇಮ್ ಜೂಜಾಟವನ್ನು ನಗರದಲ್ಲಿ ಸಂಪೂರ್ಣ ಬಂದ್ ಮಾಡಿಸಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಯು ಟಿ ಖಾದರ್ ಗೌರವಾನ್ವಿತ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಇದೀಗ ಸ್ಪೀಕರ್ ತವರು ನೆಲದಲ್ಲಿ ಜೂಜಾಟದ ಅಡ್ಡೆಗೆ ಪರ್ಮೀಶನ್ ಸಿಕ್ಕಿದೆ ಅನ್ನುವ ಮಾತಿದೆ. ಸ್ಪೀಕರ್ ಈ ಬಗ್ಗೆ ತಮ್ಮ ಹಿಂದಿನ ಶೈಲಿಯನ್ನು ಮುಂದುವರಿಸುತ್ತಾರೋ, ಸ್ಕಿಲ್ ಗೇಮ್ ದಂಧೆಕೋರರಿಗೆ ಶರಣಾಗುತ್ತಾರೋ ಅನ್ನುವುದನ್ನು ಕಾದುನೋಡಬೇಕಿದೆ.

ಸ್ಕಿಲ್ ಗೇಮ್ ದಂಧೆ ನಡೆಸುವವರು ಹೈಕೋರ್ಟ್ ಆದೇಶವನ್ನು ದಾಖಲೆಯಾಗಿ ಇಟ್ಟುಕೊಂಡು ಪೊಲೀಸರನ್ನು ಯಾಮಾರಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಆದರೆ ಹೈಕೋರ್ಟ್ ಸ್ಪಷ್ಟವಾಗಿ ಹಣ ಕಟ್ಟಿ ಜೂಜಾಟ ಆಡುವುದನ್ನು ಸ್ಪಷ್ಟವಾಗಿ ನಿಷೇಧಿಸಿದೆ. ಸ್ಕಿಲ್ ಗೇಮ್ ನಲ್ಲಿ ದುಡ್ಡೇ ಪ್ರಮುಖ ಬಂಡವಾಳ. ಇಲ್ಲಿ ಹಣ ಕಟ್ಟದೆ ಯಾವುದೇ ಆಟ ನಡೆಯಲ್ಲ. ಆದರೆ ಹೈಕೋರ್ಟ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಸ್ಕಿಲ್ ಗೇಮ್ ದಂಧೆ ನಡೆಸಲಾಗುತ್ತಿದೆ.

ಸ್ಕಿಲ್ ಗೇಮ್ ನಲ್ಲಿ ನಾನಾ ರೀತಿಯ ಆಟಗಳಿವೆ.ಹಲವು ಬಣ್ಣಗಳ ಪರದೆಯಿದ್ದು, ಯಾವುದಾದರೊಂದು ಬಣ್ಣವನ್ನು ಆಯ್ಕೆ ಮಾಡಿ ಬಾಜಿ ಕಟ್ಟಬೇಕು. ಈ ಪರದೆಗೆ ಗೇಮ್ ನಡೆಸುವಾತ ಮೂರು ಬಾಣಗಳನ್ನು ಬಿಡುತ್ತಾನೆ. ಆ ಮೂರು ಬಾಣಗಳು ಪರದೆಯಲ್ಲಿರುವ ಆಟಗಾರ ಆಯ್ಕೆ ಮಾಡಿದ ಬಣ್ಣಗಳಿಗೆ ಬಿದ್ದರೆ ಡಬ್ಬಲ್ ಹಣ ಪಡೆಯುವ ಅವಕಾಶವಿದೆ. ಆಯ್ಕೆ ಮಾಡಿದ ಬಣ್ಣಕ್ಕೆ ಬಾಣ ಬೀಳದಿದ್ದರೆ ಹಣ ಕಳೆದುಕೊಳ್ಳಬೇಕು. ಲೂಡೋ ಕಾಯಿನ್ ಗೇಮ್ಸ್, ವಿಡಿಯೋ ಗೇಮ್ಸ್ ಗಳು ಕೂಡ ಇದೆ. ವಿದ್ಯಾರ್ಥಿಗಳು ಮನೆಯಿಂದ ಪಾಕೆಟ್ ಮನಿ ಎಂದು ಹೇಳಿ ದುಡ್ಡು ತಂದು ಸ್ಕಿಲ್ ಗೆ ಸುರಿಸುತ್ತಿದ್ದಾರೆ. ಇತ್ತ ಕೆಲವರು ಸ್ಕಿಲ್ ಗೇಮ್ ಗೆ ಅಡಿಕ್ಟ್ ಆಗಿ ಕೆಲಸಕ್ಕೆ ಹೋಗದೆ ಸಾವಿರಾರು ರೂಪಾಯಿ ಸುರಿದು ಹಣ ಕಳೆದುಕೊಳ್ಳುತ್ತಿದ್ದಾರೆ.

ಕೆಲವು ಕಾಲಗಳಿಂದ ಸ್ಕಿಲ್ ಗೇಮ್ ಗೆ ಪೂರ್ತಿ ಬೀಗ ಬಿದ್ದು ನೆಮ್ಮದಿಯಿಂದಿದ್ದ ನಗರದಲ್ಲಿ ಈಗ ಮತ್ತೆ ಸ್ಕಿಲ್ ಗೇಮ್ ಬಾಗಿಲು ತೆರೆಯಲು ಆರಂಭಿಸಿದೆ. ತಲ ಮಟ್ಟದ ಕೆಲವು ಪೊಲೀಸ್ ಅಧಿಕಾರಿಗಳು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರದೆ ಅಕ್ರಮ ವಹಿವಾಟುಗಳಿಗೆ ಬೆಂಬಲಿಸುತ್ತಿದ್ದಾರೆ. ಮಂಗಳೂರು ನಗರದ ಮಾನ್ಯ ಕಮೀಷನರ್ ಸಾಹೇಬ್ರು ಈ ಬಗ್ಗೆ ಗಮನಹರಿಸಬೇಕಾಗಿದೆ.

ನಗರದಲ್ಲಿ ಬೀಗ ಜಡಿದಿದ್ದ ಸ್ಕಿಲ್ ಗೇಮ್ ಜೂಜು ಕೇಂದ್ರಗಳು ಮತ್ತು ಜುಗಾರಿ ಅಡ್ಡೆಗಳು ಇದೀಗ ಮತ್ತೆ ತಲೆ ಎತ್ತಲು ತೆರೆಮರೆಯಲ್ಲಿ ಕಸರತ್ತುಗಳು ನಡೆಯುತ್ತಿದೆ. ನಗರದಲ್ಲಿ ಅಕ್ರಮ ಚಟುವಟಿಕೆ ನಡೆಸುವ ಮಾಫಿಯಗಳು ಸಕ್ರಿಯಗೊಳ್ಳುತ್ತಿರುವುದು ನಗರದ ಸ್ವಾಸ್ತ್ಯ ಹಾಳು ಮಾಡುವುದಲ್ಲದೆ ಕ್ರಿಮಿನಲ್ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ನಗರದಲ್ಲಿ ಮತ್ತೆ ಮನರಂಜನೆ ಆಟದ ಹೆಸರಿನಲ್ಲಿ ಜೂಜು ಕೇಂದ್ರಗಳನ್ನು ತೆರೆದರೆ ಡಿವೈಎಫ್ಐ ಮತ್ತೆ ತೀವ್ರ ಹೋರಾಟ ನಡೆಸಲಿದೆ ಎಂಬ ಎಚ್ಚರಿಕೆಯನ್ನು ಇತ್ತೀಚೆಗೆ ನೀಡಿದೆ.