ಲೋಕಸಭೆ ಚುನಾವಣೆ 2023: ಆಪರೇಷನ್ ಹಸ್ತ’ ಬಿಜೆಪಿ ನಾಯಕರಿಗೆ ತಲೆನೋವು.!

ರಾಜ್ಯ

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ರಾಜ್ಯದಲ್ಲಿ ನಡೆಯುತ್ತಿರುವ ‘ಆಪರೇಷನ್ ಹಸ್ತ’ ಬಿಜೆಪಿ ನಾಯಕರಿಗೆ ತಲೆನೋವು ತಂದೊಡ್ಡಿದೆ. ಬಿಜೆಪಿಯ ಮಾಜಿ ಶಾಸಕರು, ಕಳೆದ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಕಾರಣಕ್ಕೆ ಪಕ್ಷ ತೊರೆದು ಅನ್ಯ ಪಕ್ಷಗಳಿಂದ ಕಣಕ್ಕಿಳಿದು ಸೋಲು ಕಂಡವರು ‘ಕೈ’ ಹಿಡಿಯಲು ಮುಂದಾಗಿದ್ದಾರೆ

ಶಿರಹಟ್ಟಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ರಾಮಪ್ಪ ಲಮಾಣಿ ‘ಕೈ’ ಹಿಡಿದ ಬೆನ್ನಲ್ಲೆ, ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಕೂಡಾ ಕಾಂಗ್ರೆಸ್‌ ಸೇರಲು ಮುಹೂರ್ತ ನಿಗದಿಯಾಗಿದೆ. ಇದೇ 20ರಂದು ಅವರು ಕಾಂಗ್ರೆಸ್‌ ಸೇರಲಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಜೆಡಿಎಸ್‌ಗೆ ಜಿಗಿದು ಮೂಡಿಗೆರೆಯಲ್ಲಿ ಕಣಕ್ಕಿಳಿದಿದ್ದ ಎಂ.ಪಿ. ಕುಮಾರಸ್ವಾಮಿ ಕೂಡಾ ಅದೇ ದಿನ ಕಾಂಗ್ರೆಸ್‌ ಸೇರಲಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದ ಕಾರಣಕ್ಕೆ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ವಿಧಾನ ಪರಿಷತ್‌ ಸದಸ್ಯರಾಗಿರುವ ಜಗದೀಶ ಶೆಟ್ಟರ್ ಅವರು ಇದೀಗ ಬಿಜೆಪಿ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತಿದ್ದಾರೆ. ಕಾಂಗ್ರೆಸ್ ನಡೆಸುತ್ತಿರುವ ಬಿಜೆಪಿಗರ ‘ಆಪರೇಷನ್ ಹಸ್ತ’ದಲ್ಲಿ ಶೆಟ್ಟರ್ ಅವರ ಪಾತ್ರ ಪ್ರಮುಖವಾಗಿದೆ ಎಂದು ಮೂಲಗಳು ಹೇಳಿವೆ.

ಟಿಕೆಟ್ ತಪ್ಪಿಸಿ ತಮ್ಮ ಸೋಲಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳಲು ನಿಂತಿರುವ ಶೆಟ್ಟರ್‌, ಉತ್ತರ ಕರ್ನಾಟಕ ಭಾಗದ ಹಲವು ಬಿಜೆಪಿ ನಾಯಕರನ್ನು ಕಾಂಗ್ರೆಸ್‌ನತ್ತ ಸೆಳೆಯಲು ಗಾಳ ಹಾಕಿದ್ದಾರೆ. ಈಗಾಗಲೇ ಕೆಲವು ನಾಯಕರ ಪಟ್ಟಿ ಸಹಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೊತೆ ಚರ್ಚೆಯನ್ನೂ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನತ್ತ ಬಿಜೆಪಿ ಮಾಜಿ ಶಾಸಕರ ವಲಸೆ ಲೋಕಸಭೆ ಚುನಾವಣೆಯಲ್ಲಿ ಕಮಲ ಪಕ್ಷಕ್ಕೆ ದುಬಾರಿ ಆಗುವ ಸಾಧ್ಯತೆಯಿದೆ. ಬಿಜೆಪಿಯ ಕೆಲವು ನಾಯಕರು ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕತ್ವದ ಬಗ್ಗೆಯೂ ಅಸಮಾಧಾನಗೊಂಡಿದ್ದಾರೆ. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಅವರೂ ಕಾಂಗ್ರೆಸ್‌ ಕಡೆಗೆ ಮುಖ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಜೆಡಿಎಸ್‌ ಜೊತೆಗಿನ ಮೈತ್ರಿಯೂ ಇದಕ್ಕೆ ಕಾರಣವಾಗಿದೆ ಎಂಬ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.