ಗುರುಪುರ ಕೈಕಂಬ: ಗಾಂಜಾ, ಡ್ರಗ್ಸ್ ಹಾವಳಿಗೆ ತುತ್ತಾಗುತ್ತಿರುವ ಹದಿಹರೆಯದ ಯುವಕರು.! ಎತ್ತ ಸಾಗುತ್ತಿದೆ ಯುವ ಸಮಾಜ.?

ಕರಾವಳಿ

ಮಂಗಳೂರು ನಗರದ ಆಸುಪಾಸಿನಲ್ಲಿರುವ ಗುರುಪುರ ಕೈಕಂಬ ಅತೀ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಈ ಭಾಗದಲ್ಲಿರುವ ಗುರುಪುರ, ಗಂಜಿಮಠ, ಕಂದಾವರ, ಶಾಂತಿನಗರ, ಗುರುಕಂಬಳ, ಸೂರಲ್ಪಾಡಿ ಸೇರಿದಂತೆ ಆಸುಪಾಸಿನ ಪ್ರದೇಶಗಳಿಗೆ ಕೈಕಂಬ ಪ್ರಮುಖ ಜಂಕ್ಷನ್ ಆಗಿದೆ. ಹತ್ತಾರು ವಸತಿ ಸಮುಚ್ಛಯಗಳು ತಲೆ ಎತ್ತಿ ನಿಂತಿದೆ. ಕಾರ್ಖಾನೆಗಳು, ಕೈಗಾರಿಕಾ ಕೇಂದ್ರಗಳು ಇವೆ. ಒಟ್ಟಾರೆಯಾಗಿ ಹೇಳುವುದಾದರೆ ಗುರುಪುರ ಕೈಕಂಬ ಪ್ರಮುಖ ನಗರವಾಗಿ ಹೊರಹೊಮ್ಮುತ್ತಿದೆ.

ನಗರಗಳು ಬೆಳೆದಂತೆ ಅಲ್ಲಿ ಸಮಾಜ ಬಾಹಿರ ಕೃತ್ಯಗಳು, ಅಮಲು ಪದಾರ್ಥಗಳ ದಂಧೆಕೋರರು ತಮ್ಮ ದಂಧೆಯನ್ನು ವಿಸ್ತರಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿವೆ. ಅದು ಗುರುಪುರ ಕೈಕಂಬವನ್ನು ಕೂಡ ಬಿಟ್ಟಿಲ್ಲ.

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ಅವ್ಯಾಹತವಾಗಿ ಬಿಟ್ಟಿದೆ. ಇನ್ನೂ ಮೀಸೆ ಮೂಡದ ಹದಿ ಹರೆಯದ ಯುವಕರು ಈ ಜಾಲಕ್ಕೆ ಸಿಲುಕುತ್ತಿದ್ದಾರೆ. ಆಮಿಷ ತೋರಿಸಿ ಕಾಲೇಜು ವಿದ್ಯಾರ್ಥಿಗಳನ್ನು ದಂಧೆಗೆ ಬೀಳಿಸುವ ಖತರ್ನಾಕ್ ಗ್ಯಾಂಗ್ ಗಳು ಇಲ್ಲಿ ಸಕ್ರೀಯವಾಗಿದೆ. ಹದಿನೆಂಟರ ಆಸುಪಾಸಿನ ಕಾಲೇಜು ವಿದ್ಯಾರ್ಥಿಗಳು, ಸೋಮಾರಿ ಯುವಕರ ತಂಡ ಗಾಂಜಾ ದುಶ್ಚಟಕ್ಕೆ ಅಡಿಕ್ಟ್ ಆಗಿರುವ ಕಳವಳಕಾರಿ ಸಂಗತಿ ಹೊರಬಂದಿದೆ. ಪೋಷಕರು ಸ್ವತಃ ತಮ್ಮ ಮಕ್ಕಳನ್ನು ಈ ಜಾಲದಿಂದ ಹೊರತರಲು ಹೆಣಗುತ್ತಿದ್ದಾರೆ ಅನ್ನುವ ಸುದ್ಧಿ ಇದೆ. ಭವಿಷ್ಯದಲ್ಲಿ ಇದು ಈ ಪ್ರದೇಶಕ್ಕೆ ಮಾರಕವಾಗುವ ಸಾಧ್ಯತೆಯೂ ಇದೆ.

