ಕೇಂದ್ರ ಸರ್ಕಾರ ಭಯವನ್ನೇ ಧರ್ಮದ ಮೂಲವನ್ನಾಗಿಸಿದೆ: ಮೀನಾಕ್ಷಿ ಬಾಳಿ

ಕರಾವಳಿ

ಪ್ರಧಾನಿ ನರೇಂದ್ರ ಮೋದಿ 2014 ರಲ್ಲಿ ಗದ್ದುಗೆಗೆ ಏರುವ ಮುನ್ನ ಸುಮಾರು ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದ್ದ ಉದ್ಯೋಗ ಪ್ರಮಾಣವೇ ಕಡಿಮೆಯಾಗಿದೆಯೇ ಹೊರತು, ಸೃಷ್ಟಿಯಂತು ಆಗಿಲ್ಲ ಎಂದು ಮಹಿಳಾಪರ ಹೋರಾಟಗಾರ್ತಿ, ಸಂಶೋಧಕಿ ಮೀನಾಕ್ಷಿ ಬಾಳಿ ಹೇಳಿದರು.

ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ ಎಂಬ ಘೋಷಣೆಯಡಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಯುವಜನ ಸಂಘಟನೆಯ 14ನೇ ದ.ಕ ಜಿಲ್ಲಾ ಸಮ್ಮೇಳನವು ಅ. 15 ರಂದು ಮಂಗಳೂರಿನ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಡೆಯಿತು.‌

ಈ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮೀನಾಕ್ಷಿ ಬಾಳಿ, “ಪ್ರಸ್ತುತ ಯುವಕರನ್ನು ಭ್ರಮೆ ಎಂಬ ತಾಯಿ ತೊಟ್ಟಿಲಲ್ಲಿ‌ ಹಾಕಿ‌ ತೂಗುತ್ತಿದೆ. ಆದರೆ ಈ ಜೋಗುಳ ನಿಲ್ಲಬೇಕು. ತೊಟ್ಟಿಲು ಮುರಿಯಬೇಕು. ಯುವಕರು ಭ್ರಮೆಯಿಂದ ಹೊರಬಂದು ಶಿಕ್ಷಣ, ಉದ್ಯೋಗ, ಆರೋಗ್ಯದ ಸಮಸ್ಯೆಗಳನ್ನು ಎತ್ತಿ ಹೋರಾಟ ಮಾಡಬೇಕು,” ಎಂದು ಕರೆ ನೀಡಿದರು.

“ನಮ್ಮ‌ ಪ್ರಧಾನಿ ಸುಳ್ಳು‌ ಹೇಳುವುದರಲ್ಲಿ‌ ನಿಸ್ಸಿಮರು.‌ ವಿಧೂಷಕ. ಜಗತ್ತಿನ ಯಾವ ದೇಷದಲ್ಲಿಯೂ ಇಷ್ಟು ಸುಳ್ಳು ಹೇಳುವ ಪ್ರಧಾನಿಯಿಲ್ಲ. ಕೇಂದ್ರವು‌ ಎಲ್ಲ‌‌ ಸಮಸ್ಯೆಗೆ ಕೋವಿಡ್ ಕಾರಣ ಎಂದು ಹೇಳುತ್ತದೆ. ಆದರೆ ಅದೇ ಕೋವಿಡ್ ಸಂದರ್ಭದಲ್ಲಿ ಅಂಬಾನಿ, ಅದಾನಿ‌ ಆದಾಯ ಮಾತ್ರ ದುಪ್ಪಟ್ಟಾಗಿದೆ. ಅದರ ಬಗ್ಗೆ‌ ಈ ಮೋದಿ ಸರ್ಕಾರ ಮಾತನಾಡಲ್ಲ ಯಾಕೆ?,” ಎಂದು ಪ್ರಶ್ನಿಸಿದರು.

ಇಂದಿನ ಯುವಕರು ಶಿಕ್ಷಣ, ಉದ್ಯೋಗ, ಆರೋಗ್ಯ ವಿಚಾರದಲ್ಲಿ ಸರ್ಕಾರವನ್ನು ಪ್ರಶ್ನಿಸಬೇಕು, ಸಿಟ್ಟಾಗಬೇಕು. ಆದರೆ ಇಂದಿನ ಯುವಕರಿಗೆ ಈ ಸಮಸ್ಯೆಗಳ ಬಗ್ಗೆ ಸಿಟ್ಟಿಲ್ಲ. ಕೋಮುವಾದದ ಭ್ರಮೆಯಲ್ಲಿ ಯುವಕರು ಇದ್ದಾರೆ ಎಂದು ಹೇಳಿದರು.

ಭಾರತ ಅತೀ ಹೆಚ್ಚು ಬೆಳವಣಿಗೆ ಕಾಣುತ್ರಿರುವ ದೇಶ ಎಂಬಂತೆ ಕೇಂದ್ರ ಸರ್ಕಾರ ಬಿಂಬಿಸುತ್ತದೆ. ಆದರೆ ಹಲವಾರು ಸಮೀಕ್ಷೆಗಳನ್ನು ನಾವು ನೋಡಿದಾಗ ಭಾರತ ಹಿಂದುಳಿದ ದೇಶವಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ. ನಿರುದ್ಯೋಗ‌ ಪ್ರಮಾಣ ಭಾರೀ ಏರಿಕೆಯಾಗಿದೆ ಎಂದರು.

