ರೊನಾಲ್ಡೋ ಗೆ ಛಡಿಯೇಟು ಶಿಕ್ಷೆ ಮಾಧ್ಯಮಗಳ ಸುಳ್ಳು ಸುದ್ದಿ: ಇರಾನ್ ಸ್ಪಷ್ಟನೆ

ಅಂತಾರಾಷ್ಟ್ರೀಯ

ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಗೆ ಇರಾನ್ 99 ಛಡಿಯೇಟು ಶಿಕ್ಷೆ ನೀಡುವ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸ್ಪೇನ್ ನಲ್ಲಿರುವ ಇರಾನ್ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ. ಈ ಸುದ್ದಿ ಆಧಾರರಹಿಣವಾಗಿದ್ದು, ಅದರಲ್ಲಿ ಸತ್ಯಾಂಶ ಇಲ್ಲವೆಂದು ಇರಾನ್ ಖಚಿತಪಡಿಸಿದೆ.

ಪೋರ್ಚುಗಲ್ ಮೂಲದ ಪುಟ್ಬಾಲ್ ಆಟಗಾರ ಕಳೆದ ತಿಂಗಳು ಟೆಹರಾನ್ ಗೆ ಭೇಟಿ ನೀಡಿದ್ದ ವೇಳೆ ವಿಕಲಚೇತನ ಕಲಾವಿದೆ ಫಾತಿಮಾ ಹಮಾಮಿ ಅವರನ್ನು ಸಂಧಿಸಿದ್ದರು. ಈ ಸಂದರ್ಭದಲ್ಲಿ ರೊನಾಲ್ಡೋ ಆಕೆಯನ್ನು ಆಲಿಂಗಿಸಿ ಕೆನ್ನೆಗೆ ಮುತ್ತಿಕ್ಕಿದ್ದರು. ಇದರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಅವಿವಾಹಿತ ಮುಸ್ಲಿಂ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ರೊನಾಲ್ಡೋ ಗೆ ಇರಾನ್ 99 ಛಡಿಯೇಟಿನ ಶಿಕ್ಷೆ ಘೋಷಿಸಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

ಮಾಧ್ಯಮಗಳಲ್ಲಿ ಬಿತ್ತರಗೊಂಡ ಸುದ್ದಿ ಬಗ್ಗೆ ಪ್ರಕಟಣೆ ಹೊರಡಿಸಿರುವ ಸ್ಪೇನ್ ನಲ್ಲಿನ ಇರಾನ್ ರಾಯಭಾರ ಕಚೇರಿಯು, ಪ್ಯಾಲೆಸ್ತೀನ್ ನಲ್ಲಿ ಮಾರಣಹೋಮ ನಡೆಯುತ್ತಿರುವ ಹೊತ್ತಿನಲ್ಲಿ ಅದರ ಬಗೆಗೆ ಗಮನ ಹರಿಸದೆ ಇಂಥ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸುತ್ತಿರುವುದು ದುರಾದೃಷ್ಟಕರ ಎಂದು ಹೇಳಿದೆ.