ಒಂದೆರಡು ವರ್ಷಗಳ ಹಿಂದೆ ಕೈಕಂಬದ ಪ್ರದೇಶಕ್ಕೆ ಬಂದ ಅನ್ಯ ಪ್ರದೇಶದ ಗಾಂಜಾ, ಡ್ರಗ್ಸ್ ಅಮಲುಕೋರರ ತಂಡ ಕೆಲವು ಮಹಿಳೆಯರನ್ನು ಪಟಾಯಿಸಿ ತಮ್ಮ ಕಾರ್ಯ ಸಾದಿಸುವಲ್ಲಿ ಸಕ್ರೀಯವಾಗಿತ್ತು. ಈ ಭಾಗದಲ್ಲಿ ಇದು ಭಾರೀ ದೊಡ್ಡ ಸುದ್ಧಿಗೂ ಕಾರಣವಾಗಿತ್ತು. ಪೊಲೀಸರು ಕೊನೆಗೆ ಅಂತಹ ಗ್ಯಾಂಗಿನ ಬೆನ್ನುಮೂಳೆಯನ್ನು ಮುರಿದಿದ್ದರು. ಇದರ ಹಿಂದೆ ಇದ್ದಿದ್ದು ಇದೇ ಗಾಂಜಾ, ಡ್ರಗ್ಸ್ ದಂಧೆ.

ಕೈಕಂಬ ಪರಿಸರ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿರುವುದರಿಂದ ಗಂಜಿಮಠ ಭಾಗದಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಹೊರ ರಾಜ್ಯಗಳಿಂದ ಸಾವಿರಾರು ಕಾರ್ಮಿಕರು ಇಲ್ಲಿ ದುಡಿಯಲು ಬರುತ್ತಿದ್ದಾರೆ. ಅದರಲ್ಲಿ ಕೆಲವು ಮಂದಿ ಗಾಂಜಾ, ಡ್ರಗ್ಸ್ ದಂಧೆಗೆ ಸಿಲುಕಿ ಇನ್ನಷ್ಟು ಜನರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿಗಳು ಇವೆ. ಜೊತೆಗೆ ಬೇರೆ ಕಡೆಗಳಿಂದ ಬಂದಂತಹ ಕೆಲವರು ಗಾಂಜಾ ದಂಧೆಗೆ ಬಿದ್ದು ಕಾಲೇಜು ವಿದ್ಯಾರ್ಥಿಗಳಿಗೆ, ಅಲೆಮಾರಿ ಯುವಕರಿಗೆ ಆಮಿಷ ತೋರಿಸಿ ಸಿಲುಕಿಸಲಾಗುತ್ತದೆ ಅನ್ನುವ ಆರೋಪ ಕೇಳಿ ಬರತೊಡಗಿದೆ.

ರಾತ್ರಿಯಾಗುತ್ತಿದ್ದಂತೆ ಕೆಲವೊಂದು ಕಾಂಪ್ಲೆಕ್ಸ್, ವಸತಿ ಸಮುಚ್ಛಯಗಳು, ಹೋಟೆಲ್ ರೆಸ್ಟೋರೆಂಟ್ ಗಳ ಬಳಿ ಠಳಾಯಿಸುವ ಗಾಂಜಾ ಗಿರಾಕಿಗಳು ಹದಿಹರೆಯದ ಯುವಕರನ್ನು ಪುಸಲಾಯಿಸಿ, ಗಾಂಜಾ ಎಳೆಯುವಂತೆ ಮಾಡಿ ಕೊನೆಗೆ ಅವರು ಆ ದುಶ್ಚಟಕ್ಕೆ ಶಾಶ್ವತವಾಗಿ ಬಲಿ ಬೀಳುವಂತೆ ಮಾಡುವ ಗ್ಯಾಂಗ್ ಗಳು ಇದೀಗ ಈ ಪ್ರದೇಶದಲ್ಲಿ ಸಕ್ರೀಯವಾಗಿದೆ. ಜೊತೆಗೆ ವಿದ್ಯಾರ್ಥಿಗಳನ್ನು ಈ ದಂಧೆಗೆ ಬಲಿ ಬೀಳಿಸುವ ಕೆಲಸ ನಡೆಯುತ್ತಿದೆ ಅನ್ನುವ ಕಳವಳಕಾರಿ ಸಂಗತಿ ಹೊರಬಂದಿದೆ.