ಭಯೋತ್ಪಾದನೆಯಲ್ಲಿ ಎರಡು ರೀತಿ ಇದೆ. ಒಂದು ಮುಸ್ಲಿಂ ಭಯೋತ್ಪಾದನೆ, ಇನ್ನೊಂದು ಹಿಂದೂ ಭಯೋತ್ಪಾದನೆ ಆಗಿದೆ. ಇಲ್ಲಿ ಮುಸ್ಲಿಂ ಭಯೋತ್ಪಾದಕರು ಎಲ್ಲಿ ಬಾಂಬ್ ಇಟ್ಟರೂ, ಗಲಭೆ ಮಾಡಿದರೂ, ಅದು ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಆದರೆ ಹಿಂದೂ ಭಯೋತ್ಪಾದಕರು ಏನೇ ಮಾಡಿದರೂ ಅದು‌‌‌ ನಾವೇ ಮಾಡಿದ್ದು ಎಂದು‌‌‌‌ ಒಪ್ಪಿಕೊಳ್ಳಲ್ಲ. ಇದು ಮಾತ್ರ ಎರಡು ಭಯೋತ್ಪಾದಕರ ನಡುವಿನ‌ ವ್ಯತ್ಯಾಸ ಎಂದು ಹೇಳಿದರು.

ಮತ್ತೊಬ್ಬರನ್ನು ದ್ವೇಷ ಮಾಡುವುದು ಭಾರತದ ಸಂಸ್ಕ್ರತಿಯಲ್ಲ. ನಮ್ಮ ಸಂಸ್ಕೃತಿ ದಯವೇ ಧರ್ಮದ ಮೂಲವಯ್ಯ ಅನ್ನುತ್ತದೆ. ಆದರೆ ಈಗಿನ ಕೇಂದ್ರ ಸರ್ಕಾರ ಭಯವೇ ಧರ್ಮದ ಮೂಲವನ್ನಾಗಿಸಿದೆ ಎಂದು ಆರೋಪ‌‌ ಮಾಡಿದರು.

ಕರಾವಳಿ ಕೋಮುವಾದಿಗಳ‌‌ ಪ್ರಯೋಗಶಾಲೆಯಾಗಿದೆ. ಆದರೂ ಇಲ್ಲಿ ಡಿವೈಎಫ್ಐ ಕಾರ್ಯ ಶ್ಲಾಘನೀಯ. ಡಿವೈಎಫ್ಐ ಕಾರ್ಯಕರ್ತರು ಬಿತ್ತುವ ಬೀಜದಂತೆ.‌‌ ಮುಂದೊಂದು ದಿನ ಕರಾವಳಿ ಬದಲಾಗುತ್ತದೆ. ಆಗ ನೀವು ಬಿತ್ತುವ ಬೀಜವಾಗುತ್ತೀರಿ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಸುಳ್ಳು ಮಾತನಾಡುವುದರಲ್ಲಿಯೇ ಜಗತ್ ಪ್ರಸಿದ್ಧರಾದ ಸೂಲಿಬೆಲೆ, ಮುಸ್ಲಿಮರ‌ ವಿರುದ್ಶ ಮಾತನಾಡಿ ಮುಸ್ಲಿಂ ಉದ್ಯಮಿಗಳೊಂದಿಗೆ ವ್ಯಾಪಾರ ಮಾಡುವ ಶರಣ್ ಪಂಪ್ವೆಲ್ ಭಾಣಣ ಮಾಡುತ್ತಿರುತ್ತಾರೆ. ಆದರೆ ಎಂದಾದರೂ ಶಿಕ್ಷಣ, ಉದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದ್ದಾರಾ?. ದ್ವೇಷ ಭಾಷಣ ಮಾಡಿಯೇ ಅಧಿಕಾರ ಪಡೆದವರು ಇವರು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತುಳುನಾಡಿನ ಸಂಘ ಪರಿವಾರ ಇತ್ತೇ? ಗೇಣಿದಾರರು, ಭೂಮಾಲೀಕರ ವಿರುದ್ಧದ ಹೋರಾಟದಲ್ಲಿ ಈ ಸಂಘಪರಿವಾರ ಇತ್ತೇ?. ಎಲ್ಲಿದ್ದರು?. ನಿಜವಾಗಿ ಈ ಹೋರಾಟದಲ್ಲಿ‌ ಇದ್ದದ್ದು ಕೆಂಪು ಬಾವುಟ ಹೊರತು ಕೇಸರಿ ಬಾವುಟವಲ್ಲ ಎಂದು ತಿಳಿಸಿದರು.

