ಹಿಡನ್‌ಬರ್ಗ್ ವರದಿ ನಂತರ ಅದಾನಿ ಸಮೂಹದ ಮೇಲೆ ಮತ್ತೊಂದು ಭಾರೀ ಆರೋಪ ಕೇಳಿ ಬಂದಿದೆ. ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಅದಾನಿ ಸಮೂಹ ಮಾರುಕಟ್ಟೆ ಬೆಲೆಗಿಂತಲೂ ಹೆಚ್ಚಿನ ಬೆಲೆಯನ್ನು ತೋರಿಸಿ ಅದರ ಹೊರೆಯನ್ನು ವಿದ್ಯುತ್ ಬಳಸುವ ಭಾರತೀಯರ ತಲೆ ಮೇಲೆ ಹಾಕಿದೆ ಅಂತ ಬ್ರಿಟನ್ ಮೂಲದ ಫಿನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
ಅದರ ಪ್ರಕಾರ, ದೇಶದ ಅತಿದೊಡ್ಡ ಖಾಸಗಿ ಕಲ್ಲಿದ್ದಲು ಆಮದುದಾರ ಕಂಪನಿಯಾದ ಅದಾನಿ ಸಮೂಹ, 2019ರಿಂದ 2021ರ ನಡುವೆ, ಇಂಡೋನೇಷ್ಯಾದಿಂದ 30 ಬಾರಿ ಕಲ್ಲಿದ್ದಲು ತರಿಸಿಕೊಂಡಿದ್ದು, ಪ್ರತಿ ಸಲವು ಆಮದು ಬೆಲೆಯನ್ನು ಹೆಚ್ಚು ತೋರಿಸಿದೆ. ಈ 30 ಶಿಪ್‌ಮೆಂಟ್‌ಗಳು ಇಂಡೋನೇಷ್ಯಾ ಕರಾವಳಿಯನ್ನು ಬಿಟ್ಟಾಗ 139 ಮಿಲಿಯನ್ ಡಾಲರ್ ಅಂದ್ರೆ ಸುಮಾರು 1,139 ಕೋಟಿ ರುಪಾಯಿ ಎಕ್ಸ್‌ಪೋರ್ಟ್ ಬೆಲೆಯನ್ನು ಹೊಂದಿದ್ದವು. ಆದರೆ ಭಾರತಕ್ಕೆ ಬಂದ ತಕ್ಷಣ ಇವುಗಳ ಮೌಲ್ಯವನ್ನು 215 ಮಿಲಿಯನ್ ಡಾಲರ್ ಅಂದರೆ ಸುಮಾರು 1,763 ಕೋಟಿ ಅಂತ ರೆಜಿಸ್ಟರ್ ಮಾಡಲಾಗಿದೆ. ಒಟ್ಟಾರೆ ಕಲ್ಲಿದ್ದಲು ಆಮದಿನ ಬೆಲೆಯಲ್ಲಿ 73 ಮಿಲಿಯನ್ ಡಾಲರ್ ಅಂದರೆ ಸುಮಾರು 600 ಕೋಟಿಯಷ್ಟು ಹೆಚ್ಚುವರಿ ಮೌಲ್ಯ ತೋರಿಸಿದೆ.
ಸುಮಾರು 52% ಏರಿಕೆ ಮಾಡಲಾಗಿದೆ ಅಂತ ಫಿನಾನ್ಷಿಯಲ್ ಟೈಮ್ಸ್ ಆರೋಪಿಸಿದೆ. ಲಕ್ಷಾಂತರ ಭಾರತೀಯ ಗ್ರಾಹಕರು ವಿದ್ಯುತ್‌ಗೆ ಹೆಚ್ಚು ಪಾವತಿಸುವಂತಾಗಿರುವದಕ್ಕೆ ಅದಾನಿ ಕಂಪನಿ ಕೃತಕವಾಗಿ ಇಂಧನ ವೆಚ್ಚವನ್ನ ಹೆಚ್ಚಿಸಿರುವುದೇ ಕಾರಣ ಅನ್ನೋ ಬಹುಕಾಲದ ಆರೋಪಗಳನ್ನು ಈ ದಾಖಲೆಗಳು ಸಾಬೀತುಪಡಿಸುತ್ತವೆ ಅಂತ ತನಿಖಾ ವರದಿಯಲ್ಲಿ ಹೇಳಲಾಗಿದೆ. ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಅದಾನಿ ಸಮೂಹ 5 ಬಿಲಿಯನ್ ಡಾಲರ್ ಮೌಲ್ಯದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು, ತೈವಾನ್, ದುಬೈ, ಮತ್ತು ಸಿಂಗಾಪುರದಲ್ಲಿನ ಮಧ್ಯವರ್ತಿ ಕಂಪನಿಗಳನ್ನಪ ಬಳಸಿಕೊಂಡಿದೆ. ಈ ಕಂಪನಿಗಳಲ್ಲಿ ಒಂದು ಕಂಪನಿ, ಅದಾನಿ ಕಂಪನಿಗಳಲ್ಲಿ ರಹಸ್ಯ ಷೇರುದಾರನಾಗಿದ್ದ ತೈವಾನ್ ಉದ್ಯಮಿಯೊಬ್ಬರಿಗೆ ಸೇರಿದೆ ಅಂತ ಆರೋಪಿಸಿದೆ.
ಈ ವರದಿ ಬರೋದಕ್ಕೂ ಒಂದು ದಿನ ಮುಂಚೆಯೇ ಫಿನಾನ್ಷಿಯಲ್ ಟೈಮ್ಸ್ ತನ್ನ ಇಮೇಜ್‌ನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ ಅಂತ ಅದಾನಿ ಸಮೂಹ ಆರೋಪ ಮಾಡಿತ್ತು. ಫಿನಾನ್ಷಿಯಲ್ ಟೈಮ್ಸ್, ಅದೇ ಹಳೆಯ ಮತ್ತು ಆಧಾರರಹಿತ ಆರೋಪಗಳನ್ನು ಮುಂದುವರಿಸುತ್ತಿದೆ. ಹಿಂಡನ್‌ಬರ್ಗ್ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಹಿಯರಿಂಗ್‌ಗೆ ಬರೋವಾಗಲೇ ಈ ರಿಪೋರ್ಟ್ ಮಾಡಲಾಗುತ್ತಿದೆ. 7 ವರ್ಷದ ಹಿಂದೆಯೇ DRI ಅಂದರೆ ಡೈರೆಕ್ಟೋರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್ ಈ ಬಗ್ಗೆ ತನಿಖೆ ನಡೆಸಿದೆ, ಈ ಆರೋಪ ಸುಪ್ರೀಂ ಕೋರ್ಟ್‌ನಲ್ಲೇ ಮುಗಿದಿದೆ ಅಂತ ಈ ರಿಪೋರ್ಟ್ ಬರೋಕೂ ಮುಂಚೆಯೇ ಅದಾನಿ ಕಂಪನಿ ಹೇಳಿತ್ತು. ಇದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.