ಮಂಗಳೂರು: ಇತಿಹಾಸ ಪ್ರಸಿದ್ದ ಶ್ರೀ ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವದಲ್ಲಿ ಜಾತ್ರೆ ವ್ಯಾಪಾರಿಗಳು ಹೋರಾಟ ನಡೆಸಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಮರು ಏಲಂ ಮಾಡಿಸಿ ಅವಕಾಶ ಪಡೆದಿರುವುದರಿಂದ ಕೋಮುವಾದಿ ಶಕ್ತಿಗಳು ಹತಾಶಾರಾಗಿದ್ದಾರೆ.
ಸೋಲಿನ ಹತಾಶೆಯಲ್ಲಿ ಬಡ ವ್ಯಾಪಾರಿಗಳ ಅಂಗಡಿಗಳಿಗೆ ಕೇಸರಿ ಬಾವುಟ ಕಟ್ಟುತ್ತಿರುವುದು ಕೈಲಾಗದವ ಮೈ ಪರಚಿಕೊಂಡಂತೆ ಎಂದು ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂ ವ್ಯಾಪಾರಿಗಳ ಅಂಗಡಿಯಲ್ಲಿ ವ್ಯಾಪಾರ ಮಾಡಿ ಎಂದು ಕರೆ ಕೊಡುವ ವಿ.ಹೆಚ್.ಪಿ ನಾಯಕ ಶರಣ್ ಪಂಪ್ ವೆಲ್ ಮೊದಲಿಗೆ ಮುಸ್ಲಿಂ ಒಡೆತನದ ಸಿಟಿ ಸೆಂಟರ್ ಮಾಲಿನ ಕಸ ಗುಡಿಸುವ ಕೆಲಸ ಕೈಬಿಟ್ಟು ಸಿಟಿ ಸೆಂಟರ್ ಮಾಲಿನ ಹಿಂದೂ ಮಾಲಿಕರ ಮಳಿಗೆಗಳಿಗೆ ಕೇಸರಿ ಬಾವುಟ ಕಟ್ಟುವ ಧೈರ್ಯ ತೋರಿಸಲಿ ಎಂದು ಸವಾಲು ಹಾಕಿದ್ದು, ಸಂಘಪರಿವಾರವನ್ನು ಪೋಷಣೆ ಮಾಡುವ ಸಂಸ್ಥೆಗಳಾದ ಶಾರದಾ ವಿದ್ಯಾಲಯ ಮತ್ತು ನಿಟ್ಟೆ ಮೆಡಿಕಲ್ ಕಾಲೇಜಿನ ಗೇಟಿಗೆ ಕೇಸರಿ ಕಟ್ಟಲಿ ಎಂದು ಛೇಡಿಸಿದ ಅವರು ಶ್ರೀಮಂತ ಮುಸ್ಲಿಂ ವ್ಯಾಪಾರಿಗಳೊಂದಿಗೆ ವ್ಯವಹಾರ ನಡೆಸಿ ಬಡ ಜಾತ್ರೆ ಮತ್ತು ಬೀದಿ ವ್ಯಾಪಾರಿಗಳ ಮಧ್ಯೆ ಹುಳಿ ಹಿಂಡುವ ನಡವಳಿಕೆ ಅವಮಾನವೀಯತೆಯ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಮಂಗಳಾದೇವಿ ಕ್ಷೇತ್ರ ಸೇರಿದಂತೆ ಎಲ್ಲಾ ಜಾತ್ರೆ ವ್ಯಾಪಾರಿಗಳಿಗೆ ಜಿಲ್ಲಾಡಳಿತ ಸೂಕ್ತ ರಕ್ಷಣೆ ಒದಗಿಸಬೇಕು ಧರ್ಮದ ಹೆಸರಿನಲ್ಲಿ ಯಾವುದೇ ಜಾತ್ರೆ ವ್ಯಾಪಾರಿಗೆ ತೊಂದರೆ ನೀಡಿದರೆ ತೀವ್ರ ರೀತಿಯ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿ.ಕೆ ಇಮ್ತಿಯಾಝ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.