ಕಟೀಲ್ ಅವರೇ ನೀವು ಒಂದೇ ಒಂದು ಉದ್ಯೋಗ ಸೃಷ್ಟಿ ಮಾಡಿದ್ದೀರಾ?. ಶಿಕ್ಷಣ, ಉದ್ಯೋಗದ ಬಗ್ಗೆ ಮಾತನಾಡಿದ್ದೀರಾ? ಸರ್ಕಾರಿ ಮೆಡಿಕಲ್ ಕಾಲೇಜು ಬಗ್ಗೆ‌ ಮಾತನಾಡಿದ್ದೀರಾ?. ಇವರ ಸಾಧನೆ ಯುವಕರನ್ನು ಜೈಲಿಗೆ ಕಳುಹಿಸಿದ್ದೆ ಹೊರತು, ಉದ್ಯೋಗ ಸೃಷ್ಟಿ ಮಾಡಿದ್ದು ಅಲ್ಲ ಎಂದು ವ್ಯಂಗ್ಯ ಮಾಡಿದರು.

ಸಾಲ‌‌‌ ಮಾಡಿ ಶಿಕ್ಷಣ ಪಡೆಯಲಾಗುತ್ತದೆ. ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಲಾಗುತ್ತದೆ. ಆದರೆ 8-9 ಸಾವಿರ ಸಂಬಳಕ್ಕೆ ದುಡಿಯಬೇಕಾದ ಸ್ಥಿತಿ ಇದೆ. ಇಷ್ಟು ಸಂಬಳದಲ್ಲಿ‌ ಜೀವನ ನಡೆಸುವುದು ಹೇಗೆ?. ಆಸ್ಪತ್ರೆಗಳ ಲಕ್ಷ ಲಕ್ಷ ಬಿಲ್‌‌ ಕಟ್ಟುವುದು ಹೇಗೆ?. ಶಿಕ್ಷಣವಿದ್ದರೆ ಉದ್ಯೋಗವಿಲ್ಲ, ಉದ್ಯೋಗವಿದ್ದರೆ ಸರಿಯಾದ ಸಂಬಳವಿಲ್ಲ. ಇಂತಹ ಪ್ರಶ್ನೆ ಎತ್ತಿ‌ ಮಾತನಾಡಬೇಕು ಎಂದು ಮುನೀರ್ ಹೇಳಿದರು.

ಪಂಪ್ವೆಲ್ ಅವರೇ, ನಿಮ್ಮ ಶೌರ್ಯ ತೋರಿಸುವುದಾದರೆ, ಬಡತನ, ಶಿಕ್ಷಣ ಸಮಸ್ಯೆ, ನಿರುದ್ಯೋಗ, ಶೋಷಣೆ ವಿರುದ್ಧ ಶೌರ್ಯವನ್ನು ತೋರಿಸಿ. ಜಾತ್ರೆಯಲ್ಲಿ‌ ವ್ಯಾಪಾರ ಮಾಡುವ ಬಡ ಮುಸ್ಲಿಂ ವ್ಯಾಪಾರಿಗಳ ಮೇಲೆ ಅಲ್ಲ. ಶೌರ್ಯದ ಬಗ್ಗೆ ಮಾತನಾಡುವ ಹಕ್ಕು ನಮಗೆ ಇದೆ. ಯಾಕೆಂದರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಮಾತನಾಡಿದವರು ನಾವು. ನಾವು ಯುವಕರನ್ನು ಕ್ರಿಮಿನಲ್ ಮಾಡಿಲ್ಲ. ಜನರಿಗಾಗಿ ಹೋರಾಡಿದ್ದೇವೆ. ನ್ಯಾಯಕ್ಕಾಗಿ ಎದೆಕೊಟ್ಟು ಹೋರಾಡಿದ ಕೋಟಿ ಚೆನ್ನಯ್ಯರ ವಾರಿಸುದಾರರು ನಾವು ಎಂದು ಕಾಟಿಪಳ್ಳ ಹೇಳಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ, ಸ್ವಾತಂತ್ರ್ಯ ಹೋರಾಟ ಆರಂಭವಾದಾಗ ಕೊನೆ ಯಾವಾಗ ಎಂದು ತಿಳಿದಿರಲಿಲ್ಲ. ಆದರೆ ಸ್ವಾತಂತ್ರ್ಯ ಸಿಕ್ಕಿದೆ.‌ ಹಾಗೆಯೇ ನಮ್ಮ ಹೋರಾಟಕ್ಕೂ ಕೊನೆ ತಿಳಿದಿಲ್ಲ. ಹೋರಾಟ ಮುಂದುವರೆಯಬೇಕು. ಕಾಂಗ್ರೆಸ್ ಸರ್ಕಾರ ಜಿಲ್ಲೆಯಲ್ಲಿ ಮೌನವಾಗಿರುವುದು ಸರಿಯಲ್ಲ. ಮಾತನಾಡಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಉದ್ಘಾಟನಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.‌ ಮನೋಜ್ ವಾಮಂಜೂರು ಸ್ವಾಗತಿಸಿದರು, ಜೀವನ್ ರಾಜ್ ಕುತ್ತಾರ್ ಧನ್ಯವಾದ ತಿಳಿಸಿದರು.