ಇತ್ತೀಚೆಗೆ ಬಜಪೆ ಪೊಲೀಸರು ಕಾರ್ಯಾ ಚರಣೆ ನಡೆಸಿ ಕೊಳಂಬೆ ಗ್ರಾಮದ ಫನಾ ಕಾಲೇಜು ಬಳಿ ಹಾಗೂ ಅದ್ಯಪಾಡಿ ದ್ವಾರದ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಬಡಗುಳಿಪಾಡಿ, ಮೂಡುಪೆರಾರ, ಗುರುಕಂಬಳ ಮತ್ತು ಕಂದಾವರದ ಯುವಕರನ್ನು ವಶಕ್ಕೆ ಪಡೆದಿದ್ದರು. ಇವರೆಲ್ಲ ಕೈಕಂಬ ಸುತ್ತಮುತ್ತಲಿನ ಪ್ರದೇಶದವರಾಗಿದ್ದಾರೆ. ಪೊಲೀಸ್ ಇಲಾಖೆ ಈ ದಂಧೆಯ ಪ್ರಮುಖ ಕಿಂಗ್ ಪಿನ್ ಗಳ ಬೆನ್ನುಮೂಳೆ ಮುರಿಯುವ ಅಗತ್ಯವಿದೆ.

ಅದೇ ರೀತಿ ಇಲ್ಲಿನ ಸಾಮಾಜಿಕ ಸಂಘಟನೆಗಳು, ಧಾರ್ಮಿಕ ಮೊಹಲ್ಲಾ ಸಮಿತಿಯವರು ಗಾಂಜಾ, ಡ್ರಗ್ಸ್ ದಂಧೆಗೆ ತಮ್ಮದೇ ಸಮುದಾಯದ ಯುವಕರು ಬಲಿಪಶುವಾಗುತ್ತಿರುವ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಜರೂರತ್ತು ಇದೆ. ಕಾಲೇಜು ವಿದ್ಯಾರ್ಥಿಗಳನ್ನು, ಸ್ಥಳೀಯ ಯುವಕರನ್ನು ದಂಧೆಕೋರರು ಬಲೆಗೆ ಬೀಳಿಸುವ ಹುನ್ನಾರ ನಡೆಯುತ್ತಿರುವುದರಿಂದ ಜಮಾಅತ್ ಕಮಿಟಿಗಳು, ಧಾರ್ಮಿಕ ಗುರುಗಳು ಈ ದಂಧೆಯ ಕರಾಳತೆಯ ಬಗ್ಗೆ ಯುವಕರಿಗೆ ತಿಳಿ ಹೇಳಿ ದಾರಿ ತಪ್ಪದಂತೆ ಕ್ರಮ ವಹಿಸಬೇಕಿದೆ. ಜೊತೆಗೆ ಪೋಷಕರ ಜವಾಬ್ದಾರಿಯು ದೊಡ್ಡದಿದೆ. ಜಮಾಅತ್ ಮಟ್ಟದಲ್ಲಿ ಕಾರ್ಯಾಗಾರ ನಡೆಸಿ ಹೊಸ ಯುವಕರು ಈ ದಂಧೆಗೆ ಬಲಿಪಶು ಆಗುವುದನ್ನು ತಪ್ಪಿಸಬೇಕಿದೆ. ಜಮಾಅತ್ ವ್ಯಾಪ್ತಿಯಲ್ಲಿ ದಂಧೆಯಲ್ಲಿ ತೊಡಗಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಭವಿಷ್ಯದಲ್ಲಿ ಕೈಕಂಬ ಸುತ್ತಮುತ್ತಲಿನ ಪರಿಸರ ಗಾಂಜಾ, ಡ್ರಗ್ಸ್ ದಂಧೆಯ ಪ್ರಮುಖ ಅಡ್ಡೆಯಾಗುವುದರಲ್ಲಿ ಸಂಶಯವಿಲ್ಲ. ತಮ್ಮ ಕಣ್ಣ ಮುಂದೆಯೇ ಹೆತ್ತು ಸಾಕಿ ಸಲಹಿದ ಮಕ್ಕಳು ದುಶ್ಚಟಕ್ಕೆ ದಾಸರಾಗಿ ತಮ್ಮ ಕೈ ಮೀರಿ ಹೋಗುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕಿಂತ ಮೊದಲು ನಾವು ಜಾಗೃತರಾಗಬೇಕಾಗಿದೆ. ಮಧ್ಯರಾತ್ರಿಗಳ ತನಕ ಕೈಕಂಬ ಪರಿಸರದ ಸುತ್ತಮುತ್ತ ಗಿರಾಕಿ ಹೊಡೆಯುವ ಕೆಲವು ಸೊಂಬೇರಿ ಯುವಕರ ಬಗ್ಗೆ ಪೊಲೀಸ್ ಇಲಾಖೆ ನಿಗಾವಹಿಸಬೇಕಾಗಿದೆ.